;Resize=(412,232))
ನವದೆಹಲಿ: ಕಳೆದ ತಿಂಗಳು ದೆಹಲಿಯಲ್ಲಿ ನಡೆದ ನೀಟ್ ಪರೀಕ್ಷಾ ವೈಫಲ್ಯದ ವಿರುದ್ಧದ ಪ್ರತಿಭಟನೆ ಮತ್ತು ಜಾರ್ಖಂಡ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ತನ್ನ ಆಡಳಿತದ ರಾಜ್ಯಗಳಲ್ಲಿ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಏನೆಲ್ಲಾ ಬದಲಾವಣೆ ತರಬಹುದು ಎಂಬುದರ ಬಗ್ಗೆ ಶಿಕ್ಷಣ ತಜ್ಞರ ಜತೆ ಚರ್ಚಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಇಲ್ಲಿನ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ತಮ್ಮ ರಾಜ್ಯಗಳ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಅಗತ್ಯವಿರುವ ಸುಧಾರಣೆಗಳ ಕುರಿತು ವರದಿಯನ್ನು ಸಿದ್ಧಪಡಿಸಿ 1 ತಿಂಗಳೊಳಗೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲಿಸುವಂತೆ ಖರ್ಗೆ ಹಾಗೂ ರಾಹುಲ್ ಗಾಂಧಿ ನಾಲ್ವರು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಶಿಕ್ಷಣ ತಜ್ಞರು ಮತ್ತು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಈ ವರದಿಯನ್ನು ಸಿದ್ಧಪಡಿಸಬೇಕು ಎಂದು ರಾಹುಲ್ ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಡಬ್ಲ್ಯುಸಿ ಸಭೆಯ ಆರಂಭಿಕ ಭಾಷಣದಲ್ಲಿ ಮಾತನಾಡಿದ ಖರ್ಗೆ, ‘ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರವು ಯುವಕರ ಭವಿಷ್ಯವನ್ನು ಸಂಪೂರ್ಣವಾಗಿ ಹಾಳುಮಾಡಿದೆ. ಹೊಸ ಶಾಲೆ ತೆರೆಯುವ ಬದಲು 94,000 ಶಾಲೆಗಳು ಮುಚ್ಚಲಾಗಿದೆ. ಖಾಸಗೀಕರಣದ ಸ್ಪರ್ಧೆಯಿಂದಾಗಿ ಉನ್ನತ ಶಿಕ್ಷಣ ದುಬಾರಿಯಾಗಿದ್ದು, ಸಾಮಾನ್ಯ ಕುಟುಂಬಗಳ ಕೈಗೆ ಸಿಗದಂತಾಗಿದೆ. ಜತೆಗೆ ಶೈಕ್ಷಣಿಕ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಬೆಂಬಲಿತ ವ್ಯಕ್ತಿಗಳು ವಶಪಡಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಶಿಕ್ಷಣ ಪೂರ್ಣಗೊಳಿಸಿದ ನಂತರ ಉದ್ಯೋಗ ಹುಡುಕಲು ಹೊರಡುವ ಯುವಜನರು ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಹಗರಣ ಮತ್ತು ಹುದ್ದೆಗಳ ಭರ್ತಿಯಲ್ಲಿ ವಿಳಂಬವನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಾತ್ಕಾಲಿಕ ಕ್ರಮಗಳ ಮೂಲಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಭವಿಷ್ಯದ ಸಿದ್ಧತೆಯ ದೃಷ್ಟಿಯಿಂದ, ಯುವಜನರಿಗಾಗಿ ಸ್ಪಷ್ಟ, ಸಮಗ್ರ ಮತ್ತು ಕಾಲಮಿತಿಯ ‘ಶಿಕ್ಷಣದಿಂದ ಉದ್ಯೋಗದವರೆಗಿನ ಮಾರ್ಗಸೂಚಿ’ಯನ್ನು ಸಿದ್ಧಪಡಿಸುವ ಸಮಯ ಕಾಂಗ್ರೆಸ್‌ಗೆ ಬಂದಿದೆ’ ಎಂದು ಕರೆ ನೀಡಿದರು.
ದೇಶದ ಯುವಜನರ ಸಂಕಷ್ಟದ ಸ್ಥಿತಿಗೆ ಸಿಡಬ್ಲ್ಯುಸಿ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಕಳೆದ ದಶಕದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಸಾಂಕ್ರಾಮಿಕ ರೂಪ ಪಡೆದುಕೊಂಡಿದ್ದು, 2014ರಿಂದ ಕನಿಷ್ಠ 152 ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಿದ್ದರಿಂದ ಕನಿಷ್ಠ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಇದೇ ರೀತಿಯ ಕಾರಣಗಳಿಂದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ’ ಎಂದು ಸಿಡಬ್ಲ್ಯೂಸಿ ನಿರ್ಣಯದಲ್ಲಿ ತಿಳಿಸಲಾಗಿದೆ.
‘ವಂದೇ’ 2 ಚರಣಗಳ ಮಾತ್ರ ಹಾಡಲು ಕಾಂಗ್ರೆಸ್ ನಿರ್ಧಾರ
ನವದೆಹಲಿ: ಇನ್ನು ಮುಂದೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರವೇ ಹಾಡಲಾಗುವುದು ಎಂದು ಸಿಡಬ್ಲ್ಯುಸಿ ಸಭೆ ನಿರ್ಧರಿಸಿದೆ. ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣ ಮಾತ್ರ ಹಾಡುವ ಬಗ್ಗೆ ಮಹಾತ್ಮ ಗಾಂಧೀಜಿ, ನೆಹರೂ, ರವೀಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಭಾಗಿಯಾಗಿದ್ದ 1937ರ ಸಿಡಬ್ಲ್ಯುಸಿ ಸಭೆ ನಿರ್ಧಾರ ಕೈಗೊಂಡಿತ್ತು. ಅದಕ್ಕೆ ಪಕ್ಷ ಈಗಲೂ ಬದ್ಧ. ಆ ವಿಷಯದಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದ್ದಾರೆ.
ಅಯೋಧ್ಯೆ ಹುಂಡಿ ಕಳವಿನ ವಿರುದ್ಧ ಹಳ್ಳಿಗಳಲ್ಲಿ ಚಳವಳಿ
ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿನ ಹುಂಡಿ ಕಳವು ವಿಷಯ ದೇಶದ ಜನರಲ್ಲಿ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಇದರ ವಿರುದ್ಧ ಹಳ್ಳಿಹಳ್ಳಿಗಳಲ್ಲೂ ಹೋರಾಟ ಸಂಘಟಿಸುವುದಾಗಿ ಹೇಳಿದೆ. ಇದು ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯ. ರಾಮಮಂದಿರದ ಹೆಸರಲ್ಲಿ ಜನರ ಧ್ರುವೀಕರಣಕ್ಕೆ ಯತ್ನಿಸಿದವರ ಬಣ್ಣ ಇದೀಗ ಬಯಲಾಗಿದೆ. ಈ ವಿಷಯದಲ್ಲಿ ಮೋದಿ ಮೌನ ಮುರಿಯಬೇಕು. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಿಡಬ್ಲ್ಯುಸಿ ಸಭೆ ಆಗ್ರಹಿಸಿದೆ.
800 ನಗರಗಳಲ್ಲಿ ವಿದ್ಯಾರ್ಥಿ ಕಾರ್‍ಯಕ್ರಮ, ರಾಹುಲ್ ಭಾಗಿ
ಯುವಜನತೆ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ದೇಶದ ಸುಮಾರು 800 ನಗರಗಳಲ್ಲಿ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮಗಳನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಪೈಕಿ ಕೆಲವು ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಯುವಜನರು ಮತ್ತು ವಿದ್ಯಾರ್ಥಿಗಳ ಕಳವಳಗಳನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತರುತ್ತಿರುವ ರಾಹುಲ್ ಗಾಂಧಿ ಅವರ ಈ ಅಭಿಯಾನಕ್ಕೆ ದೇಶಾದ್ಯಂತ ಅತ್ಯುತ್ತಮ ಮತ್ತು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಶ್ಲಾಘಿಸಲಾಗಿದೆ.
ಲೋಕಸಭೆ ಕ್ಷೇತ್ರ 800ಕ್ಕೆ ಹೆಚ್ಚಿಸಲು ತೀವ್ರ ವಿರೋಧ
ಲೋಕಸಭಾ ಕ್ಷೇತ್ರಗಳನ್ನು 800ಕ್ಕೇರಿಸುವ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಪ್ರಸ್ತುತ ಸದಸ್ಯ ಬಲವನ್ನು 543 ಸ್ಥಾನಗಳಲ್ಲೇ ಕಾಯ್ದಿರಿಸಬೇಕು. ಜತೆಗೆ, 2029ರ ಲೋಕಸಭಾ ಚುನಾವಣೆಗಳಿಂದಲೇ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ನಿರ್ಧರಿಸಿದೆ.