ತಮಿಳುನಾಡಿನ ಎಲ್ಲ 234 ಶಾಸಕರಿಗೂ ಪಕ್ಷಾತೀತವಾಗಿ ಒಂದು ಹೊಸ ಕಾರು, ಅದರ ನಿರ್ವಹಣೆಗೆ ಮಾಸಿಕ 75 ಸಾವಿರ ರು. ಸೇರಿ 1 ಲಕ್ಷ ರು. ಭತ್ಯೆ ನೀಡುವುದಾಗಿ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಪ್ರಕಟಿಸಿದ್ದಾರೆ.

ಚೆನ್ನೈ: ತಮಿಳುನಾಡಿನ ಎಲ್ಲ 234 ಶಾಸಕರಿಗೂ ಪಕ್ಷಾತೀತವಾಗಿ ಒಂದು ಹೊಸ ಕಾರು, ಅದರ ನಿರ್ವಹಣೆಗೆ ಮಾಸಿಕ 75 ಸಾವಿರ ರು. ಸೇರಿ 1 ಲಕ್ಷ ರು. ಭತ್ಯೆ ನೀಡುವುದಾಗಿ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಪ್ರಕಟಿಸಿದ್ದಾರೆ.

ಸಾಮಾನ್ಯವಾಗಿ ಸಚಿವರಿಗೆ, ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಗೆ, ನಿಗಮ-ಮಂಡಳಿ ಅಧ್ಯಕ್ಷರಿಗೆ ಕಾರಿನ ಸೌಲಭ್ಯವಿದೆ. ಆದರೆ ಪಕ್ಷಾತೀತವಾಗಿ ಎಲ್ಲ ಶಾಸಕರಿಗೂ ಉಚಿತವಾಗಿ ಕಾರು ನೀಡುತ್ತಿರುವುದು ಪ್ರಾಯಶಃ ದೇಶದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

ಟಿವಿಕೆ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೇ ಶಾಸಕರಿಗೆ ಈ ಕೊಡುಗೆ ಪ್ರಕಟಿಸಲಾಗಿದೆ. ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತದ ಭಾಗವಾಗಿ ಶಾಸಕರಿಗೆ ಈ ಕೊಡುಗೆ ಪ್ರಕಟಿಸಲಾಗಿದೆ.

ಕಾರಿಗೆ ಬೇಕಾದ ಇಂಧನ, ಅದರ ನಿರ್ವಹಣೆಗೆ ಮಾಸಿಕ 75 ಸಾವಿರ ರು. ನೀಡಲಾಗುತ್ತದೆ. ಜತೆಗೆ ಶಾಸಕರ ಅಧಿಕೃತ ಕೆಲಸಗಳಿಗಾಗಿ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲು 25 ಸಾವಿರ ರು. ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯ್‌, ‘ಈ ಎಲ್ಲಾ ಕೊಡುಗೆಗಳು, ಶಾಸಕರು ತಮ್ಮ ಅಧಿಕೃತ ಕೆಲಸಗಳಿಗೆ ಬೇರೆಯವರ ಮೇಲೆ ಅವಲಂಬನೆ ತಪ್ಪಿಸಲು ಮತ್ತು ಯಾವುದೇ ರಾಜೀಗೆ ಒಳಗಾಗದೆ, ಸ್ವತಂತ್ರವಾಗಿ ಮತ್ತು ನ್ಯಾಯಸಮ್ಮತ ರೀತಿಯಲ್ಲಿ, ಯಾವುದೇ ಹಣದ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತವೆ’ ಎಂದಿದ್ದಾರೆ. ಅಲ್ಲದೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತುತ ಮೊದಲ ಬಾರಿಗೆ ಆಯ್ಕೆಯಾದವರು, ಬಡತನದ ಹಿನ್ನೆಲೆಯಿಂದ ಬಂದ ಶಾಸಕರಿದ್ದಾರೆ. ಅವರಿಗೆ ಸಂಚಾರ ಬೆಂಬಲವಿಲ್ಲದಿದ್ದರೆ ಸಮರ್ಪಕ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕೆ ಈ ಯೋಜನೆ ಪ್ರಕಟಿಸಲಾಗಿದೆ ಎಂದಿದ್ದಾರೆ.

ಜೆನ್‌ಜೀ ಪರ ನಿರ್ಣಯ:

ಎಡಪಕ್ಷಗಳು ಮತ್ತು ಸಿಜೆಪಿ ಆಯೋಜಿಸುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗದಂತೆ ತಡೆಯಬೇಕು ಎಂದು ಕಾಲೇಜು ಮತ್ತು ವಿವಿಗಳಿಗೆ ಹೊರಡಿಸಿದ್ದ ಆದೇಶವನ್ನೂ ಸರ್ಕಾರ ಹಿಂದಕ್ಕೆ ಪಡೆದಿದೆ.

ಹಾಲು ಖರೀದಿ ದರ ಏರಿಕೆ:

ಈ ನಡುವೆ ಸರ್ಕಾರಿ ಸ್ವಾಮ್ಯದ ಕಂಪನಿ ಮಾರಾಟ ಮಾಡುವ ಆವಿನ್‌ ಹಾಲಿನ ಖರೀದಿ ದರವನ್ನು ಲೀ.ಗೆ 38 ರು.ನಿಂದ 41 ರು.ಗೆ ಏರಿಸಲು ಸರ್ಕಾರ ನಿರ್ಧರಿಸಿದೆ.

ವಿಮಾ ಮೊತ್ತ ಏರಿಕೆ:

ಮುಖ್ಯಮಂತ್ರಿ ಸಮಗ್ರ ಆರೋಗ್ಯ ವಿಮಾ ಯೋಜನೆಯಡಿ ವಾರ್ಷಿಕ ವಿಮಾ ರಕ್ಷಣಾ ಮೊತ್ತವನ್ನು 5 ಲಕ್ಷ ರು.ಗಳಿಂದ 25 ಲಕ್ಷ ರು.ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಏಕೆ ಉಚಿತ ಕಾರು?

- ತ.ನಾಡಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಲ್ಲಿ ಹಲವು ಬಡವರಿದ್ದಾರೆ

- ಅವರಿಗೆ ಸಂಚಾರ ಬೆಂಬಲವಿಲ್ಲದಿದ್ದರೆ ಸಮರ್ಪಕವಾಗಿ ಕೆಲಸ ಮಾಡಲು ಆಗುವುದಿಲ್ಲ

- ಅಧಿಕೃತ ಕೆಲಸಕ್ಕೆ ಬೇರೆಯವರ ಅವಲಂಬಿಸಿದರೆ ಸ್ವತಂತ್ರವಾಗಿ ಕೆಲಸ ಮಾಡಲಾಗದು

- ಹಣದ ಪ್ರತಿಫಲಾಪೇಕ್ಷೆ ಇಲ್ಲದೆ ಶಾಸಕರು ದುಡಿಯಲಿ ಎಂದು ನಿರ್ಧಾರ: ಸಿಎಂ ವಿಜಯ್‌