6 ತಿಂಗಳಲ್ಲಿ ಕೆಲಸ ಮಾಡದಿದ್ದರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಬದಲು!

Published : Sep 17, 2026, 06:50 AM IST
Congress

ಸಾರಾಂಶ

ರಾಜ್ಯದ ಎಲ್ಲಾ ನೂತನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಕಾರ್ಯವೈಖರಿಯನ್ನು ಆರು ತಿಂಗಳ ನಂತರ ಮೌಲ್ಯಮಾಪನ ಮಾಡಲಾಗುವುದು. ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲರಾದವರನ್ನು ಬದಲಿಸಿ, ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು : ರಾಜ್ಯದ ಎಲ್ಲಾ ನೂತನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಕಾರ್ಯವೈಖರಿಯನ್ನು ಆರು ತಿಂಗಳ ನಂತರ ಮೌಲ್ಯಮಾಪನ ಮಾಡಲಾಗುವುದು. ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲರಾದವರನ್ನು ಬದಲಿಸಿ, ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ಬುಧವಾರ ಸಭೆ ನಡೆಸಿ ಮಾತನಾಡಿದರು.

ಈ ವೇಳೆ ಪಕ್ಷ ಸಂಘಟನೆ, ಎಸ್‌ಐಆರ್‌ ಪ್ರಕ್ರಿಯೆ, ಮುಂದಿನ ಚುನಾವಣೆ ಸಿದ್ಧತೆ ಸೇರಿ ಹಲವು ವಿಚಾರಗಳ ಬಗ್ಗೆ ನೂತನ ಅಧ್ಯಕ್ಷರಿಗೆ ನಿರ್ದೇಶನಗಳನ್ನು ನೀಡಿದ್ದಾರೆ.

ಪಕ್ಷದ ಹುದ್ದೆ ವಹಿಸಿಕೊಂಡ ಮೇಲೆ ನಾಯಕತ್ವಕ್ಕೆ ಹೊಣೆಗಾರಿಕೆ ಹೊಂದಿರಬೇಕು. ರಾಜ್ಯದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ನಿಮಗೆ ಈ ಜವಾಬ್ದಾರಿ ನೀಡಲಾಗಿದೆ. 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಶ್ರಮವಹಿಸಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಆರು ತಿಂಗಳ ಬಳಿಕ ಮೌಲ್ಯಮಾಪನ ಮಾಡಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದವರನ್ನು ಬದಲಿಸಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಜಿಲ್ಲಾ ಘಟಕಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಶೀಘ್ರ ಭರ್ತಿ ಮಾಡಬೇಕು. ಸ್ಥಳೀಯ ಮಟ್ಟದಲ್ಲಿ ಪಕ್ಷ ಬಿಟ್ಟು ಹೋದವರನ್ನು ಪಕ್ಷಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಬೇಕು. ಯಾವುದೇ ಕ್ಷಣದಲ್ಲಾದರೂ ಸ್ಥಳೀಯ ಸಂಸ್ಥೆಗಳು, ಜಿಪಂ, ತಾಪಂ, ಹಾಗೂ ಗ್ರಾಮ ಪಂಚಾಯ್ತಿಗಳ ಚುನಾವಣೆ ಘೋಷಣೆ ಆಗಲಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿಮ್ಮ ಜವಾಬ್ದಾರಿ ಮುಖ್ಯ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತಮವಾಗಿ ಕೆಲಸ ಮಾಡಿದವರಿಗೆಷ್ಟೇ ಅವಕಾಶ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್‌, ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರನ್ನು ಮಾತ್ರ ಜವಾಬ್ದಾರಿಯಲ್ಲಿ ಮುಂದುವರಿಸಲಾಗುವುದು. ಉಳಿದವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ಇನ್ನು ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ನಮ್ಮ ವಿರುದ್ಧ ಸಿಬಿಐ, ಇ.ಡಿ, ಐಟಿ ಹಾಗೂ ಚುನಾವಣಾ ಆಯೋಗದ ಜತೆ ಸೇರಿ ಬಿಜೆಪಿ ಹೋರಾಡುತ್ತಿದೆ. ಕರ್ನಾಟಕದಲ್ಲಿ ಶೇ.23ರಷ್ಟು ಮತಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ. ಅದು ನೈಜವಾಗಿದ್ದರೆ ಯಾರಿಗೂ ಸಮಸ್ಯೆ ಇಲ್ಲ.

ಆದರೆ‌, ಚುನಾವಣಾ ಆಯೋಗ ಕಳೆದ 3-4 ವರ್ಷಗಳಲ್ಲಿ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಅನುಮಾನಗಳು ಬರುತ್ತಿವೆ. ವಿರೋಧ ಪಕ್ಷಗಳ ಯಾವುದೇ ಪ್ರಶ್ನೆಗೆ ಆಯೋಗ ಸರಿಯಾದ ಉತ್ತರ ನೀಡುವುದಿಲ್ಲ. ಹೀಗಾಗಿ, ಹೆಸರು ತೆಗೆದು ಹಾಕಿರುವುದು ನೈಜತೆಯಿಂದ ಕೂಡಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ:

ರಾಜ್ಯದಲ್ಲಾಗಲಿ, ರಾಷ್ಟ್ರಮಟ್ಟದಲ್ಲಾಗಲಿ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ನಾವು ಸಹಿಸುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಈ ಪ್ರಕ್ರಿಯೆ ಹೇಗೆ ಸಾಗುತ್ತಿದೆ ಎಂದು ಪಕ್ಷದ ಹಿರಿಯ ನಾಯಕರು ಹಾಗೂ ಸಚಿವರ ಜತೆ ಚರ್ಚೆ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚಿಸುತ್ತೇವೆ ಎಂದು ವೇಣುಗೋಪಾಲ್‌ ತಿಳಿಸಿದರು.

ವಂದೇ ಮಾತರಂ ಎರಡು ಚರಣಕ್ಕೆ ಸೀಮಿತಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ’ ಎಂದಷ್ಟೇ ಹೇಳಿದರು.

ಜಿಲ್ಲಾಧ್ಯಕ್ಷರ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಉಪಸ್ಥಿತರಿದ್ದರು.

ವೇಣುಗೋಪಾಲ್‌ ಸೂಚನೆ ಏನು?

- ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಸುರ್ಜೇವಾಲ ಚರ್ಚೆ

- 6 ತಿಂಗಳಲ್ಲಿ ನಿಮ್ಮ ಸಾಧನೆ ತೋರಿ, ಉತ್ತಮವಾಗಿ ಕಾರ್‍ಯನಿರ್ವಹಿಸದಿದ್ದರೆ ಬೇರೆಯವರಿಗೆ ಅವಕಾಶ

- ಸಾಮರ್ಥ್ಯ ಸಾಬೀತಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಿಗೆ 6 ತಿಂಗಳ ಡೆಡ್‌ಲೈನ್‌ ವಿಧಿಸಿದ ಪಕ್ಷದ ವರಿಷ್ಠರು

- ತಾಲೂಕು, ಜಿಲ್ಲಾ ಪಂಚಾಯ್ತಿಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿಮ್ಮ ಜವಾಬ್ದಾರಿ ಮುಖ್ಯ

- 2028, 29ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭ ಮಾಡುವಂತೆ ಎಲ್ಲರಿಗೂ ನಿರ್ದೇಶನ

- ಎಸ್ಐಆರ್‌ ಪ್ರಕ್ರಿಯೆ, ತಳಮಟ್ಟದಲ್ಲಿ ಪಕ್ಷ ಸಂಘಟನೆಯ ಮೇಲೂ ಕಣ್ಣಿಡುವಂತೆ ಖಡಕ್‌ ಸೂಚನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಡಿಕೆ-ಬಿಕೆ ಮಧ್ಯೆ ‘ಬಿಗು’ಮಾನ - ಇಬ್ಬರ ಮಧ್ಯೆ ಬಿರುಕು ಸರಿಪಡಿಸಲು ಹೈಕಮಾಂಡ್‌ ಎಂಟ್ರಿ
ಗ್ರಾಪಂಗಳಲ್ಲೂ ಹೊಸ ನಾಯಕರು ಬೆಳೀಬೇಕು : ಡಿಕೆ