;Resize=(412,232))
ಬೆಂಗಳೂರು : ತಮ್ಮ ನೇತೃತ್ವದ ಸರ್ಕಾರಕ್ಕೆ 100 ದಿನ ತುಂಬಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಆಹ್ವಾನಿಸಿಲ್ಲ ಎನ್ನಲಾದ ಕಾರಣಕ್ಕೆ ಉಭಯ ನಾಯಕರ ನಡುವೆ ಏರ್ಪಟ್ಟಿದೆ ಎನ್ನಲಾದ ಬಿರುಕು ಶಮನಗೊಳಿಸಲು ಹೈಕಮಾಂಡ್ ನಾಯಕರು ಪ್ರಯತ್ನ ನಡೆಸಿದ್ದಾರೆ.
ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿ ಅವರು, ಆಹ್ವಾನಿಸಿಲ್ಲ ಎಂದು ನಿಮಗೆ ಹೇಳಿದವರು ಯಾರು? ವೇದಿಕೆ ಮೇಲೆ ನಮ್ಮದೇ ಆದ ಶಿಷ್ಟಾಚಾರಗಳು ಇರುತ್ತವೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಜೊತೆ ಸೇರಿಕೊಂಡೇ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ಹರಿಪ್ರಸಾದ್ ಅವರು ಬಿ.ಡಿ.ಜತ್ತಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ತಮಗೆ ಆಹ್ವಾನ ಇತ್ತಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ.
ಈ ನಡುವೆ ಹರಿಪ್ರಸಾದ್ ಅವರು ಸರ್ಕಾರಕ್ಕೆ 100 ದಿನ ತುಂಬಿದ ಕುರಿತು ‘ಕ್ಯಾಪ್ಟನ್ ಸಾಮರ್ಥ್ಯ ಕೆಲವು ಓವರ್‌ಗಳಲ್ಲೇ ತಿಳಿಯುವುದಿಲ್ಲ, ಸಂಪೂರ್ಣ ಮ್ಯಾಚ್ ಮುಗಿದ ಬಳಿಕ ಗೊತ್ತಾಗುತ್ತದೆ’ ಎಂದು ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಇದು ಉಭಯ ನಾಯಕರ ನಡುವೆ ಬಿರುಕಿನ ಕುರಿತು ಕೇಳಿಬರುತ್ತಿರುವ ಮಾತುಗಳಿಗೆ ಇಂಬು ನೀಡುವಂತಿತ್ತು. ಅಲ್ಲದೆ, ಅವರ ಈ ಹೇಳಿಕೆ ಹೈಕಮಾಂಡ್ ಮಟ್ಟಕ್ಕೂ ತಲುಪಿದೆ. ಈ ಮಧ್ಯೆ, ರಾಜ್ಯಕ್ಕೆ ಆಗಮಿಸಿರುವ ಹೈಕಮಾಂಡ್ ನಾಯಕರು ಇಬ್ಬರ ನಡುವೆ ಏರ್ಪಟ್ಟಿದೆ ಎನ್ನಲಾದ ವೈಮನಸ್ಯ ಸರಿಪಡಿಸಿ ಸರ್ಕಾರ ಮತ್ತು ಪಕ್ಷ ಸಮನ್ವಯದಿಂದ ಸಾಗುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಇಡೀ ದಿನ ಪಕ್ಷದ ಜಿಲ್ಲಾಧ್ಯಕ್ಷರ ಸಭೆ ಹಾಗೂ ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯತೆ ಕುರಿತ ವಿಚಾರಗಳ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅವರ ನಡುವೆ ಉದ್ಭವಿಸಿದೆ ಎನ್ನಲಾಗುತ್ತಿರುವ ಬಿರುಕು ಸರಿಪಡಿಸಲೂ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮಸ್ಯೆ ಏನು?
- ಕ್ಯಾಪ್ಟನ್ ಸಾಮರ್ಥ್ಯ ಕೆಲವು ಓವರ್‌ಗಳಲ್ಲೇ ತಿಳಿಯುವುದಿಲ್ಲ ಎಂದು ನುಡಿದಿದ್ದ ಬಿ.ಕೆ. ಹರಿಪ್ರಸಾದ್
- ಇದು ಡಿಕೆಶಿ ಉದ್ದೇಶಿಸಿ ನೀಡಿ ಹೇಳಿಕೆ. ಉಭಯ ನಾಯಕರ ನಡುವೆ ಬಿರುಕು ಎಂಬ ಚರ್ಚೆಗೆ ಗ್ರಾಸ
- ಹೈಕಮಾಂಡ್ ಮಟ್ಟಕ್ಕೂ ತಲುಪಿದ ಈ ಹೇಳಿಕೆ ಸಮರದ ವಿಚಾರ. ಹೀಗಾಗಿ ಈಗ ವರಿಷ್ಠರ ಎಂಟ್ರಿ
- ವೈಮನಸ್ಯ ಸರಿಪಡಿಸಿ ಸರ್ಕಾರ ಮತ್ತು ಪಕ್ಷ ಸಮನ್ವಯದಿಂದ ಸಾಗುವಂತೆ ಹೈಕಮಾಂಡ್ ಸಲಹೆ
- ದಿಲ್ಲಿಯಿಂದ ಬಂದ ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲರಿಂದ ಬೇಗುದಿ ಶಮನ ಯತ್ನ