ರಾಜ್ಯದ 956 ಸರ್ಕಾರಿ ಶಾಲೇಲಿ ‘ಹಣಕಾಸು ಶಿಕ್ಷಣ’

Published : Sep 16, 2026, 10:46 AM IST
School

ಸಾರಾಂಶ

ಕರ್ನಾಟಕ ಪಬ್ಲಿಕ್‌ ಶಾಲೆಗಳು(ಕೆಪಿಎಸ್‌) ಸೇರಿ ಒಟ್ಟು 956 ಶಾಲೆಗಳಲ್ಲಿನ 8 ರಿಂದ 12ನೇ ತರಗತಿ ವರೆಗಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿಂಗ್‌, ಡಿಜಿಟಲ್‌ ವ್ಯವಹಾರ, ಷೇರು ಮಾರುಕಟ್ಟೆ ಕಾರ್ಯವೈಖರಿ, ಹಣಕಾಸು ವಂಚನೆ ತಡೆ ಸೇರಿ ‘ಹಣಕಾಸು ಸಾಕ್ಷರತಾ ಶಿಕ್ಷಣ’ ದೊರೆಯಲಿದೆ.

ಬೆಂಗಳೂರು : ಕರ್ನಾಟಕ ಪಬ್ಲಿಕ್‌ ಶಾಲೆಗಳು(ಕೆಪಿಎಸ್‌) ಸೇರಿ ಒಟ್ಟು 956 ಶಾಲೆಗಳಲ್ಲಿನ 8 ರಿಂದ 12ನೇ ತರಗತಿ ವರೆಗಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿಂಗ್‌, ಡಿಜಿಟಲ್‌ ವ್ಯವಹಾರ, ಷೇರು ಮಾರುಕಟ್ಟೆ ಕಾರ್ಯವೈಖರಿ, ಹಣಕಾಸು ವಂಚನೆ ತಡೆ ಸೇರಿ ‘ಹಣಕಾಸು ಸಾಕ್ಷರತಾ ಶಿಕ್ಷಣ’ ದೊರೆಯಲಿದೆ.

ಈ ಸಂಬಂಧ ರಾಜ್ಯ ಯೋಜನಾ ನಿರ್ದೇಶನಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 307 ಕೆಪಿಎಸ್‌ ಶಾಲೆಗಳು ಹಾಗೂ ಏಷ್ಯನ್‌ ಡೆವಲಪ್‌ಮೆಂಟ್ ಬ್ಯಾಂಕ್‌ (ಎಡಿಬಿ) ನೆರವಿನಿಂದ ಅಭಿವೃದ್ಧಿಪಡಿಸಲಾಗಿರುವ ಶಾಲೆಗಳು ಸೇರಿ ಒಟ್ಟು 956 ಶಾಲೆಗಳಲ್ಲಿ ಮಕ್ಕಳಿಗೆ ಹಣಕಾಸು ಸಾಕ್ಷರತಾ ಶಿಕ್ಷಣ ನೀಡಲು ಆದೇಶಿಸಿದೆ.

ವಿದ್ಯಾರ್ಥಿಗಳಿಗೆ ಪ್ರೌಢಾವಸ್ಥೆಯಲ್ಲೇ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಬ್ಯಾಂಕಿಂಗ್‌ ವ್ಯವಸ್ಥೆಯ ಅರಿವು, ಉಳಿತಾಯ, ಬಂಡವಾಳ ಸೇರಿ ಸೂಕ್ತ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯದ ಕುರಿತು ಪ್ರಾಯೋಗಿಕ ಜೀವನ ಕೌಶಲ್ಯ ಬೆಳೆಸುವ ಪರಿಕಲ್ಪನೆಯೊಂದಿಗೆ ಹಣಕಾಸು ವ್ಯವಹಾರಗಳ ಕುರಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ 2026-27ನೇ ಸಾಲಿನ ಇನ್ನೋವೇಷನ್‌ ಪ್ರಾಜೆಕ್ಟ್‌ ರೆಕ್ಯುರಿಂಗ್‌(ಪಿಎಬಿ) ಯೋಜನೆ ಅಡಿ ರಾಜ್ಯದ ಒಂದಷ್ಟು ಶಾಲೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಶಾಲೆಗೆ 5000 ರು. ಘಟಕ ವೆಚ್ಚದಂತೆ ಒಟ್ಟು 47.80 ಲಕ್ಷ ರು. ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಬಿಇಒಗಳು ಕ್ರಮ ವಹಿಸಬೇಕೆಂದು ರಾಜ್ಯ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

ಹಣಕಾಸು ಸಾಕ್ಷರತೆಯಲ್ಲಿ ಏನೇನು ಕಲಿಕೆ?:

ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ನ ಪರಿಕಲ್ಪನೆಗಳು, ಡಿಜಿಟಲ್‌ ಹಣಕಾಸು ವ್ಯವಹಾರಗಳು, ಬಜೆಟ್‌ ತಯಾರಿಕೆ, ವೆಚ್ಚ, ಉಳಿತಾಯದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತದೆ. ವೈಯಕ್ತಿಕ ಹಣಕಾಸು ನಿರ್ವಹಿಸುವ ಹಾಗೂ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸುವುದು, ಹಣಕಾಸು ವಂಚನೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಇವುಗಳ ಅನುಷ್ಠಾನಕ್ಕಾಗಿ ಈ ಯೋಜನೆ ವ್ಯಾಪ್ತಿಯ ಪ್ರತಿ ಶಾಲೆಯಲ್ಲೂ ಪ್ರತಿ ತಿಂಗಳಿಗೆ ಒಂದು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಡ್ಡಾಯವಾಗಿ ನಡೆಸಬೇಕು. ಶಾಲೆಗಳಿಗೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಚಾರ್ಟರ್ಡ್‌ ಅಕೌಂಟೆಂಟ್‌ಗಳು, ಹಣಕಾಸು ಸಲಹೆಗಾರರು, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರಗಳ ಪರಿಣಿತರೊಂದಿಗೆ ಸಮನ್ವಯ ಸಾಧಿಸಿ ಉಳಿತಾಯದ ಅಭ್ಯಾಸ, ಡಿಜಿಟಲ್‌ ಪಾವತಿ, ಜವಾಬ್ದಾರಿಯುತ ಸಾಲ ಪಡೆಯುವಿಕೆ, ವಿಮೆ, ತೆರಿಗೆ, ಹೂಡಿಕೆ, ಉಳಿತಾಯದ ಮೂಲಭೂತ ಅಂಶಗಳು, ಹಣಕಾಸು ವಂಚನೆ ತಡೆ ಕುರಿತು ಸಂವಾದದ ಮೂಲಕ ಅರಿವು ಮೂಡಿಸಬೇಕೆಂದು ತಿಳಿಸಲಾಗಿದೆ.

ಬಿಎಸ್‌ಇಗೆ ಶೈಕ್ಷಣಿಕ ಭೇಟಿ:

ಬಂಡವಾಳ ಮಾರುಕಟ್ಟೆ ಕುರಿತು ಅರಿವು ಈ ಕಾರ್ಯಕ್ರಮದ ಪ್ರಮುಖ ಭಾಗಿದ್ದು, ವಿದ್ಯಾರ್ಥಿಗಳಿಗೆ ಷೇರುಗಳು, ವಹಿವಾಟು ಹಾಗೂ ಹೂಡಿಕೆ ಕುರಿತು ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಬೇಕು. ಸಾಧ್ಯವಾದಲ್ಲಿ ಬೆಂಗಳೂರು ಷೇರು ವಿನಿಮಯ ಕೇಂದ್ರ ಅಥವಾ ಸಮಾನ ಹಣಕಾಸು ಮಾರುಕಟ್ಟೆ ಸಂಸ್ಥೆಗಳಿಗೆ ಶೈಕ್ಷಣಿಕ ಭೇಟಿ ಏರ್ಪಡಿಸಿ ಷೇರು ಮಾರುಕಟ್ಟೆ ಕಾರ್ಯವೈಖರಿ ಹಾಗೂ ಹಣಕಾಸು ವ್ಯವಸ್ಥೆಗಳ ಕುರಿತು ಪ್ರಾಯೋಗಿಕ ತಿಳಿವಳಿಕೆ ನೀಡಬೇಕೆಂದು ಸೂಚಿಸಲಾಗಿದೆ.

ಜತೆಗೆ ಶಾಲೆಗಳಲ್ಲೇ ವಿದ್ಯಾರ್ಥಿಗಳಿಗೆ ಬಜೆಟ್‌ ತಯಾರಿ ಅಭ್ಯಾಸಗಳು, ಸರಳ ಬಡ್ಡಿ ಲೆಕ್ಕಾಚಾರಗಳು, ಉಳಿತಾಯ ಕುರಿತು ಜಾಗೃತಿ ಚಟುವಟಿಕೆ, ಪೋಸ್ಟರ್‌ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಬೇಕು. ಯುಪಿಐ, ಎಟಿಎಂ ಬಳಕೆಯ ಪ್ರಾಯೋಗಿಕ ಪ್ರದರ್ಶನಗಳು, ಅಣಕು ಬ್ಯಾಂಕಿಂಗ್‌ ಚಟುವಟಿಕೆಗಳು, ಬ್ಯಾಂಕುಗಳಿಗೆ ಶೈಕ್ಷಣಿಕ ಭೇಟಿಗಳನ್ನು ಆಯೋಜಿಸಬೇಕು. ಉದ್ಯಮಶೀಲತೆ ಮತ್ತು ಸ್ಟಾರ್ಟ್‌ಅಪ್‌ ಪರಿಚಯ ಕಾರ್ಯಕ್ರಮಗಳನ್ನು ಶಿಕ್ಷಕರು ರೂಪಿಸಿ ಅನುಷ್ಠಾನಗೊಳಿಸಬೇಕು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹಣಕಾಸು ಸಾಕ್ಷರತಾ ಶಿಕ್ಷಣದ ಕುರಿತು ಜ್ಞಾನ ಪರೀಕ್ಷೆ ನಡೆಸಿ ಫಲಿತಾಂಶವನ್ನು ಬ್ಲಾಕ್‌ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಜ್ವಲ್ ಪೆನ್‌ಡ್ರೈವ್‌ ಪ್ರಸ್ತಾಪಿಸಿ ನನ್ನ ಬಾಯಿ ಮುಚ್ಚಿಸಲಾಗಲ್ಲ: ಎಚ್ಡಿಕೆ
ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡಿದ ₹3383 ಕೋಟಿ ಒಡೆಯ ಶಾಸಕ!