ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಜನಪ್ರತಿನಿಧಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ, ₹3,383 ಕೋಟಿ ಒಡೆಯ ಪರಾಗ್ ಶಾ, ತಮ್ಮ ಐಷಾರಾಮಿ ಕಾರು, ಬಿಗಿ ಭದ್ರತೆ ಬದಿಗಿಟ್ಟು, ಸಾಮಾನ್ಯ ಭಿಕ್ಷುಕನ ವೇಷ ಧರಿಸಿ ಮುಂಬೈನ ಬೀದಿಗಳಲ್ಲಿ ಒಂದು ದಿನ ಭಿಕ್ಷೆ ಬೇಡಿದ ಅಚ್ಚರಿಯ ಪ್ರಸಂಗ ನಡೆದಿದೆ.
ಮುಂಬೈ: ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಜನಪ್ರತಿನಿಧಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ, ₹3,383 ಕೋಟಿ ಒಡೆಯ ಪರಾಗ್ ಶಾ, ತಮ್ಮ ಐಷಾರಾಮಿ ಕಾರು, ಬಿಗಿ ಭದ್ರತೆ ಬದಿಗಿಟ್ಟು, ಸಾಮಾನ್ಯ ಭಿಕ್ಷುಕನ ವೇಷ ಧರಿಸಿ ಮುಂಬೈನ ಬೀದಿಗಳಲ್ಲಿ ಒಂದು ದಿನ ಭಿಕ್ಷೆ ಬೇಡಿದ ಅಚ್ಚರಿಯ ಪ್ರಸಂಗ ನಡೆದಿದೆ.
ಜೈನ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗುವ ವಿಶೇಷ ಮಾಸದ ಅಂಗವಾಗಿ ತಮ್ಮ ಆಧ್ಯಾತ್ಮಿಕ ಗುರುಗಳಾದ ನಮ್ರಮುನಿ ಮಹಾರಾಜ್ ಸಲಹೆಯಂತೆ ಅವರು ಈ ಕಾರ್ಯ ಕೈಗೊಂಡಿದ್ದಾರೆ
ಗುರುಗಳ ಮಾತಿನಂತೆ ಯಾರೂ ಗುರುತಿಸದಂತೆ ಮೇಕಪ್
ಗುರುಗಳ ಮಾತಿನಂತೆ ಯಾರೂ ಗುರುತಿಸದಂತೆ ಮೇಕಪ್ ಮಾಡಿಕೊಂಡ ಘಾಟ್‌ಕೋಪರ್ (ಪೂರ್ವ) ಕ್ಷೇತ್ರದ ಶಾಸಕ ಪರಾಗ್ ಶಾ, ಭದ್ರತಾ ಸಿಬ್ಬಂದಿ ಹಾಗೂ ವಾಹನ ತ್ಯಜಿಸಿ ಗಂಟೆಗಳ ಕಾಲ ರಸ್ತೆಗಳಲ್ಲಿ ಭಿಕ್ಷೆ ಬೇಡಿದ್ದಾರೆ. ರಸ್ತೆ ಬದಿಯಲ್ಲೇ ಕುಳಿತು, ಭಿಕ್ಷೆಯಾಗಿ ಸಿಕ್ಕ ಆಹಾರವನ್ನೇ ಸೇವಿಸಿದ್ದಾರೆ.
ಬಳಿಕ ಭಿಕ್ಷುಕನ ವೇಷ ತೊಟ್ಟ ಅವಧಿಯ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಶಾ, ‘ನಾವು ಅಧಿಕಾರದಲ್ಲಿದ್ದಾಗ ಸಿಗುವ ಗೌರವ, ನಮ್ಮನ್ನು ಭೇಟಿ ಮಾಡಲು ಸಾಲುಗಟ್ಟಿ ನಿಲ್ಲುವ ಜನ- ಅದೇ ಜನರ ಬಳಿಗೆ ನಾವು ಸಾಮಾನ್ಯರಾಗಿ ಹೋದಾಗ ಅವರೇ ನಮ್ಮ ಮೇಲೆ ನಿಲ್ಲುತ್ತಾರೆ. ಇದೇ ಜೀವನದ ಕಟು ವಾಸ್ತವ. ಈ ವಿಶಿಷ್ಟ ಅನುಭವ ತಮಗೆ ‘ಜೀವನದ ನೈಜ ಸತ್ಯ’ವನ್ನು ದರ್ಶನ ಮಾಡಿಸಿದೆ’ ಎಂದು ಹೇಳಿದ್ದಾರೆ. ಬಳಿಕ ಮೇಕಪ್ ತೆಗೆದು ಶಾಸಕರಾಗಿ ಅದೇ ಸ್ಥಳಗಳಿಗೆ ಮರಳಿದ ಅವರು, ಜನರನ್ನು ಮಾತನಾಡಿಸಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದ್ದಾರೆ.
ಜೊತೆಗೆ, ಮುಂಬೈ ನಗರದ ಜನರ ಉದಾರ ಗುಣವನ್ನು ಶ್ಲಾಘಿಸಿದ್ದಾರೆ. ‘ಭಿಕ್ಷೆ ಬೇಡಲು ಹೋದಾಗ, ಒಬ್ಬ ವ್ಯಕ್ತಿ ನನಗೆ ಹೋಗು ಬಾಬಾ, ಊಟ ಮಾಡು ಎಂದು ₹20 ನೀಡಿದರು. ಸಮೋಸಾ ಮಾರುವ ಬಡ ವ್ಯಾಪಾರಿಯೊಬ್ಬರ ಬಳಿ ಹೋಗಿ ನನ್ನ ಬಳಿ ಹಣವಿಲ್ಲ ಎಂದಾಗ, ಆತ ಮುಖ ಗಂಟಿಕ್ಕದೆ ನಗುಮುಖದಿಂದಲೇ ಸಮೋಸಾ ನೀಡಿದ. ಮುಂಬೈನ ಜನ ಯಾವಾಗಲೂ ಪರಸ್ಪರ ಸಹಾಯ ಮಾಡಲು ಸಿದ್ಧರಿರುತ್ತಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಅವರು ಸ್ಮರಿಸಿದರು.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರಾಗ್ ₹3,383 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮೂಲದ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಏಕೆ ಭಿಕ್ಷುಕನ ವೇಷ?
- ಜೈನ ಧರ್ಮದಲ್ಲಿ ಜೀವನದ ಎಲ್ಲ ಅಂಶಗಳ ಅರಿವಿರಬೇಕು ಎಂಬ ಪದ್ಧತಿ
- ಸುಖವಷ್ಟೇ ಅಲ್ಲ, ಬಡತನ-ಕಷ್ಟದ ಅರಿವೂ ಇರಬೇಕು ಎಂಬ ಪದ್ಧತಿ ಇದೆ
- ಹೀಗಾಗಿ ಇದರ ಅನುಭವ ಪಡೆಯಲು ಶಾಸಕ ಪರಾಗ್ ಶಾ ಭಿಕ್ಷುಕನ ವೇಷ
- ವಾಹನ ತ್ಯಜಿಸಿ ಕೆಲಕಾಲ ರಸ್ತೆಯಲ್ಲಿ ಭಿಕ್ಷೆ ಬೇಡಿ ಸಿಕ್ಕ ಆಹಾರ ಸೇವನೆ
- ಈ ಅನುಭವ ಜೀವನದ ನೈಜ ಸತ್ಯವನ್ನು ದರ್ಶನ ಮಾಡಿಸಿದೆ: ಪರಾಗ್

