;Resize=(412,232))
ಬೆಂಗಳೂರು : ಪ್ರತಿ ಗ್ರಾಪಂಗಳಲ್ಲೂ ಹೊಸ ನಾಯಕರನ್ನು ಬೆಳೆಸಬೇಕು ಎಂಬುದು ನಮ್ಮ ಗುರಿ. ಅದಕ್ಕಾಗಿಯೇ 10000 ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಯಕನಾದವನಿಗೆ ಪ್ರತಿಯೊಂದರಲ್ಲೂ ಅಡಚಣೆಗಳು ಎದುರಾಗುತ್ತವೆ. ಏಳನೇ ತರಗತಿಯ ಶಾಲಾ ಚುನಾವಣೆ, ಕಾಲೇಜು ಚುನಾವಣೆಗಳಲ್ಲೂ ನನಗೆ ಹಲವು ಅಡೆತಡೆಗಳು ಎದುರಾದವು. ನಂತರ ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಯ ಟಿಕೆಟ್ ತಪ್ಪಿಸಲಾಯಿತು. ಬಳಿಕ ದೇವೇಗೌಡ ಅವರ ವಿರುದ್ಧ ಸ್ಪರ್ಧಿಸುವ ಅವಕಾಶ ದೊರೆಯಿತು, ಆ ಚುನಾವಣೆಯಲ್ಲಿ ಸೋತೆ, ನಂತರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡೆ. ನಾಯಕನಾದವನಿಗೆ ಹಲವು ತೊಡಕುಗಳು ಎದುರಾಗುತ್ತವೆ. ಅದನ್ನು ಎದುರಿಸಿ ಮುಂದುವರಿಯಬೇಕು. ಹಾಗೆ ಎದುರಿಸಿದ್ದಕ್ಕೆ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಯುವಜನರಿಗೆ ತಿಳಿದಿರಬೇಕು. ಅದಕ್ಕಾಗಿ ಪ್ರತಿ ಕಾಲೇಜಿನಲ್ಲೂ ಶಿಸ್ತು ಬದ್ಧವಾಗಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಬೇಕೆಂದು ಘೋಷಿಸಲಾಗಿದೆ. ಪ್ರತಿಯೊಬ್ಬರಿಗೂ ನಾಯಕತ್ವದ ಅವಕಾಶ ದೊರೆಯಬೇಕು. ಯುವ ಪೀಳಿಗೆಯಲ್ಲಿ ಹೊಸ ಬೆಳವಣಿಗೆಗಳು ಕಾಣುತ್ತಿದ್ದೇವೆ. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ ಎಂದು ತಿಳಿಸಿದರು.
ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರವಾಗುತ್ತದೆ. ಅದೇ ಜನರಿಗೆ ಸರ್ಕಾರ ಹೆದರಿದರೆ ಅದು ಪ್ರಜಾಪ್ರಭುತ್ವವಾಗುತ್ತದೆ. ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜೆಗಳೇ ಇಲ್ಲಿ ಪ್ರಭುಗಳು. ಬಸವಣ್ಣ ಅವರ ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಮೂಲ. ಜಾತಿ, ಲಿಂಗ ತಾರತಮ್ಯಗಳಿಲ್ಲದೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು. ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ನಾಯಕರನ್ನು ಆಯ್ಕೆ ಮಾಡುವುದು ಮಾತ್ರ ಪ್ರಜಾಪ್ರಭುತ್ವವಲ್ಲ. ಘನತೆ, ಗೌರವ ಮತ್ತು ಬದುಕುವ ಹಕ್ಕು ನೀಡುವುದು ನೀಜವಾದ ಪ್ರಜಾಪ್ರಭುತ್ವ ಎಂದರು.
ಪ್ರತಿ ತಾಲೂಕಿನಲ್ಲೂ ಜನರಿಗೆ ಮಾರ್ಗದರ್ಶನ ನೀಡಲು ಕಾನೂನು ತಂಡ ಅಗತ್ಯ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದಕ್ಕಾಗಿಯೇ ಪಕ್ಷದಿಂದ ಲೀಗಲ್ ಬ್ಯಾಂಕ್ ತೆರೆಯಲು ಚಿಂತಿಸಲಾಗಿದೆ. ಎಸ್‌ಐಆರ್‌ನಿಂದ ಒಂದು ಕೋಟಿ ಜನ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 47 ಲಕ್ಷ ಜನರಿಗೆ ಕಾಯಂ ನಿವಾಸ ಪತ್ರ ಮತ್ತು ಆದಾಯ ಪತ್ರ ಒದಗಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಿವಕುಮಾರ್ ವಿವರಿಸಿದರು.
ಬಡವರು, ತುಳಿತಕೊಳ್ಳಗಾದವರ ಪರವಾಗಿ ಕೆಲಸ ಮಾಡಲಾಗುತ್ತಿದೆ. ಅವರ ಆಸ್ತಿ ಹಕ್ಕನ್ನು ಸರಿಯಾಗಿ ನೀಡಬೇಕೆಂದು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಲಾಗುತ್ತಿದೆ. ಅದರ ಜತೆಗೆ 10-15 ಲಕ್ಷ ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸವನ್ನು ಮಾಡುತ್ತೇವೆ ಎಂದು ಘೋಷಿಸಿದರು.
ಸಚಿವರಾದ ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ರಿಜ್ವಾನ್ ಅರ್ಷದ್, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಇತರರಿದ್ದರು.
ಭಾರತದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಬ್ರಿಟೀಷರ ವಿರುದ್ಧ ಹೋರಾಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ನೀಡಿದ್ದು ಕಾಂಗ್ರೆಸ್. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಾಂಗ್ರೆಸ್‌ನ ಕೊಡುಗೆ. ಪ್ರಜಾಪ್ರಭುತ್ವದ ಮೇಲೆ ಬದ್ಧತೆ ಇರುವವರು ಮಾತ್ರ ಧೈರ್ಯವಾಗಿ ಮಾತನಾಡಲು ಸಾಧ್ಯ ಎಂದು ಹೇಳಿದರು.
ಮೀಸಲಾತಿ ಬಗ್ಗೆ ಅಸಂಬದ್ಧ ಪ್ರಶ್ನೆ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣಾ ವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸುತ್ತಿದೆ. ಆಮೂಲಕ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಯತ್ನಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ಪರಿಣಾಮ ಸಮಾಜದ ಕೆಳಸ್ತದಲ್ಲಿರುವವರ ಮೇಲೆ ಬೀರುತ್ತದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಇದರಿಂದ ತೊಂದರೆಯಾಗುತ್ತದೆ. ಇತ್ತೀಚೆಗೆ ಅಹಿಂದ ವರ್ಗಕ್ಕೆ ಏತಕ್ಕಾಗಿ ರಕ್ಷಣೆ ನೀಡಬೇಕು ಎಂದು ಚಕಾರ ಎತ್ತಲಾಗುತ್ತಿದೆ. ಮೀಸಲಾತಿ ಏಕೆ ಎಂಬ ಅಸಂಬದ್ಧ ಪ್ರಶ್ನೆ ಕೇಳಲಾಗುತ್ತಿದೆ. ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾದವರನ್ನು ನಾವು ಮೇಲತ್ತಬೇಕು ಎಂದು ಡಾ.ಅಂಬೇಡ್ಕರ್ ಅವರು ಮೀಸಲಾತಿ ವ್ಯವಸ್ಥೆ ತಂದರು. ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಈ ರೀತಿಯ ಪ್ರಶ್ನೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ಎಲ್ಲ ಜಿಲ್ಲೆಗಳಲ್ಲೂ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೆ ಇಂದು ಚಾಲನೆ ನೀಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬರಂತೆ 224 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನ. 26ರಂದು ವಿದ್ಯಾರ್ಥಿಗಳ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗುವುದು.
-ಕೆ.ಎಚ್. ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ