ಅಧಿಕಾರ ಹಂಚಿಕೆ ಗೊಂದಲ ಕಾರಣ ಕಾಂಗ್ರೆಸ್‌ ಸರ್ಕಾರ ಪತನ: ಮೋದಿ

Published : May 11, 2026, 06:22 AM IST
Modi

ಸಾರಾಂಶ

ನಾಯಕತ್ವ ಮತ್ತು ಅಧಿಕಾರ ಹಂಚಿಕೆ ಗೊಂದಲಗಳಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅನಿಶ್ಚಿತತೆಯಲ್ಲಿದೆ. ಛತ್ತೀಸ್‌ಗಢ, ರಾಜಸ್ಥಾನದ ರೀತಿ ಮುಂದೆ ಕರ್ನಾಟಕದಲ್ಲೂ ನಾಯಕತ್ವ ಗೊಂದಲದಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆ ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

  ಬೆಂಗಳೂರು :  ನಾಯಕತ್ವ ಮತ್ತು ಅಧಿಕಾರ ಹಂಚಿಕೆ ಗೊಂದಲಗಳಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅನಿಶ್ಚಿತತೆಯಲ್ಲಿದೆ. ಛತ್ತೀಸ್‌ಗಢ, ರಾಜಸ್ಥಾನದ ರೀತಿ ಮುಂದೆ ಕರ್ನಾಟಕದಲ್ಲೂ ನಾಯಕತ್ವ ಗೊಂದಲದಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆ ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಬೇರೆಯವರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಅದೂ ಗೊತ್ತಿಲ್ಲ ಎಂದೂ ಇದೇ ವೇಳೆ ವ್ಯಂಗ್ಯವಾಡಿದ್ದಾರೆ.

ಪಂಚ ರಾಜ್ಯ ಚುನಾವಣೆಯಲ್ಲಿ ಪಕ್ಷದ ಉತ್ತಮ ಪ್ರದರ್ಶನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಿದ್ದ ಪಂಚ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಆಡಳಿತದ ಕಾರ್ಯಸೂಚಿ ಇಲ್ಲ. ಆಂತರಿಕ ಸಂಘರ್ಷಗಳಿಂದ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಕಾಂಗ್ರೆಸ್‌ಗೆ ಕೇರಳದಲ್ಲಿ ಬಹುಮತ ಇದ್ದರೂ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲಗಳು ಹೆಚ್ಚಿದೆ. ಈ ಹಿಂದೆ ನಾಯಕತ್ವ ಗೊಂದಲ, ಅಧಿಕಾರ ಹಂಚಿಕೆ, ಆಡಳಿತ ವೈಫಲ್ಯದಿಂದ ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ಕರ್ನಾಟಕದಲ್ಲೂ ಮುಂದೆ ಇದೇ ಸ್ಥಿತಿ ಬರಲಿದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರಕ್ಕೆ ಅಲ್ಲಿನ ಕರ್ಮಚಾರಿಗಳಿಗೇ ಸಂಬಳ ಕೊಡಲು ಆಗುತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸರ್ಕಾರದ ಖಜಾನೆಯನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಈ ಕಾಂಗ್ರೆಸ್‌ಗೆ ಜನರಿಗೆ ದ್ರೋಹ ಮಾಡುವುದು ಹೇಗೆಂಬುದು ಗೊತ್ತಿದೆ. ಸುಳ್ಳು ಹೇಳುವುದು, ಸುಳ್ಳು ಭರವಸೆ ನೀಡಿ ಜನರ ಕಣ್ಣಿಗೆ ಮಣ್ಣೆರೆರಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಅಧಿಕಾರದ ಪುಸ್ತಕದಲ್ಲಿ ಆಡಳಿತದ ಬಗ್ಗೆ ಯಾವುದೇ ಅಧ್ಯಾಯವಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್ ಪಕ್ಷ ಇದೀಗ ಅಧಿಕಾರದಲ ಲಾಲಸೆಗೆ ಡಿಎಂಕೆಯ ಮೈತ್ರಿ ತೊರೆದು ಟಿವಿಕೆ ಜತೆ ಸೇರಿದೆ. ಈ ಮೂಲಕ ನಂಬಿದವರಿಗೆ ದ್ರೋಹ ಬಗೆದಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಚಾರದಲ್ಲಿ ತಾಯಂದಿರು, ಸೋದರಿಯರಿಗೆ ವಿಶ್ವಾಸದ್ರೋಹ ಮಾಡಿದೆ. ಸಂಸತ್ತಿನಲ್ಲಿ ಮಂಡಿಸಿದ ನಾರಿಶಕ್ತಿ ವಂದನಾ ಮಸೂದೆಗೆ ಅವರು ವಿರೋಧಿಸಿದರು. ಈ ಮಸೂದೆಗೆ ಒಪ್ಪಿಗೆ ನೀಡಿದ್ದರೆ, ಕರ್ನಾಟಕದಲ್ಲಿ ಹೆಚ್ಚಿನ ಮಹಿಳೆಯರು ಶಾಸಕರು ಮತ್ತು ಸಂಸದರಾಗುತ್ತಿದ್ದರು. ಕಾಂಗ್ರೆಸ್‌ ನಾರಿ ವಿರೋಧಿ ಪಕ್ಷ. ಕರ್ನಾಟಕದ ಮಹಿಳೆಯರು ಕಾಂಗ್ರೆಸ್‌ ಪಕ್ಷವನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಇದು ಹೊಸ ಇತಿಹಾಸ ರಚಿಸುವ ಕಾಲ:

ದೇಶದಲ್ಲಿ ಪಂಚ ರಾಜ್ಯ ಚುನಾವಣೆಗಳ ಪರಿಣಾಮದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದೇನೆ. ಪುದುಚೇರಿಯಲ್ಲಿ ಎರಡನೇ ಬಾರಿಗೆ ಎನ್‌ಡಿಎ ಸರ್ಕಾರ ಬಂದಿದೆ. ಅಸ್ಸಾಂನಲ್ಲಿ ಮೂರನೇ ಬಾರಿಗೆ ಎನ್‌ಡಿಎ ಗೆದ್ದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಆಶೀರ್ವಾದ ಸಿಕ್ಕಿದೆ. ಗುಜರಾತಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಇದು ಹೊಸ ಇತಿಹಾಸ ರಚಿಸುವ ಕಾಲ. ಪಂಚ ರಾಜ್ಯ ಚುನಾವಣೆಗಳ ಪರಿಣಾಮದ ಬಗ್ಗೆ ದೇಶದ ದಶ ದಿಕ್ಕುಗಳಲ್ಲಿ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕಕ್ಕೂ ಬಿಜೆಪಿ ಆಡಳಿತ ಬಯಕೆ:

ದೇಶದ ಜನ ಸ್ಥಿರತೆಯ ಮಂತ್ರ ಜಪಿಸುತ್ತಿದ್ದಾರೆ. ಹಗರಣಗಳು ಬೇಡ, ಸಮಸ್ಯೆಗಳಿಗೆ ಪರಿಹಾರ ಬೇಕು. ರಾಷ್ಟ್ರವಾದದ ರಾಜನೀತಿಯನ್ನು ಜನ ಬಯಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರನೀತಿಯೊಂದಿಗೆ ಜನತೆ ಹೆಜ್ಜೆ ಹಾಕಿ ನಡೆಯುತ್ತಿದ್ದಾರೆ. ಚುನಾವಣೆಗಳಲ್ಲಿ ದೇಶದ ರೈತರು, ಮಹಿಳೆಯರು, ಬಡವರು, ಮಧ್ಯಮ ವರ್ಗದವರು ಬಿಜೆಪಿ ಬೆಂಬಲಿಸುವುದರೊಂದಿಗೆ ದೊಡ್ಡ ಸಂದೇಶ ನೀಡಿದ್ದಾರೆ. ಕರ್ನಾಟಕವೂ ಬಿಜೆಪಿ ಆಡಳಿತ ಬಯಸುತ್ತಿದೆ ಎಂದು ನುಡಿದರು.

ಪಶ್ಚಿಮ ಬಂಗಾಳದಲ್ಲಿ 10 ವರ್ಷದ ಹಿಂದೆ ಬಿಜೆಪಿಯ ಮೂರು ಶಾಸಕರಿದ್ದರು. ಈಗ ನಮ್ಮ ಶಾಸಕರ ಸಂಖ್ಯೆ 200 ದಾಟಿದೆ. ಕೇರಳದಲ್ಲಿ ಈ ಬಾರಿ ಮೂವರು ಶಾಸಕರು ಗೆದ್ದಿದ್ದಾರೆ. ಮುಂದೆ ಅದೇ ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಬಹುಮತ ಪಡೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ 100 ಸ್ಥಾನ ದಾಟಲು ವಿಫಲ:

ರಾಜ್ಯದ ವಿಕಾಸದ ಜೊತೆ ದೇಶದ ವಿಕಾಸವನ್ನು ನಾವು ಬಯಸುತ್ತೇವೆ. 40 ವರ್ಷದ ಹಿಂದೆ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣುತ್ತಿದೆ. ಕಳೆದ ಮೂರು ಅವಧಿಯಲ್ಲಿ ನೂರು ಸ್ಥಾನಗಳನ್ನೂ ದಾಟಲು ವಿಫಲವಾಗುತ್ತಿದೆ. ಕಾಂಗ್ರೆಸಿಗರ ಅಹಂಕಾರ ಮಿತಿ ಮೀರಿದೆ. ಸಂವಿಧಾನ, ಪ್ರಜಾಪ್ರಭುತ್ವ, ಸಾಂವಿಧಾನಿಕ ಪ್ರಕ್ರಿಯೆಯನ್ನು ಕಡೆಗಣಿಸುತ್ತಿದ್ದಾರೆ. ಎಲ್ಲರ ವಿಕಾಸವೇ ದೇಶದ ವಿಕಾಸ ಎಂಬುದು ನಮ್ಮ ಮಂತ್ರ. ಇದೇ ಕಾರಣಕ್ಕೆ ನಮಗೆ ಮೂರನೇ ಬಾರಿಗೆ ದೇಶದಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕಿದೆ. ಆದರೆ, ಕಾಂಗ್ರೆಸ್‌ ಆಡಳಿತಕ್ಕೆ ಬಂದ ಕೆಲವೇ ತಿಂಗಳಲ್ಲಿ ವಿಶ್ವಾಸದ್ರೋಹದಿಂದ ಆಡಳಿತ ವಿರೋಧಿ ಅಲೆ ಆರಂಭವಾಗುತ್ತಿದೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್‌ ಅಗರ್‌ವಾಲ್‌, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್‌, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಪ್ರಧಾನಿ ಮೋದಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಯಾವ ಕುರ್ಚಿಯೂ ಅಲ್ಲಾಡುತ್ತಿಲ್ಲ. ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ.

ಡಿ.ಕೆ.ಶಿವಕುಮಾರ್‌, ಡಿಸಿಎಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಜಯ್‌ ಭರವಸೆ ಈಡೇರಿಕೆಗೆ ಬೇಕು ವಾರ್ಷಿಕ ₹1 ಲಕ್ಷ ಕೋಟಿ!
ನಮ್ಮ ಸರ್ಕಾರದಲ್ಲಿ ನಾನೇ ಪವರ್‌ ಸೆಂಟರ್‌ : ವಿಜಯ್‌