ಕಾಂಗ್ರೆಸ್ ಯಾರ ಬೆನ್ನಿಗೂ ಚೂರಿ ಹಾಕಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌

KannadaprabhaNewsNetwork |  
Published : Apr 04, 2024, 01:10 AM ISTUpdated : Apr 04, 2024, 05:02 AM IST
3ಕೆಎಂಎನ್‌ಡಿ-4ಮದ್ದೂರು ತಾಲೂಕಿನ ಸೋಮನಹಳ್ಳಿ ಸಮೀಪದ ಖಾಸಗಿ ಹೋಟೆಲ್ ಬಳಿ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್ ಕಂಠಿ ಮತ್ತು ಬೆಂಬಲಿಗರು ಅಭಿನಂದಿಸಿದರು. | Kannada Prabha

ಸಾರಾಂಶ

ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿದ್ದ ತೆರಿಗೆ ಹಣವನ್ನು ನೀಡಿಲ್ಲ. ಜಿಎಸ್‌ಟಿ ಪಾಲನ್ನೂ ಕೊಡುತ್ತಿಲ್ಲ.  ಮತ ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಮಾತ್ರ ಇದೆ - ಪರಮೇಶ್ವರ್

 ಮದ್ದೂರು :  ಕಾಂಗ್ರೆಸ್‌ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಆ ಸಂಪ್ರದಾಯವೂ ನಮ್ಮಲ್ಲಿಲ್ಲ. ನಮ್ಮ ಜೊತೆ ಮೈತ್ರಿ ಮಾಡಿಕೊಂಡ ಪಕ್ಷದವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಮಾರ್ಗಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಗೌಡರನ್ನು ಪ್ರಧಾನಿ ಮಾಡಿದೆವು. ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಎಲ್ಲಾ ಮಿತ್ರಪಕ್ಷಗಳನ್ನೂ ವಿಶ್ವಾಸದಿಂದ ಕಂಡಿದ್ದೇವೆ. ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಾವೆಂದಿಗೂ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿದ್ದ ತೆರಿಗೆ ಹಣವನ್ನು ನೀಡಿಲ್ಲ. ಜಿಎಸ್‌ಟಿ ಪಾಲನ್ನೂ ಕೊಡುತ್ತಿಲ್ಲ. ಬರಪರಿಹಾರಕ್ಕೆ ನಯಾಪೈಸೆಯನ್ನೂ ಇಲ್ಲಿವರೆಗೆ ಕೊಟ್ಟಿಲ್ಲ. ಇವರಿಗೆ ಜನರು ಮತ ಏಕೆ ಕೊಡಬೇಕು. ನಾವು ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮತ ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದರು.

ತೆರಿಗೆ ಹಣದ ಬಗ್ಗೆ ಕೇಳಿದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಲೆಕ್ಕ ಹೇಳುತ್ತಾರೆ. ಅಂದು ಸಂಗ್ರಹವಾಗುತ್ತಿದ್ದ ತೆರಿಗೆ ಹಣ ಕೇವಲ 1 ಲಕ್ಷ ಕೋಟಿ ರು. ಮಾತ್ರ. ಈಗ 4.50 ಲಕ್ಷ ಕೋಟಿ ರು. ತೆರಿಗೆ ಹಣ ಪಾವತಿಸುತ್ತಿದ್ದೇವೆ. ಅವರು ಕೊಡುತ್ತಿರುವುದು 50 ಸಾವಿರ ಕೋಟಿ ರು. ಮಾತ್ರ. ತೆರಿಗೆ ಹಣ ನೀಡುವಲ್ಲಿ ಅನ್ಯಾಯವೆಸಗಿರುವವರನ್ನು ಅಧಿಕಾರದಿಂದ ದೂರವಿಡಬೇಕು. ಕಾಂಗ್ರೆಸ್‌ ಈ ಚುನಾವಣೆಯಲ್ಲಿ 20ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸಿದ ಪರಮೇಶ್ವರ್‌ ಅವರು, ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಜೆಡಿಎಸ್‌ನವರು ಅಧಿಕಾರ ನಡೆಸಿದ್ದಾರೆ. ಅವರು ಶಾಶ್ವತವಾಗಿ ನೀಡಿರುವ ಒಂದೇಒಂದು ಕೊಡುಗೆಯನ್ನು ತೋರಿಸಲಿ. ಮತ್ತೆ ಅವರನ್ನು ಗೆಲ್ಲಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್ ಕಂಠಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಎಸ್.ಹೆಚ್. ರಾಜೇಂದ್ರ. ಮುಖಂಡರಾದ ಸುದೀಪ್ ಮತ್ತು ಭಾನು ಪ್ರತಾಪ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ