ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಇಲ್ಲದ ಕಾರಣ ಆ ಪಕ್ಷದ ಹೈಕಮಾಂಡ್ ಡಮ್ಮಿ ಹೈಕಮಾಂಡ್ ಎಂಬುದನ್ನು ಜನತೆ ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಇಲ್ಲದ ಕಾರಣ ಆ ಪಕ್ಷದ ಹೈಕಮಾಂಡ್ ಡಮ್ಮಿ ಹೈಕಮಾಂಡ್ ಎಂಬುದನ್ನು ಜನತೆ ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಹೈಕಮಾಂಡ್‌ಗೆ ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಇಲ್ಲವಾಗಿದೆ ಎಂಬುದು ಅರ್ಥವಾಗುತ್ತದೆ. ಸರ್ಕಾರದ ಮೇಲೂ ನಿಯಂತ್ರಣ ಇಲ್ಲವಾಗಿದೆ. ಜಾತಿ ಗಣತಿಯ ಗದ್ದಲಗಳನ್ನು ಗಮನಿಸಿದರೆ ಕಾಂಗ್ರೆಸ್ ಪರಿಸ್ಥಿತಿ ಅರ್ಥವಾಗುತ್ತದೆ ಎಂದರು. ಕಾಂಗ್ರೆಸ್ ಹೈಕಮಾಂಡ್ ಡಮ್ಮಿ ಹೈಕಮಾಂಡ್ ಆಗಿದೆ ಎಂಬುದು ಜನರ ನಿರ್ಧಾರವಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಡಮ್ಮಿ ಎಂದು ಹೇಳುವುದಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಎಂದು ಸ್ಪಷ್ಟಪಡಿಸಿದರು.
ಪಶ್ಚಾತ್ತಾಪ ಯಾತ್ರೆ ದೂರ ಇಲ್ಲ: ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದರು. ಸಮೀಕ್ಷೆ ಹೆಸರಿನಲ್ಲಿ ಜಾತಿ, ಜಾತಿಗಳನ್ನು ಒಡೆದು ರಾಜ್ಯಕ್ಕೆ ಯಾವ ಸಂದೇಶ ಕೊಡಲಾಗುತ್ತಿದೆ. ರಾಹುಲ್ ಗಾಂಧಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಿದ್ದಾರೆ. ಜನ ಬೀದಿಯಲ್ಲಿ ಹೊಡೆದಾಡಬೇಕಾ? ಇದೇನಾ ಅವರ ಜೋಡೋ ಯಾತ್ರೆ?. ಅವರು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ ಎಂದು ಟಾಂಗ್ ಕೊಟ್ಟರು.
ಜಾತಿ ಗಣತಿಯನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜ-ಸಮಾಜಗಳ ನಡುವೆ ವಿಷ ಹಿಂಡಲಾಗುತ್ತಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.