ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಇನ್ನೂ ಸೀಟು ಹಂಚಿಕೆಯಾಗಿಲ್ಲ. ಆದರೂ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತ ಎಂದು ಭಾವಿಸಲಾಗಿದೆ. ಹಾಗಾಗಿ ಆ ಪಕ್ಷದ ಕೆಲವು ಮಾಜಿ ಶಾಸಕರು ಎಚ್.ಡಿ. ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಯುವಂತೆ ಬೆಂಬಲಿಗರ ಜೊತೆಗೂಡಿ ಒತ್ತಡ ಹೇರುತ್ತಿದ್ದಾರೆ. ಇದು ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ಪ್ರತಿನಿಧಿಸುವರೆಂಬ ಗಾಳಿಸುದ್ದಿಗೆ ರೆಕ್ಕೆ-ಪುಕ್ಕ ಮೂಡಿದಂತಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯವಾಗಿ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಗಳು ಕಾಣಸಿಗುತ್ತಿಲ್ಲ. ಪಕ್ಷದ ವರಿಷ್ಠರು, ನಾಯಕರಿಂದ ಅಭ್ಯರ್ಥಿಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ವರ್ಚಸ್ವಿ ಅಭ್ಯರ್ಥಿಗಳು ಸಿಗದಿರುವುದು ಕಾಂಗ್ರೆಸ್‌ಗೆ ತಲೆನೋವು ತಂದಿದೆ. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಯಾರಾಗುವರೆಂಬುದನ್ನು ಆಧರಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿವೆ.ಲೋಕಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಅಖಾಡ ಪ್ರವೇಶಿಸುತ್ತಾರೆಂಬ ಮಾತುಗಳು ಪಕ್ಷದೊಳಗೆ ದಟ್ಟವಾಗಿ ಕೇಳಿಬರುತ್ತಿವೆ. ಸಿ.ಎಸ್.ಪುಟ್ಟರಾಜು ಅಭ್ಯರ್ಥಿಯಾದರೆ ಅವರಿಗೆ ಪ್ರತಿಸ್ಪರ್ಧಿಯಾಗಿ ಯಾರನ್ನು ಕಣಕ್ಕಿಳಿಸಬೇಕು, ಅಂತಿಮ ಹಂತದಲ್ಲಿ ಎಚ್.ಡಿ.ಕುಮಾರಸ್ವಾಮಿಯೇ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದರೆ ಆಗ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಬಗ್ಗೆ ಎರಡೂ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಸಮಾಲೋಚನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಆರು ಟಾಸ್ಕ್‌ಗಳನ್ನು ನೀಡಿದೆ. ಈ ಟಾಸ್ಕ್‌ಗಳನ್ನು ಎದುರಿಸಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸವಾಲಾಗಿದೆ. ಕೆಲ ದಿನಗಳ ಹಿಂದೆ ಮಂಡ್ಯ ಲೋಕಸಭಾ ಅಭ್ಯರ್ಥಿ ನಿರ್ಧಾರವಾಗಿದೆ. ಸೂಕ್ತ ಸಮಯದಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ. ಆದರೆ, ಅಭ್ಯರ್ಥಿ ಯಾರೆಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡದಿರುವುದು ವಿಪಕ್ಷದವರಿಗೆ ಟಾಂಗ್ ನೀಡುವ ತಂತ್ರವೆಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.
ಮುಂಬೈಗೆ ತೆರಳಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಭೇಟಿಯಾಗಿರುವ ಚಲುವರಾಯಸ್ವಾಮಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಕ್ಕೆ ನಿಲ್ಲುವಂತೆ ಕೋರಿದ್ದಾರೆ. ಜೆಡಿಎಸ್‌ನಿಂದ ಅತೃಪ್ತರಾಗಿ ಪಕ್ಷದಿಂದ ಹೊರಗಿರುವವರ ಸಂಪರ್ಕವನ್ನು ಸಾಧಿಸಿ ಅವರಿಂದಲೂ ಚುನಾವಣೆಗೆ ನೆರವಿನ ಹಸ್ತ ಚಾಚುವಂತೆ ಮನವಿ ಮಾಡುತ್ತಾ ಎಲ್ಲೆಡೆಯಿಂದ ಕಾಂಗ್ರೆಸ್ ಕಡೆಗೆ ಮತಬ್ಯಾಂಕ್ ಸೃಷ್ಟಿಸುವ ಪ್ರಯತ್ನದಲ್ಲಿ ಸದ್ದಿಲ್ಲದೆ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಶಕದ ಹಿಂದೆ ಲೋಕಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ಕರೆತರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆ ಎದುರಾದಾಗಲೆಲ್ಲಾ ರಮ್ಯಾ ಹೆಸರು ಕೇಳಿಬರುವುದು ಸಾಮಾನ್ಯವಾಗಿದೆ. ಅದೊಂದು ರೀತಿ ಹುಲಿ ಬಂತು ಹುಲಿ ಎಂಬ ಕತೆಯಂತಾಗಿದೆ. ಆದರೆ, ರಮ್ಯಾ ಮಾತ್ರ ಮಂಡ್ಯದತ್ತ ಮುಖ ಮಾಡುತ್ತಿಲ್ಲ. ಅವರ ಮತದಾರರ ಗುರುತಿನ ಚೀಟಿ ಮಂಡ್ಯದಲ್ಲಿದ್ದರೂ ಎರಡು ಚುನಾವಣೆಗಳಿಂದ ಹಕ್ಕು ಚಲಾಯಿಸಲು ಬಂದಿಲ್ಲ. ಈ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರಕ್ಕೆ ರಮ್ಯಾ ಅವರನ್ನು ಕರೆತರುವ ಬಗ್ಗೆ ಪಕ್ಷದೊಳಗೆ ಚರ್ಚೆಗಳು ನಡೆದಿವೆ.
ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಪಟ್ಟು:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಮಂಡ್ಯವನ್ನು ಬಿಜೆಪಿ ಬಹುತೇಕ ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆಗಳಿರುವುದರಿಂದ ಅವರು ಕ್ಷೇತ್ರ ವಂಚಿತರಾಗುತ್ತಿದ್ದಾರೆ. ಮಂಡ್ಯ ಕ್ಷೇತ್ರವನ್ನೇ ಪ್ರತಿನಿಧಿಸಲು ಸುಮಲತಾ ಪಟ್ಟು ಹಿಡಿದಿರುವುದರಿಂದ ಅವರೀಗ ಪರ್ಯಾಯ ಆಯ್ಕೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಅವರ ಚಿತ್ತ ಕಾಂಗ್ರೆಸ್‌ನತ್ತ ಹರಿಯುತ್ತಿದ್ದರೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ-ಮಾನ ನೀಡುವ ಭರವಸೆಯೊಂದಿಗೆ ಪಕ್ಷದೊಳಗೆ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಾದರೂ ಕಣಕ್ಕಿಳಿಯುವ ಸಂದೇಶವನ್ನೂ ಬೆಂಬಲಿಗರ ಮೂಲಕ ರವಾನಿಸಿರುವುದು ಕುತೂಹಲ ಕೆರಳಿಸಿದೆ.