;Resize=(412,232))
ಬೆಂಗಳೂರು : ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಅವರ ಅಪೇಕ್ಷೆಯಂತೆ ಕೆಲಸ ನಡೆದಿದ್ದರೆ ಇವತ್ತು ಗಂಭೀರ ಅಪರಾಧ ಪ್ರಕರಣವೊಂದರಲ್ಲಿ ಅಮಿತ್ ಶಾ, ನಂತರ ನರೇಂದ್ರ ಮೋದಿ ಕೂಡ ಜೈಲಿಗೆ ಹೋಗಿರುತ್ತಿದ್ದರು. ಆದರೆ, ಕಾಂಗ್ರೆಸ್ ನಾಯಕರೇ ಮೋದಿ ವಿರುದ್ಧದ ಪ್ರಕರಣದ ತನಿಖೆಯನ್ನು ಅಂದು ತಡೆದಿದ್ದರಿಂದ ಕಾಂಗ್ರೆಸ್ ಇಂದು ಸಂಕಷ್ಟ ಅನುಭವಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರು ಈ ವಿಷಯ ಹೊರಹಾಕಿದರು.
ಆಗ ನಾನು ಕೇಂದ್ರದಲ್ಲಿ ಕಾನೂನು ಸಚಿವನಾಗಿದ್ದೆ. ಪಕ್ಷದಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ಮಾಡುವ ಇಚ್ಛೆ ಸೋನಿಯಾಗಾಂಧಿ ಅವರಲ್ಲಿತ್ತು. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಪಕ್ಷದ ಹಲವು ಪ್ರಮುಖ ನಾಯಕರು ಸಮಿತಿಯಲ್ಲಿದ್ದರು. ನಾವೆಲ್ಲಾ ಅಧ್ಯಯನ ಮಾಡಿ ಕೊಟ್ಟ ವರದಿಯನ್ನು ಅನುಷ್ಠಾನಕ್ಕೆ ತರಲು ಸೋನಿಯಾ ಗಾಂಧಿ ಅವರು ಆಸಕ್ತಿ ತೋರಿದರೂ ಪಕ್ಷದ ಕೆಲ ಮುಖಂಡರೇ ವಿರೋಧಿಸಿದರು. ಸೋನಿಯಾ ಗಾಂಧಿ ಅವರ ಅಪೇಕ್ಷೆಯ ಪ್ರಕಾರ ನಮ್ಮ ಸರ್ಕಾರ ಅಂದು ಕೆಲಸ ಮಾಡಿದ್ದರೆ ಅಮಿತ್ ಶಾ ಇಂದು ಗೃಹ ಸಚಿವ ಆಗುತ್ತಿರಲಿಲ್ಲ, ಮೊದಲು ಜೈಲಿಗೆ ಹೋಗಿರುತ್ತಿದ್ದರು. ಅವರ ನಂತರ ಮೋದಿಯೂ ಜೈಲಿಗೆ ಹೋಗುವ, ಗಡೀಪಾರಾಗುವ ಸರದಿಯಲ್ಲಿ ಇರುತ್ತಿದ್ದರು ಎಂದು ಹೇಳಿದರು.
ಗುಜರಾತ್‌ನ ಅಂದಿನ ಗೃಹ ಸಚಿವರಾಗಿದ್ದ ಅಮಿತ್ ಶಾರನ್ನು ಗಂಭೀರ ಅಪರಾಧ ಪ್ರಕರಣವೊಂದರಲ್ಲಿ ಗಡೀಪಾರು ಮಾಡಲಾಗಿತ್ತು. ಜತೆಗೆ ಆವರ ಮೇಲಿನ ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯದಲ್ಲಿ ಮಾಡಲು ಕೋರ್ಟ್ ಆದೇಶಿಸಿತ್ತು. ಜೈಲಿಗೆ ಹೋಗುವುದರಲ್ಲಿ ಮತ್ತು ಗಡೀಪಾರು ಆಗುವುದರಲ್ಲಿ ಅಮಿತ್ ಶಾ ನಂತರ ಮೋದಿ ಸರದಿ ಇತ್ತು. ಆದರೆ, ಮೋದಿ ವಿರುದ್ಧದ ವಿಚಾರಣೆ ಮತ್ತು ತನಿಖೆಯನ್ನು ನಮ್ಮ ಸ್ವಪಕ್ಷೀಯ ನಾಯಕರೇ ತನಿಖೆ ನಿಲ್ಲಿಸಿದರು.
ಇದರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರವಿರಲಿಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರದಲ್ಲಿದ್ದ ಇತರ ಕೆಲವು ನಾಯಕರು ತನಿಖೆಗೆ ತಡೆಯೊಡ್ಡಿದರು. ಇದರಿಂದ ನಮ್ಮ ಪಕ್ಷ ಇವತ್ತು ದೊಡ್ಡ ಸಂಕಷ್ಟ ಅನುಭವಿವಂತಾಗಿದೆ. ರಾಜಕಾರಣದಲ್ಲಿ ಶತೃಗಳನ್ನು ಬಿಡಬಾರದು ಎಂಬುದಕ್ಕೆ ಇದೊಂದು ಪಾಠವೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.