ಇಂಡಿಯಾ ಮೈತ್ರಿಕೂಟವನ್ನು ಸತತ 5ನೇ ದಿನವೂ ಗುರಿಯಾಗಿಸಿಕೊಂಡಿರುವ ಪ್ರಧಾನಿ ‘ಕಾಂಗ್ರೆಸ್ ಸಂವಿಧಾನ ಬದಲಾಯಿಸಲು ಬಯಸಿದೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ದಲಿತರು, ಒಬಿಸಿಗಳ ಮೀಸಲನ್ನು ಧರ್ಮ ಆಧರಿತ ಮೀಸಲಿಗಾಗಿ ದೋಚಲು ಬಯಸಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ಕೊಲ್ಹಾಪುರ
ಮೀಸಲು ಹಾಗೂ ಪಿತ್ರಾರ್ಜಿತ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಸತತ 5ನೇ ದಿನವೂ ಗುರಿಯಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಸಂವಿಧಾನ ಬದಲಾಯಿಸಲು ಬಯಸಿದೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ದಲಿತರು, ಒಬಿಸಿಗಳ ಮೀಸಲನ್ನು ಧರ್ಮ ಆಧರಿತ ಮೀಸಲಿಗಾಗಿ ದೋಚಲು ಬಯಸಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಒಬಿಸಿಗಳ ಶೇ. 27ರಷ್ಟು ಕೋಟಾದಲ್ಲಿ ಮುಸ್ಲಿಮರಿಗೂ ಕರ್ನಾಟಕದಲ್ಲಿ ಪಾಲು ನೀಡಲಾಗಿದೆ. ಈ ಕರ್ನಾಟಕ ಮಾದರಿಯನ್ನು ಇಡೀ ದೇಶದಲ್ಲಿ ವಿಸ್ತರಿಸಲು ಕಾಂಗ್ರೆಸ್ ಬಯಸುತ್ತದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಸಾಮಾಜಿಕ ನ್ಯಾಯದ ಕೊಲೆಗೆ ಪ್ರತಿಜ್ಞೆ ಮಾಡಿದೆ. ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕೆಳಮಟ್ಟಕ್ಕೆ ಇಳಿದಿದೆ’ ಎಂದು ಆರೋಪಿಸಿದರು.
ವರ್ಷಕ್ಕೆ ಒಬ್ಬ ಪ್ರಧಾನಿ ಬೇಕಾ?:
‘ಇಂಡಿಯಾ ಕೂಟಕ್ಕೆ ಅಧಿಕಾರದ ಬಾಗಿಲ ಬಳಿಯೂ ಬರಲು ಸಾಧ್ಯವಿಲ್ಲ. ಆದರೆ ಅವಕಾಶ ಸಿಕ್ಕರೆ 5 ವರ್ಷಗಳಲ್ಲಿ ಐವರು ಪ್ರಧಾನಿಗಳನ್ನು ಹೊಂದಲು ಇಂಡಿಯಾ ಕೂಟದ ನಾಯಕರು ಚಿಂತನೆ ನಡೆಸುತ್ತಿದ್ದಾರೆ’ ಎಂದು ಪ್ರಧಾನಿ ಟೀಕಿಸಿದರು.‘ಕೊಲ್ಹಾಪುರವನ್ನು ಫುಟ್ಬಾಲ್ ಹಬ್ ಎಂದು ಕರೆಯಲಾಗುತ್ತದೆ. 2ನೇ ಹಂತದ ಮತದಾನ ಪೂರ್ಣಗೊಂಡಿದ್ದು, ಎನ್‌ಡಿಎ 2-0 ಮುನ್ನಡೆಯಲ್ಲಿದೆ. ಆದರೆ ಭಾರತ ವಿರೋಧಿ ನೀತಿಗಳಲ್ಲಿ ತೊಡಗಿರುವ ಕಾಂಗ್ರೆಸ್ ಮೈತ್ರಿಕೂಟವು 2 ಸೆಲ್ಫ್ ಗೋಲು ಗಳಿಸಿದೆ. 3ನೇ ಹಂತದಲ್ಲೂ ಅಂತಹ ‘ಗೋಲ್’ ಗಳಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಅದರ ನಂತರದ ಹಂತಗಳಲ್ಲಿ ಇಂಡಿಯಾ ಕೂಟಕ್ಕೆ ಘೋರ ಸೋಲನ್ನು ನೀಡಬೇಕು’ ಎಂದು ಕರೆ ನೀಡಿದರು.
ಸನಾತನ ಧರ್ಮಕ್ಕೆ ಅವಮಾನ:‘ಡಿಎಂಕೆ ನಾಯಕರು ಸನಾತನ ಧರ್ಮ ಅವಹೇಳನ ಮಾಡಿದರು. ಅಂಥವರನ್ನು ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಕೂಟದವರು ಕರೆಸಿಕೊಂಡು ಮುಂಬೈನಲ್ಲಿ ಸಭೆ ಮಾಡುತ್ತಾರೆ. ಇದು ಔರಂಗಜೇಬ್ ಬೆಂಬಲಿಗರಿಗೆ ಪ್ರೇರಣೆ ನೀಡಿದಂತೆ’ ಎಂದು ಮೋದಿ ಟೀಕಿಸಿದರು.