ಬಿಜೆಪಿಗೆ ಸಡ್ಡು : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ17ರಂದು ಕಾಂಗ್ರೆಸ್ಸಿಂದ ಜನಾಕ್ರೋಶ

KannadaprabhaNewsNetwork | Updated : Apr 11 2025, 04:22 AM IST

ಸಾರಾಂಶ

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಏ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು :  ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಏ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿ ವಿರುದ್ಧ ಹೋರಾಟ ಮಾಡಲಾಗುವುದು. ಏ.17ರ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಂತೆಯೇ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಾಗುವುದು. ಅದರ ಸ್ವರೂಪವನ್ನು ಶೀಘ್ರ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಅವರು ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ದರವನ್ನು ತಲಾ 2 ರು. ಹಾಗೂ ಅಡುಗೆ ಅನಿಲ ದರವನ್ನು 50 ರು. ಹೆಚ್ಚಿಸಿ ಉಡುಗೊರೆ ನೀಡಿದೆ. ಬುಧವಾರ ಕಚ್ಚಾ ತೈಲದ ಬೆಲೆ ಶೇ.4.23ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡದೆ, ಹೆಚ್ಚಿಸಿದೆ. ಪೆಟ್ರೋಲ್ ಮೂಲ ದರ ಪ್ರತಿ ಲೀ.ಗೆ 42.60 ರು.ಗಳಿದ್ದರೆ 103 ರು.ಗೆ ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಒಂದು ಲೀ. ಮೇಲೆ 60 ರು. ಲಾಭ ಮಾಡುತ್ತಿದೆ. ಹಾಗೆಯೇ, ಡೀಸೆಲ್‌ ಮೇಲೆ 43 ರು. ಲಾಭ ಮಾಡುತ್ತಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ಶೇ.60ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದರು.

ಮಾಂಗಲ್ಯ ಖರೀದಿಸಲೂ ಕಷ್ಟ:

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಚಿನ್ನದ ಬೆಲೆ 10 ಗ್ರಾಂ.ಗೆ 28 ಸಾವಿರ ರು. ಇತ್ತು. ಈಗ 92 ಸಾವಿರ ರು.ಗೇರಿದೆ. ಜನ ಮದುವೆಗೆ ಮಾಂಗಲ್ಯದ ಸರ ಖರೀದಿಸಲಾಗದ ಸ್ಥಿತಿ ಎದುರಾಗಿದೆ. ಮೊಬೈಲ್‌, ಟಿವಿ, ವಾಹನ ಸೇರಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ವಾಹನಗಳ ಬೆಲೆ ದುಪ್ಪಟ್ಟಾಗಿದೆ. ಜತೆಗೆ ಡಾಲರ್‌ ಮೌಲ್ಯ 59 ರು.ನಿಂದ 89 ರು.ಗೆ ಏರಿಕೆಯಾಗಿದೆ. ಇದೆಲ್ಲದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಬೆಲೆಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕಲ್ಲವೇ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ರೈತರ ಬದುಕು ಉಳಿಸಲು ಹಾಲಿನ ದರ ಏರಿಕೆ ಮಾಡಿದರೆ ಅದರ ಬಗ್ಗೆ ಬಿಜೆಪಿ ಯಾತ್ರೆ ಮಾಡುತ್ತಿದೆ. ಅದೇ ಬಿಜೆಪಿ ಅವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆ ಇಳಿಸಿಲ್ಲ. ಇನ್ನು, ನಮ್ಮ ಸರ್ಕಾರ ನೀರಿನ ಬೆಲೆಯನ್ನು ಅತ್ಯಂತ ಕಡಿಮೆ ಏರಿಕೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ಮಾಡಿ ಬಡವರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕು ಹಸನಾಗುವಂತೆ ಮಾಡಲು 52 ಸಾವಿರ ಕೋಟಿ ರು. ಮೀಸಲಿಟ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.ಬಿಜೆಪಿ ನಾಯಕರ ಫೋಟೋ ಹಾಕಿಕೊಳ್ಳಲಿ

ಬಿಜೆಪಿ ನಾಯಕರು ತಮ್ಮ ಪಕ್ಷದೊಳಗಿನ ತೂತು ಮುಚ್ಚಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಪ್ರತಿಭಟನೆಯ ಬ್ಯಾನರ್‌ನಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಫೋಟೋ ಹಾಕಿಕೊಂಡಿದ್ದಾರೆ. ಅದರ ಬದಲು ಕೇಂದ್ರ ಬಿಜೆಪಿ ನಾಯಕರ ಫೋಟೋ ಹಾಕಿಕೊಳ್ಳಲಿ. ನಮ್ಮ ಬೆಲೆ ಏರಿಕೆಯ ಬದಲು ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನೂ ಜನರಿಗೆ ತಿಳಿಸಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಮದುವೆಗೆ ಮಾಂಗಲ್ಯ

ಸರ ಖರೀದಿಸಲಾಗ್ತಿಲ್ಲ

ಯುಪಿಎ ಸರ್ಕಾರದ ಅವಧಿಯಲ್ಲಿ ಚಿನ್ನದ ಬೆಲೆ 10 ಗ್ರಾಂ.ಗೆ 28 ಸಾವಿರ ರು. ಇತ್ತು. ಈಗ 92 ಸಾವಿರ ರು.ಗೇರಿದೆ. ಜನ ಮದುವೆಗೆ ಮಾಂಗಲ್ಯದ ಸರ ಖರೀದಿಸಲಾಗದ ಸ್ಥಿತಿ ಎದುರಾಗಿದೆ. ಮೊಬೈಲ್‌, ಟಿವಿ, ವಾಹನ ಸೇರಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ವಾಹನಗಳ ಬೆಲೆ ದುಪ್ಪಟ್ಟಾಗಿದೆ.

- ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Share this article