ಮುಸ್ಲಿಮರಲ್ಲಿ ಆತಂಕ ಮೂಡಿಸಿ ಮತ ಗಳಿಕೆಗೆ ಕಾಂಗ್ರೆಸ್‌ ಯತ್ನ : ಸುಧಾಂಶು ತ್ರಿವೇದಿ

KannadaprabhaNewsNetwork | Updated : Apr 14 2025, 04:19 AM IST

ಸಾರಾಂಶ

ವಕ್ಫ್‌ ತಿದ್ದುಪಡಿ ಮುಂದಿಟ್ಟುಕೊಂಡು ಕಾಂಗ್ರೆಸ್‌ ಮುಸ್ಲಿಮರಲ್ಲಿ ಆತಂಕ ಸೃಷ್ಟಿಸಿ ಮತ ಗಳಿಕೆ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ.

  ಬೆಂಗಳೂರು : ವಕ್ಫ್‌ ತಿದ್ದುಪಡಿ ಮುಂದಿಟ್ಟುಕೊಂಡು ಕಾಂಗ್ರೆಸ್‌ ಮುಸ್ಲಿಮರಲ್ಲಿ ಆತಂಕ ಸೃಷ್ಟಿಸಿ ಮತ ಗಳಿಕೆ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಭಾನುವಾರ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿಯಿಂದ ಬಸವನಗುಡಿಯಲ್ಲಿ ಏರ್ಪಡಿಸಿದ್ದ ‘ವಕ್ಫ್‌ ತಿದ್ದುಪಡಿ ಮಸೂದೆ-2025’ ಕುರಿತ ಸಂಸದ್‌ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ವಕ್ಫ್‌ ತಿದ್ದುಪಡಿಯಿಂದ ಮಸೀದಿ, ದರ್ಗಾ, ಖಬರಸ್ಥಾನ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂಬ ಸುಳ್ಳು ಆತಂಕವನ್ನು ಹರಡಲಾಗುತ್ತಿದೆ. ಮುಸ್ಲಿಮರಲ್ಲಿ ಆತಂಕ ಹುಟ್ಟಿಸಿ ಅವರ ಮತಗಳನ್ನು ಸೆಳೆಯುವ ಕೆಲಸವನ್ನು, ಓಲೈಸುವ ಕಾರ್ಯವನ್ನು ಕಾಂಗ್ರೆಸ್‌ ಮಾಡುತ್ತಿದೆ. 

ಆದರೆ, ಬಿಜೆಪಿ ಬಡ ಮುಸ್ಲಿಂಮರ ಪರವಾಗಿದ್ದು, ಅವರಲ್ಲಿ ಧೈರ್ಯ ಸ್ಥಾಪಿಸುವ ಕೆಲಸ ಮಾಡುತ್ತದೆ ಎಂದರು.1913ರಿಂದ 2013ರ ನೂರು ವರ್ಷದಲ್ಲಿ 17ಲಕ್ಷ ಎಕರೆಯಷ್ಟು ಜಾಗ ಹೊಂದಿದ್ದ ವಕ್ಫ್‌ ನಂತರದ 10 ವರ್ಷದಲ್ಲಿ ಹೆಚ್ಚುವರಿಯಾಗಿ 21ಲಕ್ಷ ಎಕರೆ ಜಾಗ ಒಳಪಡಿಸಿಕೊಂಡಿತು. ವಿಜಯಪುರದಲ್ಲಿ ಒಂದು ಗ್ರಾಮವನ್ನೇ ತಮ್ಮದು ಎಂಬ ಹಂತಕ್ಕೆ ವಕ್ಫ್‌ ಹೋಯಿತು. ಇದಕ್ಕೆ ಕಡಿವಾಣ ಹಾಕಲು ತಿದ್ದುಪಡಿ ಅಗತ್ಯವಾಗಿತ್ತು. ಅದಕ್ಕಾಗಿ ವಕ್ಫ್ ಮಂಡಳಿಗೆ ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಎಂದು ರಾತ್ರೋರಾತ್ರಿ ಘೋಷಿಸಬಹುದಾಗಿದ್ದ ಅಧಿಕಾರ ನೀಡುತ್ತಿದ್ದ ಸೆಕ್ಷನ್‌ 40ನ್ನು ಅನೂರ್ಜಿತಗೊಳಿಸಿದ್ದೇವೆ ಎಂದರು.

ವಕ್ಫ್‌ ಜಾಗದಲ್ಲಿ ಸ್ಟಾರ್‌ ಹೋಟೆಲ್‌:

ಅಷ್ಟಕ್ಕೂ ವಕ್ಫ್‌ ವಶಪಡಿಸಿಕೊಂಡಿದ್ದ ಸ್ಥಳದಲ್ಲಿ ಬಡ ಮುಸ್ಲಿಮರಿಗಾಗಿ ಆಸ್ಪತ್ರೆ, ಅನಾಥಾಶ್ರಮ, ವೃದ್ಧಾಶ್ರಮ, ಶಾಲೆ ಕಟ್ಟಿದ ಉದಾಹರಣೆ ಇಲ್ಲ. ಬದಲಾಗಿ ಫಾರ್ಮ್ ಹೌಸ್‌, ಸ್ಟಾರ್‌ ಹೋಟೆಲ್‌ಗಳು ಇಲ್ಲಿವೆ. ವಕ್ಫ್‌ ತನ್ನ ಸುಪರ್ಧಿಗೆ ಪಡೆದ ಮುಸ್ಲಿಮರ 3165 ಪ್ರಕರಣಗಳು ನ್ಯಾಯಾಧಿಕರಣ ಅಥವಾ ಕೋರ್ಟ್‌ನಲ್ಲಿವೆ. ಕಾಂಗ್ರೆಸ್‌ ನಾಯಕರು ನೆಪಮಾತ್ರಕ್ಕೆ ಕಿಸೆಯಿಂದ ಸಂವಿಧಾನದ ಪ್ರತಿ ತೆಗೆದು ತೋರಿಸಿ ಮತ್ತೆ ಜೇಬಿನಲ್ಲೇ ಇಟ್ಟಿಕೊಳ್ಳುತ್ತಾರೆ. ಆದರೆ, ಬಿಜೆಪಿಗರು ಸಂವಿಧಾನಕ್ಕೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದು, ಆಚರಣೆಗೆ ತರುತ್ತಾರೆ ಎಂದರು.

ಈ ವೇಳೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ ಮತ್ತಿತರರು ಇತರರಿದ್ದರು.

ಕಾಂಗ್ರೆಸ್‌ ಗಂಭೀರ ಸಮಸ್ಯೆ ತಂದಿಟ್ಟಿತ್ತು: ತೇಜಸ್ವಿ ಸೂರ್ಯ

ಯುಪಿಎ ಸರ್ಕಾರ 1995, 2013ರಲ್ಲಿ ವಕ್ಫ್‌ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಗಂಭೀರ ಸಮಸ್ಯೆ ಸೃಷ್ಟಿಸಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಪಾಕಿಸ್ತಾನ, ಇರಾನ್‌, ಬಾಂಗ್ಲಾದೇಶ ಸೇರಿ ಕಟ್ಟರ್‌ ಮುಸ್ಲಿಂ ರಾಷ್ಟ್ರಗಳಲ್ಲಿ ಇಲ್ಲದಷ್ಟು ವಕ್ಫ್‌ಗೆ ಸ್ವೇಚ್ಛಾಚಾರದ ಅಧಿಕಾರವನ್ನು ಕಾಂಗ್ರೆಸ್‌ ನೀಡಿತ್ತು. ದಾಖಲೆ, ಸಾಕ್ಷ್ಯ ಯಾವುದೂ ಇಲ್ಲದೆ ಕೂಡ ಯಾವುದೇ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಳ್ಳಬಹುದಾದ ಅಧಿಕಾರ ನೀಡಿತು. ಪರಿಣಾಮ ತಲತಲಾಂತರದಿಂದ ಉಳುಮೆ ಮಾಡಿಕೊಂಡು ಬಂದ ಜಮೀನಿನ ಪಹಣಿಯಲ್ಲಿ ವಕ್ಫ್‌ ಹೆಸರಿಗೆ ಸೇರುವಂತಾಯಿತು. ಇದೀಗ ತಿದ್ದುಪಡಿಯಿಂದಾಗಿ ವಕ್ಫ್‌ ನ್ಯಾಯಾಧಿಕರಣ ನೀಡುವ ಆದೇಶವನ್ನು ಹೈಕೋರ್ಟ್‌ನಲ್ಲಿ ಬೇಕಾದರೂ ಪ್ರಶ್ನೆ ಮಾಡಬಹುದು ಎಂದರು.

Share this article