ಇನ್ನು 9 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ: ಡಿಸಿಎಂ ಡಿಕೆಶಿ

KannadaprabhaNewsNetwork | Updated : Feb 26 2024, 11:10 AM IST

ಸಾರಾಂಶ

ಬಿಡದಿಯ ಅವರಗೆರೆಯಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಸಮಾವೇಶ ಉದ್ಘಾಟಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯದಲ್ಲಿ ಇನ್ನೂ 9 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಮ್ಮ ಸರ್ಕಾರ ಬಲಿಷ್ಠವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಬಿಡದಿಯ ಅವರಗೆರೆಯಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ರನ್ನು ಸೋಲಿಸುವ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್‌ ತಬ್ಬಿಕೊಂಡಿದ್ದಾರೆ. 

ಎಚ್.ಡಿ.ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಹಿಂದೆ ಕುಸ್ತಿ ಆಡುತ್ತಿದ್ದರು. ಈಗ ಸುರೇಶ್ ಸೋಲಿಸಲು ಒಂದಾಗಿದ್ದಾರೆ. ನಾನು ಈ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಿದ್ದೇನೆ. ಜೆಡಿಎಸ್‌ಗೆ ಮತ ಹಾಕುತ್ತಿದ್ದವರು ಕೂಡ ಈ ಬಾರಿ ಸುರೇಶ್ ಹಾಗೂ ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ ಎಂದರು.

ಮಾಜಿ ಸಚಿವ ಆರಗ ಅರ್ಧ ಜ್ಞಾನೇಂದ್ರ: ಡಿಕೆಶಿ
ಬಿಜೆಪಿಯ ಅರಗ ಜ್ಞಾನೇಂದ್ರ ನಮ್ಮ ಗ್ಯಾರಂಟಿಗಳನ್ನು 420 ಅಂದವ್ನೆ. ಅವನು ಅರ್ಧ ಜ್ಞಾನೇಂದ್ರ, ದಡ್ಡ ಜ್ಞಾನೇಂದ್ರ! ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ನಮ್ಮ ಗ್ಯಾರಂಟಿಗಳು 420ಯಾದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಕಾರ್ಯಕರ್ತರಿಗೆ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳದಂತೆ ಕರೆ ನೀಡಲಿ ಎಂದು ಸವಾಲು ಹಾಕಿದರು.

ಮೊನ್ನೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಇಬ್ಬರು ಸೇರಿದರೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆದ್ದರು ಎಂದರು.

ನಾವೆಲ್ಲಾ ಬೆಂಗಳೂರು ಜಿಲ್ಲೆಯವರು. ನಮ್ಮ ಸ್ವಾಭಿಮಾನದಿಂದ ನಿಮಗೆ ಉದ್ಯೋಗ ಸೃಷ್ಟಿ ಆಗಬೇಕು. ನಾನು ಬೆಂಗಳೂರಿಗೆ ಮಂತ್ರಿ, ಮೆಟ್ರೋಗೂ ನಾನೇ ಮಂತ್ರಿ. ಶೀಘ್ರದಲ್ಲೇ ನಿಮ್ಮ ಬಿಡದಿಗೆ ಮೆಟ್ರೋ ಬರಲಿದೆ. ಗ್ರೇಟರ್ ಬೆಂಗಳೂರಿಗೆ ನಿಮ್ಮ ಬಿಡದಿ ಸೇರುತ್ತೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.

Share this article