;Resize=(412,232))
ನವದೆಹಲಿ: ಯುಪಿಐ ವ್ಯವಸ್ಥೆಯಲ್ಲಿ ಎಂಡಿಆರ್ ಶುಲ್ಕವನ್ನು ತುರ್ತಾಗಿ ಜಾರಿಗೆ ತರಬೇಕು ಎಂದು ಇತ್ತೀಚೆಗೆ ಹಣಕಾಸು ಸ್ಥಾಯಿ ಸಮಿತಿ ಸಂಸತ್ತಿಗೆ ಶಿಫಾರಸು ಮಾಡಿತ್ತು. ಈ ಸಮಿತಿಯಲ್ಲಿದ್ದ ಐವರು ಕಾಂಗ್ರೆಸ್ ಸಂಸದರು ಸಭೆ ನಿರ್ಣಯಕ್ಕೆ ಅಸಮ್ಮತಿ ಸೂಚಿಸಿರಲಿಲ್ಲ ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಇದು ಯುಪಿಐ ಶುಲ್ಕದ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ತೋರುತ್ತಿದೆಯೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಹಣಕಾಸು ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರದ ಆರ್ಥಿಕ ಮಸೂದೆಗಳನ್ನು ಪರಿಶೀಲಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಪ್ರಮುಖ ಸಂಸದೀಯ ಸಮಿತಿಯಾಗಿದೆ. ಇದು ಲೋಕಸಭಾ ಹಾಗೂ ರಾಜ್ಯಸಭಾ ಸಂಸದರನ್ನು ಒಳಗೊಂಡಿರುತ್ತದೆ. ಪ್ರಸ್ತುತ ಈ ಸಮಿತಿಯಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ಮನೀಷ್ ತಿವಾರಿ, ಗೌರವ್ ಗೊಗೋಯ್, ಕಿಶೋರಿ ಲಾಲ್ ಹಾಗೂ ಕೆ. ಗೋಪಿನಾಥ್ ಸೇರಿದಂತೆ ಐವರು ಕಾಂಗ್ರೆಸ್ ಸಂಸದರಿದ್ದಾರೆ.
ಇತ್ತೀಚೆಗೆ ಈ ಸಮಿತಿಯು ಯುಪಿಐಗೆ ಎಂಡಿಆರ್/ಆದಾಯ ಚೌಕಟ್ಟನ್ನು ರೂಪಿಸಬೇಕು ಹಾಗೂ ವಿಳಂಬವಿಲ್ಲದೆ ಅದನ್ನು ಜಾರಿಗೆ ತರಬೇಕು ಎಂದು ಸಂಸತ್ತಿಗೆ ಶಿಫಾರಸು ಮಾಡಿತ್ತು. ಆದರೆ ಇದೀಗ ಯುಪಿಐ ಮೇಲೆ ಶುಲ್ಕ ವಿಧಿಸುವ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಪಕ್ಷದ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ.