ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಸೇವಾಸಂಕಲ್ಪವಾಗಿ ಆಚರಿಸುವುದು ಎಂದರೆ, ಕೇವಲ ಒಬ್ಬ ರಾಜಕಾರಣಿಯ ಹುಟ್ಟುಹಬ್ಬವನ್ನು ಆಚರಿಸುವುದಲ್ಲ. ಅದು ಒಂದು ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯ ರಾಜಕೀಯ ಪಯಣವನ್ನು ನೆನಪಿಸಿಕೊಳ್ಳುವುದು. ಅದು ದೇಶದ ಅಭಿವೃದ್ಧಿಯ ಕುರಿತಾದ ಅವರ ದೃಷ್ಟಿಕೋನ ಚರ್ಚಿಸುವುದು.
ಆರ್.ಅಶೋಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕರು
ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಸೇವಾಸಂಕಲ್ಪವಾಗಿ ಆಚರಿಸುವುದು ಎಂದರೆ, ಕೇವಲ ಒಬ್ಬ ರಾಜಕಾರಣಿಯ ಹುಟ್ಟುಹಬ್ಬವನ್ನು ಆಚರಿಸುವುದಲ್ಲ. ಅದು ಒಂದು ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯ ರಾಜಕೀಯ ಪಯಣವನ್ನು ನೆನಪಿಸಿಕೊಳ್ಳುವುದು. ಅದು ದೇಶದ ಅಭಿವೃದ್ಧಿಯ ಕುರಿತಾದ ಅವರ ದೃಷ್ಟಿಕೋನ ಚರ್ಚಿಸುವುದು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೇವೆಯ ಮಹತ್ವ ಅರಿತಿದ್ದರು. ‘ನಿಮ್ಮನ್ನು ನೀವು ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ, ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು’ ಎಂದು ಅವರು ಹೇಳಿದ್ದರು. ಇದನ್ನು ಯಥಾವತ್ತಾಗಿ ಅನುಷ್ಠಾನ ಮಾಡಿರುವ ಪ್ರಧಾನಿ ಮೋದಿ, ಇಡೀ ಬದುಕನ್ನೇ ಸೇವೆಯಾಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದಾಗಿನಿಂದಲೂ ಸೇವೆ ಆರಂಭಿಸಿ, ಈಗ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರ 76ನೇ ಜನ್ಮದಿನವನ್ನು ಸೇವಾ ಸಂಕಲ್ಪ ಅಭಿಯಾನ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಇದು ಕೇವಲ ಜನ್ಮದಿನದ ಆಚರಣೆಯಲ್ಲ. ಗುಜರಾತ್‌ನ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಸಾರ್ವಜನಿಕ ಜೀವನದಲ್ಲಿ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿದ್ದು ಅವರು 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಪ್ರತಿದಿನ ಸುಮಾರು 18 ಗಂಟೆಗಳ ಕಾಲ ಕೆಲಸ ಮಾಡುವ ಅವರು ದೇಶವನ್ನು ಅಭಿವೃದ್ಧಿಯ ಉನ್ನತ ಶಿಖರಕ್ಕೆ ಒಯ್ದಿದ್ದಾರೆ. ಈ ಪ್ರಯುಕ್ತ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಸೆ.17 ರಿಂದ ಅ.17ರವರೆಗೆ ದೇಶದೆಲ್ಲೆಡೆ ಈ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ ಸ್ಪರ್ಧೆ, ನಮೋ ಸೇವಾಗಾಥಾ ಹೆಸರಿನ ಬೀದಿ ನಾಟಕ ಪ್ರದರ್ಶನ, ಅಂಗನವಾಡಿ ಮಿಲನ, ಯೋಜನೆಗಳ ಫಲಾನುಭವಿಗಳ ಜೊತೆ ಮಾತುಕತೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಹೀಗೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲವೂ ಸಾರ್ವಜನಿಕರಿಗೆ ಬಹಳ ಉಪಯುಕ್ತವಾದ ಕಾರ್ಯಕ್ರಮಗಳು.
ಸಾಮಾನ್ಯವಾಗಿ ಯಾವುದೇ ವ್ಯಕ್ತಿಗಳು ಹುಟ್ಟುಹಬ್ಬವನ್ನು ಬಂಧು ಬಳಗದೊಂದಿಗೆ ಆಚರಿಸುತ್ತಾರೆ. ಆದರೆ ಪ್ರಧಾನಿ ಮೋದಿಯವರಿಗೆ ಇಡೀ ದೇಶ ಬಂಧು ಬಳಗ ಇದ್ದಂತೆ. ಹಾಗಾಗಿ ಅವರ ಜನ್ಮದಿನದಂದು ಸಾರ್ವಜನಿಕರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವರ ಜನ್ಮದಿನವನ್ನು ನಾವು ಕೇವಲ ಹುಟ್ಟುಹಬ್ಬವಾಗಿ ನೋಡುವುದಿಲ್ಲ. ಅದನ್ನು ಸೇವಾ ಸಂಕಲ್ಪ, ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಪ್ರಯೋಜನ ತಲುಪಬೇಕು ಎಂಬ ಸಂಕಲ್ಪದ ದಿನವಾಗಿ ಆಚರಿಸುತ್ತಿದ್ದೇವೆ.
ಸಮರ್ಥ ನಾಯಕ, ಸೇವೆಯೇ ಸಂಕಲ್ಪ:
1950ರ ಸೆ.17ರಂದು ಗುಜರಾತಿನ ವಡಾನಗರದಲ್ಲಿ ನರೇಂದ್ರ ದಾಮೋದರದಾಸ್ ಮೋದಿ ಜನಿಸಿದರು. ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ಪ್ರಧಾನಮಂತ್ರಿ ಎಂಬ ವಿಶೇಷತೆಯೂ ಅವರಿಗಿದೆ. ಸಾಮಾನ್ಯ ಕುಟುಂಬದಿಂದ ಬಂದ ಅವರು ದೇಶದ ಪ್ರಧಾನಮಂತ್ರಿಯ ಸ್ಥಾನಕ್ಕೆ ಏರಿ, ಸತತವಾಗಿ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೋದಿಯವರ ಬಾಲ್ಯ ಬಹಳ ಸರಳವಾಗಿತ್ತು. ಅವರೆಂದೂ ಪ್ರಭಾವಿ ಮನೆತನಕ್ಕೆ ಸೇರಿದವರಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ, ಯುವಕನಾಗಿದ್ದಾಗಲೇ ಅವರು ಭಾರತದ ವಿವಿಧ ಭಾಗಗಳನ್ನು ಸುತ್ತಾಡಿ, ದೇಶದ ವೈವಿಧ್ಯತೆ ಮತ್ತು ಜನಜೀವನವನ್ನು ಹತ್ತಿರದಿಂದ ಅರಿಯಲು ಪ್ರಯತ್ನಿಸಿದರು.
ಈ ಹಿನ್ನೆಲೆಯಿಂದಾಗಿ ಮುಂದೆ ಅವರ ರಾಜಕೀಯ ಚಿಂತನೆ ಮತ್ತು ನಾಯಕತ್ವದ ಶೈಲಿ ಸದೃಢವಾಯಿತು. ಗುಜರಾತಿನ ಮುಖ್ಯಮಂತ್ರಿಯಾಗಿ ಅವರು ನಡೆಸಿದ ಆಡಳಿತ ಇಂದಿಗೂ ಚರಿತ್ರಾರ್ಹ. ‘ಗುಜರಾತ್ ಮಾಡೆರಿ’ ಎನ್ನುವುದು ಇಂದಿಗೂ ಎಲ್ಲ ರಾಜ್ಯಗಳಿಗೆ ಮಾದರಿಯಾಗಿದೆ. ಆದರೆ ಒಂದು ಕೋಮುಗಲಭೆಯನ್ನು ಹಿಡಿದುಕೊಂಡು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಇಂದಿಗೂ ಮುಂದುವರಿದಿದೆ. ಆದರೆ ದೇಶದ ಜನ ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ.
ಮೋದಿ ಅವರ ನಾಯಕತ್ವದ ಪ್ರಮುಖ ಘೋಷಣೆಗಳಲ್ಲಿ ಒಂದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅಂದರೆ ಪ್ರಗತಿಯ ಪ್ರಯೋಜನ ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಬೇಕು. ಬಡವರು, ಮಹಿಳೆಯರು, ರೈತರು, ಯುವಕರು, ಸಣ್ಣ ಉದ್ಯಮಿಗಳು ಮತ್ತು ಗ್ರಾಮೀಣ ಜನರನ್ನು ಗುರಿಯಾಗಿಸಿಕೊಂಡು ಹಲವು ಯೋಜನೆಗಳನ್ನು ಅವರು ಜಾರಿ ಮಾಡಿದರು. ಜನಧನ್ ಯೋಜನೆಯಲ್ಲಿ ಬ್ಯಾಂಕ್ ಬಾಗಿಲು ಸಾಮಾನ್ಯ ಜನರಿಗೆ ತೆರೆಯಿತು. ಹಣಕಾಸು ವ್ಯವಸ್ಥೆಯಿಂದ ಹೊರಗಿದ್ದ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರಲು ಇದು ಪ್ರಮುಖ ಹೆಜ್ಜೆಯಾಯಿತು.
ಬಡ ಕುಟುಂಬಗಳ ಮಹಿಳೆಯರು ಕಟ್ಟಿಗೆ ಮತ್ತು ಇತರ ಸಾಂಪ್ರದಾಯಿಕ ಇಂಧನಗಳಿಂದ ಅಡುಗೆ ಮಾಡುವಾಗ ಹೊಗೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮೂಲಕ ಬಡ ಕುಟುಂಬಗಳಿಗೆಎಲ್‌ಪಿಜಿ ಸಂಪರ್ಕ ನೀಡಲಾಯಿತು. ಈ ಯೋಜನೆಯಿಂದ ಸುಮಾರು 10 ಕೋಟಿ ಕುಟುಂಬಗಳಿಗೆ ಹೊಗೆಯಿಂದ ಮುಕ್ತ ಅಡುಗೆ ಮನೆಯ ಪ್ರಯೋಜನ ಸಿಕ್ಕಿದೆ.
ನಮ್ಮ ದೇಶದಲ್ಲಿ ಬಡ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ದೊಡ್ಡ ಹೊರೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 50 ಕೋಟಿ ಜನರಿಗೆ ಆರೋಗ್ಯ ರಕ್ಷಣೆಯ ಖಾತರಿ ನೀಡಲಾಗಿದೆ. ಇದರ ಜೊತೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ‘ಪ್ರತಿಯೊಬ್ಬರಿಗೂ ಸ್ವಂತ ಮನೆ’ ಎಂಬ ಕನಸನ್ನು ಸಾಕಾರಗೊಳಿಸಿರುವ ಪ್ರಧಾನಿ ಮೋದಿ, ಆವಾಸ್ ಯೋಜನೆಯಡಿ ಸುಮಾರು 4 ಕೋಟಿ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮನೆ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಬಡ ಕುಟುಂಬದ ಭದ್ರತೆ, ಗೌರವ ಮತ್ತು ಸ್ಥಿರತೆಯ ಸಂಕೇತ ಎಂಬುದು ಪ್ರಧಾನಿಗಳ ಸಂದೇಶ. ಮುದ್ರಾ ಯೋಜನೆ ಅನೇಕ ಸಣ್ಣ ಉದ್ಯಮಿಗಳ ಬಲ ನೀಡಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಆರ್ಥಿಕ ಸ್ವಾವಲಂಬನೆಕೊಟ್ಟಿದೆ. ಮುದ್ರಾ ಯೋಜನೆಯ ಸಾಲಗಳಲ್ಲಿ ಶೇ.60ಕ್ಕಿಂತ ಹೆಚ್ಚು ಸಾಲಗಳನ್ನು ಮಹಿಳೆಯರು ಪಡೆದಿದ್ದಾರೆ.
ಪ್ರಧಾನಿ ಮೋದಿ ಕೋಟ್ಯಂತರ ಭಾರತೀಯರ ಮನಸ್ಸಲ್ಲಿ ವಿಶ್ವಾಸಾರ್ಹತೆ ಹುಟ್ಟು ಹಾಕಿದ್ದಾರೆ. ಅವರು ಒಂದು ಭಾಷಣ ಮಾಡಿ ಕರೆ ನೀಡಿದರೆ ಜನ ಅದನ್ನು ಪಾಲಿಸುತ್ತಾರೆ. ಸ್ವಚ್ಛ ಭಾರತ, ವೋಕಲ್ ಫಾರ್ ಲೋಕಲ್, ಕೋವಿಡ್ ಸಮಯದಲ್ಲಿ ವೈದ್ಯರಿಗೆ ಚಪ್ಪಾಳೆಯ ಗೌರವ, ಜಿಎಸ್‌ಟಿ, ನೋಟು ನಿಷೇಧ, ಆಪರೇಶನ್ ಸಿಂಧೂರದ ಸಮಯ ಹೀಗೆ ಅನೇಕ ಸಂದರ್ಭದಲ್ಲಿ ಜನರು ಅವರ ಮಾತಿಗೆ ಕಿವಿಯಾಗಿ ಒಂದಾಗಿ ನಿಂತಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವ ಅರ್ಥ ಮಾಡಿಕೊಳ್ಳಲು ಕೋವಿಡ್-19 ಸಾಂಕ್ರಾಮಿಕದ ಸಮಯವನ್ನೂ ಗಮನಿಸಬೇಕು. ದೇಶದ ಆರೋಗ್ಯ ವ್ಯವಸ್ಥೆ, ಲಸಿಕೆ ಕಾರ್ಯಕ್ರಮ, ಆರ್ಥಿಕ ಚಟುವಟಿಕೆ ಮತ್ತು ಬಡವರ್ಗಗಳಿಗೆ ನೆರವು ನೀಡುವಂಥ ಅನೇಕ ಸವಾಲುಗಳು ಆಗ ಎದುರಾದವು. ಕಷ್ಟದ ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯೂ ಹೌದು ಎಂಬುದನ್ನು ಆ ಸಮಯ ಸಾಬೀತು ಮಾಡಿತು.
ಜಗತ್ತೇ ಒಂದು ಕುಟುಂಬ:
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ‘ವಸುದೈವ ಕುಟುಂಬಕಂʼ ಎಂಬ ಸಂದೇಶವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಅವರು ಕೈಗೊಂಡ ತೀರ್ಮಾನಗಳು, ಇಟ್ಟ ಹೆಜ್ಜೆಗಳಿಂದಾಗಿ ಎಲ್ಲ ದೇಶಗಳು ಭಾರತದ ಜೊತೆ ಸ್ನೇಹ ಬೆಳೆಸಲು ಬಯಸುತ್ತಿವೆ. ಇತ್ತೀಚೆಗೆ ಭಾರತದಲ್ಲೇ ಆಯೋಜಿಸಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ವಿವಿಧ ದೇಶಗಳು ಭಾರತದ ಜೊತೆ ಗಟ್ಟಿಯಾಗಿ ನಿಂತಿರುವುದು ಸಾಬೀತಾಗಿದೆ.
ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಸೇವಾಸಂಕಲ್ಪವಾಗಿ ಆಚರಿಸುವುದು ಎಂದರೆ, ಕೇವಲ ಒಬ್ಬ ರಾಜಕಾರಣಿಯ ಹುಟ್ಟುಹಬ್ಬವನ್ನು ಆಚರಿಸುವುದಲ್ಲ. ಅದು ಒಂದು ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯ ರಾಜಕೀಯ ಪಯಣವನ್ನು ನೆನಪಿಸಿಕೊಳ್ಳುವುದು. ಅದು ದೇಶದ ಅಭಿವೃದ್ಧಿಯ ಕುರಿತಾದ ಅವರ ದೃಷ್ಟಿಕೋನ ಚರ್ಚಿಸುವುದು. ಅದು ಬಡವರು, ಮಹಿಳೆಯರು, ರೈತರು, ಯುವಕರು ಮತ್ತು ಸಾಮಾನ್ಯ ನಾಗರಿಕರಿಗಾಗಿ ಜಾರಿಗೆ ಬಂದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ. ಅವರ ಹೆಸರಿನ ಸೇವಾ ಸಂಕಲ್ಪದ ಅಭಿಯಾನದಲ್ಲಿ ನಾವೆಲ್ಲರೂ ಒಂದಷ್ಟು ಸೇವೆಗಳನ್ನು ಮಾಡೋಣ.

