ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶ ಕಂಡಿದೆ.

-2030ಕ್ಕೆ ದ್ವಿಪಕ್ಷೀಯ ವ್ಯಾಪಾರ 100 ಶತಕೋಟಿ ಡಾಲರ್‌ಗೆ ಏರಿಸುವ ಗುರಿ

-ಶಸ್ತ್ರಾಸ್ತ್ರ, ಇಂಧನ, ನಿರ್ಣಾಯಕ ಖನಿಜ, ರಸಗೊಬ್ಬರ ಕ್ಷೇತ್ರದ ಸಹಕಾರಕ್ಕೆ ಒತ್ತು

- ಯುದ್ಧ ನಿಲ್ಲಿಸಿ । ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆ ಕಾಯಿರಿ: ಪುಟಿನ್‌ಗೆ ಮೋದಿನವದೆಹಲಿ: ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶ ಕಂಡಿದೆ. ಈ ಸಭೆಯಲ್ಲಿ 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಹಾಲಿ 65 ಶತಕೋಟಿ ಡಾಲರ್‌ನಿಂದ 100 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಹಾಗೂ ರಕ್ಷಣೆ, ಇಂಧನ, ನಿರ್ಣಾಯಕ ಖನಿಜಗಳು ಮತ್ತು ರಸಗೊಬ್ಬರ ಪೂರೈಕೆ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಲಾಗಿದೆ.

ಈ ಮೂಲಕ ರಷ್ಯಾ ಜತೆ ವ್ಯಾಪಾರ ನಡೆಸಬೇಡಿ ಎಂಬ ಅಮೆರಿಕದ ಒತ್ತಾಯಕ್ಕೆ ಮಣಿಯದಿರಲು ಭಾರತ ನಿರ್ಧರಿಸಿದೆ.

ಇದೇ ವೇಳೆ, ಇತ್ತೀಚೆಗೆ ರಷ್ಯಾ ಸನಿಹದ ಕಪ್ಪು ಸಮುದ್ರದಲ್ಲಿ ಭಾರತೀಯರು ಇದ್ದ ಹಡಗುಗಳು ದಾಳಿಗೆ ಒಳಗಾದ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದು, ಭಾರತೀಯ ನಾವಿಕರ ಸುರಕ್ಷತೆಗೆ ಆಗ್ರಹಿಸಿದ್ದಾರೆ. ಅಲ್ಲದೆ, ‘ಉಕ್ರೇನ್ ಜತೆ ರಷ್ಯಾ ಮಾತುಕತೆ ನಡೆಸಿ ಸಂಘರ್ಷ ನಿಲ್ಲಿಸಿಬೇಕು. ಯುದ್ಧದ ಅಂತ್ಯಕ್ಕೆ ಶಾಂತಿ ಉಪಕ್ರಮವನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. ಆಗ ಪುಟಿನ್ ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳ ಬಗ್ಗೆ ಮೋದಿಗೆ ವಿವರಣೆ ನೀಡಿದ್ದಾರೆ.

ಇತ್ತೀಚೆಗೆ ಅಸ್ತಾನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ವೇಳೆ ಭೇಟಿಯಾಗಿದ್ದ ಮೋದಿ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕು ಎಂದು ಪುಟಿನ್‌ ಅವರಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.100 ಶತಕೋಟಿ ಡಾಲರ್‌ ವ್ಯಾಪಾರ ಗುರಿ:

ಈ ಬಾರಿಯ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆಯನ್ನು ನೀಗಿಸಲು ಭಾರತೀಯ ರಫ್ತುದಾರರಿಗೆ ರಷ್ಯಾ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಭಾರತ ಮನವಿ ಮಾಡಿದೆ. ಪ್ರಸ್ತುತ ವರ್ಷಕ್ಕೆ ಸುಮಾರು 65 ಶತಕೋಟಿ ಡಾಲರ್‌ನಷ್ಟಿರುವ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 100 ಶತಕೋಟಿ ಡಾಲರ್‌ಗೆ ತಲುಪಿಸುವ ಕಾರ್ಯತಂತ್ರಗಳ ಕುರಿತು ಎರಡೂ ದೇಶಗಳು ಸುದೀರ್ಘವಾಗಿ ಸಮಾಲೋಚನೆ ನಡೆಸಿವೆ.ರಕ್ಷಣಾ ಸಹಕಾರಕ್ಕೆ ಒತ್ತು:ಇದರೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ನೀಡಿರುವ ಮಾಹಿತಿಯಂತೆ, ಬ್ರಹ್ಮೋಸ್ ಕ್ಷಿಪಣಿಗಳ ನವೀಕರಣ, ಬಾಕಿ ಇರುವ ಎಸ್‌-400 ವ್ಯವಸ್ಥೆಗಳ ಪೂರೈಕೆ ಹಾಗೂ ಸು-57 ಫೈಟರ್ ಜೆಟ್‌ಗಳ ಪೂರೈಕೆ ಕುರಿತು ಉಭಯ ದೇಶಗಳು ಚರ್ಚಿಸಿವೆ. ಇಂಧನ ಕ್ಷೇತ್ರದಲ್ಲಿ ನಾಗರಿಕ ಪರಮಾಣು ಶಕ್ತಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಗಿದ್ದು, ರೈಲ್ವೆ, ಸುರಂಗ ನಿರ್ಮಾಣ, ಉಕ್ಕು ವಲಯ, ನಿರ್ಣಾಯಕ ಖನಿಜಗಳು ಹಾಗೂ ಭಾರತೀಯ ಕುಶಲ ಕಾರ್ಮಿಕರಿಗೆ ರಷ್ಯಾದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಮಾತುಕತೆ ನಡೆದಿದೆ.