ಮೂರು ಡಿಸಿಎಂ ಮೂಲಕ ಡಿಕೆಶಿ ಕಟ್ಟಿಹಾಕಲು ಪಿತೂರಿ: ವಿಜಯೇಂದ್ರ

Published : Jun 27, 2024, 01:41 PM IST
BY Vijayendra

ಸಾರಾಂಶ

ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್‌ನಲ್ಲಿ ಪಿತೂರಿ ನಡೆಯುತ್ತಿದೆ. ಆ ಮೂಲಕ ಡಿಕೆಶಿಯ ಸೊಕ್ಕು ಮುರಿಯುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ನವದೆಹಲಿ : ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್‌ನಲ್ಲಿ ಪಿತೂರಿ ನಡೆಯುತ್ತಿದೆ. ಆ ಮೂಲಕ ಡಿಕೆಶಿಯ ಸೊಕ್ಕು ಮುರಿಯುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸೋತಿದ್ದಾರೆ. ಹಾಗಾಗಿ, ಈಗ ಡಿಕೆಶಿಯನ್ನು ಕಟ್ಟಿ ಹಾಕುವ ಪಿತೂರಿ ನಡೆಯುತ್ತಿದೆ. 3-4 ಜನ ಡಿಸಿಎಂ ಮಾಡಲು, ಈ ವಿಷಯದಲ್ಲಿ ಹೈಕಮಾಂಡನ್ನು ಒಪ್ಪಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಇಂಥ ಹೊತ್ತಲ್ಲಿ ಡಿಕೆಶಿಯವರು ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಧೈರ್ಯ ಮಾಡ್ತಾರೆ ಅಂಥ ನನಗೆ ಅನ್ನಿಸುತ್ತಿಲ್ಲ ಎಂದರು. ಮೈತ್ರಿ ಅಭ್ಯರ್ಥಿ ಬಗ್ಗೆ ಬಿಜೆಪಿ ಹೈಕಮಾಂಡ್ ಹಾಗೂ ಎಚ್. ಡಿ. ಕುಮಾರಸ್ವಾಮಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಕಿಡಿ ಕಾರಿದ ವಿಜಯೇಂದ್ರ, ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷ ಆಗಿದೆ. ಕಳೆದೊಂದು ವರ್ಷದಿಂದ ನಿರಂತರ ಬೆಲೆ ಏರಿಕೆಯಾಗುತ್ತಿದೆ. ಗ್ಯಾರಂಟಿ ಹೆಸರಲ್ಲಿ ಜನರ ಕಿವಿಗೆ ಹೂ ಮುಡಿಸಿ, ನಾಡಿನ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ. ಬಿತ್ತನೆ ಬೀಜದಿಂದ ಹಿಡಿದು ಎಲ್ಲದರ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್, ಡಿಸೇಲ್ ಜೊತೆ ಈಗ ಹಾಲಿನ ದರ ಕೂಡ ಹೆಚ್ಚಳ ಮಾಡಿದ್ದಾರೆ. ಪ್ರಶ್ನೆ ಮಾಡಿದ್ರೆ ಉದ್ದಟತನದಿಂದ ಉತ್ತರ ಕೊಡ್ತಾ ಇದ್ದಾರೆ ಎಂದರು.

ರಾಜ್ಯವೀಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಅಭಿವೃದ್ಧಿ ಇಲ್ಲ, ಶಾಸಕರ ಕ್ಷೇತ್ರಕ್ಕೂ ಅನುದಾನ ಕೊಡಲು ಆಗ್ತಾ ಇಲ್ಲ, ನೌಕರರಿಗೆ ಸಂಬಳ ತಡವಾಗುತ್ತಿದೆ. ಒಂದು ಕಡೆ ಅನುಭವಿ ಸಿಎಂ ಇದ್ರೂ ರಾಜ್ಯವನ್ನು ಸಾಲದ ಸುಳಿಗೆ ತಳ್ಳಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ಆಡಳಿತ ಪಕ್ಷದ ಶಾಸಕರಿಂದ ಅವರಿಗೆ ಒತ್ತಡ ಇದೆ. ಜನರ ಪ್ರಶ್ನೆಗೆ ಉತ್ತರ ಕೊಡಬೇಕಾದ ಶಾಸಕರು ಈಗ ಓಡಿ ಹೋಗ್ತಾ ಇದ್ದಾರೆ ಎನ್ನುವ ಸ್ಥಿತಿ ಇದೆ ಎಂದು ಟೀಕಿಸಿದರು.

ಬೀದರ್ ನಲ್ಲಿ ಕಾಂಗ್ರೆಸ್‌ ಮುಸ್ಲಿಮರ ಮತದಿಂದ ಗೆದ್ದಿದೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೊಬ್ಬ ನಾಲಾಯಕ್ ಸಚಿವ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಹಣಕಾಸು ಸಚಿವರಾದ ಮುಖ್ಯಮಂತ್ರಿಯವರು ಜವಾಬ್ದಾರಿ ಹೊರಬೇಕು. ಈ ಸಂಬಂಧ ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು. ಅವರ ರಾಜೀನಾಮೆಗೆ ಆಗ್ರಹಿಸಿ ಜೂ.28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!