ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ: ಈಶ್ವರ್ ಖಂಡ್ರೆ

KannadaprabhaNewsNetwork | Updated : Aug 10 2024, 04:06 AM IST

ಸಾರಾಂಶ

ಜನ ಪಾದಯಾತ್ರೆಗೆ ಮನ್ನಣೆ ಕೊಡಲಿಲ್ಲ. ಅದು ಅವರಿಗೆ ಅರಿವಾಗಿದೆ. ಶಾಸಕರನ್ನು ಖರೀದಿ ಮಾಡಿ ಹಗರಣ ಆರಂಭಿಸಿದ್ದೇ ಬಿಜೆಪಿ. ಅದಕ್ಕೆ ಬೆಂಬಲ ನೀಡಿದ್ದು ಜೆಡಿಎಸ್. ಪ್ರಜಾಪ್ರಭುತ್ವಕ್ಕೆ ಚ್ಯುತಿ ತಂದರು. ಇಡೀ ದೇಶದಲ್ಲಿ ಮಹಾಭ್ರಷ್ಟರು ಬಿಜೆಪಿಯವರು.

 ಮೈಸೂರು :  ಭ್ರಷ್ಟಾಚಾರಿಗಳು, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ ಎಂದು ಬಿಜೆಪಿ- ಜೆಡಿಎಸ್ ಪಾದಯಾತ್ರೆ ವಿರುದ್ಧ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹರಿಹಾಯ್ದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಇವರ ಪಾದಯಾತ್ರೆ ಹಾಸ್ಯಾಸ್ಪದವಾಗಿದೆ. ಅವರ ಬಳಿ ಯಾವ ದಾಖಲೆ ಇದೆ. ಬಿಜೆಪಿ, ಜೆಡಿಎಸ್ ಕಾಲದಲ್ಲಿ ಅನೇಕ ಹಗರಣ ಆಗಿದೆ, ಅದಕ್ಕೆ ಉತ್ತರಿಸಲಿ ಎಂದು ಆಗ್ರಹಿಸಿದರು.

ಜನ ಪಾದಯಾತ್ರೆಗೆ ಮನ್ನಣೆ ಕೊಡಲಿಲ್ಲ. ಅದು ಅವರಿಗೆ ಅರಿವಾಗಿದೆ. ಶಾಸಕರನ್ನು ಖರೀದಿ ಮಾಡಿ ಹಗರಣ ಆರಂಭಿಸಿದ್ದೇ ಬಿಜೆಪಿ. ಅದಕ್ಕೆ ಬೆಂಬಲ ನೀಡಿದ್ದು ಜೆಡಿಎಸ್. ಪ್ರಜಾಪ್ರಭುತ್ವಕ್ಕೆ ಚ್ಯುತಿ ತಂದರು. ಇಡೀ ದೇಶದಲ್ಲಿ ಮಹಾಭ್ರಷ್ಟರು ಬಿಜೆಪಿಯವರು ಎಂದು ಅವರು ವಾಗ್ದಾಳಿ ನಡೆಸಿದರು.

ಕಟ್ಟಾ, ಕೃಷ್ಣಯ್ಯ ಶೆಟ್ಟಿ, ಯಡಿಯೂರಪ್ಪ ಬಂಧನ ಆಗಿತ್ತು, ಏತಕ್ಕಾಗಿ ಆಯಿತು? ಅವರು ಆಡಳಿತದಲ್ಲಿ ಇದ್ದ ವೇಳೆ ದಿನಕ್ಕೊಂದು ಹಗರಣ, ಎಸ್ಸಿ- ಎಸ್ಟಿಗೆ ಘೋರ ಅನ್ಯಾಯ ಮಾಡಿದರು. ಕೋವಿಡ್ ವೇಳೆ ಸತ್ತ ಹೆಣಗಳ ರಾಶಿ ಮೇಲೆ ಹಣ ಮಾಡಿದರು. ಗಂಗಾ ಕಲ್ಯಾಣ ಯೋಜನೆಯಲ್ಲಿ ಹಣ ಹೊಡೆದರು. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ಹಾಗೂ ಬಿಜೆಪಿಯಿಂದ ಕರ್ನಾಟಕ ರಾಜ್ಯದ ಬಗ್ಗೆ ಮಲತಾಯಿ ಧೋರಣೆ, ಪಕ್ಷಪಾತ ಅನುಸರಿಸಲಾಗುತ್ತಿದೆ. ನ್ಯಾಯಯುತವಾಗಿ ಬರಬೇಕಾದ ಪರಿಹಾರ ಹಣ ಕೊಡಲಿಲ್ಲ. ಸುಪ್ರೀಂಕೋರ್ಟ್ ಮೂಲಕ ಪಡೆಯಬೇಕಾಯಿತು. ನಮ್ಮ ತೆರಿಗೆ ಹಣ ಕೊಡಲಿಲ್ಲ. ಅದಕ್ಕಾಗಿ ಜನಾಂದೋಲನ ಎಂದರು.

ರಾಜ್ಯಪಾಲರ ಹುದ್ದೆ ದುರುಪಯೋಗ ಮಾಡಿಕೊಂಡರು. ಸಂವಿಧಾನ ವಿರೋಧಿ ನಡೆ ಅನುಸರಿಸಿದರು. ನೋಟೀಸ್ ನೀಡಿರುವುದು ಖಂಡನಿಯ. ಅದನ್ನು ವಾಪಾಸ್ ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನೀಟ್ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದರು. ಐಟಿ ಹಾಗೂ ಇಡಿ ಮುಂದಿಟ್ಟುಕೊಂಡು ಹೆದರಿಸುವ ಕೆಲಸ ನಡೆದಿದೆ. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದಿದೆ. ಸೋನಿಯಾ ಗಾಂಧಿ, ಖರ್ಗೆ, ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ನಡೆದಿದೆ. ಉತ್ತಮ ಆಡಳಿತ ನೀಡುವ ಮೂಲಕ ಜೆಡಿಎಸ್- ಬಿಜೆಪಿಗೆ ಉತ್ತರ ನೀಡೋಣ ಎಂದರು.

Share this article