ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿನಂತೆ ಈ ಬಾರಿಯ ಬಜೆಟ್‌ನಲ್ಲೂ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ ಸಮುದಾಯ ಹೆಚ್ಚಿನ ಶಿಕ್ಷಣ ಪಡೆಯಲು ಹೊಸ ಶಾಲೆ, ವಸತಿ ನಿಲಯ, ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ಈ ಸಮುದಾಯಗಳಿಗೆ ವಿವಿಧ ಕಲ್ಯಾಣ ಕಾರ್ಯಕ್ರಮ, ಯೋಜನೆ ಪ್ರಕಟಿಸಿ ಹೆಚ್ಚಿನ ಅನುದಾನ ನೀಡುವ ಮೂಲಕ ಮತ್ತೊಮ್ಮೆ ತಾವು ಅಹಿಂದ ವರ್ಗದ ಏಳಿಗೆಗೆ ಬದ್ಧ ಎಂದು ಪ್ರಕಟಿಸಿದ್ದಾರೆ.

ಬೌದ್ಧ ಅಭಿವೃದ್ಧಿ ನಿಗಮ

ಪ್ರಮುಖವಾಗಿ ಮೊದಲ ಬಾರಿಗೆ ಸಮಾಜ ಕಲ್ಯಾಣ ಇಲಾಖೆ ಅಡಿ ಬೌದ್ಧ ಅಭಿವೃದ್ಧಿ ನಿಗಮ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಮಹಿಳಾ ಕೋ-ಅಪರೇಟಿವ್‌ ಸೊಸೈಟಿ ಸ್ಥಾಪನೆ, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್‌ ಭವನ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಇದಲ್ಲದೇ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಒಟ್ಟಾರೆ ₹44,632 ಕೋಟಿ ಅನುದಾನ ಒದಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ. ಜಾತಿ ಮತ್ತು ಪಂಗಡದ ಮಹಿಳಾ ಉದ್ಯೋಗಿಗಳಿಗೆ 10 ವಸತಿ ನಿಲಯ ಆರಂಭಿಸುವುದಾಗಿ ಘೋಷಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ 31 ವಸತಿ ಶಾಲೆಗಳ ಉನ್ನತೀಕರಣ, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ 40 ಹೊಸ ವಸತಿ ಶಾಲೆ, ಕ್ರೈಸ್‌ ವಸತಿ ಶಾಲೆಗಳಿಗೆ ಮೂಲ ಭೂತ ಸೌಕರ್ಯ ಕಲ್ಪಿಸಲು ₹50 ಕೋಟಿ ಅನುದಾನ ನೀಡಿದ್ದಾರೆ.


ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯ

ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಹಣ ಮೀಸಲಿಟ್ಟಿದ್ದಾರೆ. ಪರಿಶಿಷ್ಟ ಸಮಾಜದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ನಾಲ್ಕು ವಸತಿ ಶಾಲೆ, ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಒದಗಿಸಿದ್ದಾರೆ. ಡಾ। ಬಿ.ಆರ್‌.ಅಂಬೇಡಕರ್‌ ಭೇಟಿ ನೀಡಿದ ನಾಲ್ಕು ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ ನಾಲ್ಕು ಕ್ರೈಸ್‌ ವಸತಿ ಶಾಲೆ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ.

ಅದೇ ರೀತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಹೊಸದಾಗಿ ವಿದ್ಯಾರ್ಥಿ ನಿಲಯ, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯಮ ಆರಂಭಿಸಲು ಸಹಾಯ ಧನ ನೀಡಿದ್ದಾರೆ, ಹಿಂದುಳಿದ ವರ್ಗಗಳ ಮಡಿವಾಳ, ಸವಿತಾ ಸಮಾಜಕ್ಕೆ ಸ್ವ ಉದ್ಯೋಗ ಆರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವ ಕಾರ್ಯಕ್ರಮ ಪ್ರಕಟಿಸಿದ್ದಾರೆ.