ಮುಡಾ: ತನಿಖಾ ವರದಿ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜ. 28ವರೆಗೆ ಕೋರ್ಟ್‌ ಕಾಲಾವಕಾಶ

Published : Dec 20, 2024, 07:49 AM IST
Muda

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಮುಡಾ ನಿವೇಶನ ಹಂಚಿಕೆ ಅಕ್ರಮದ ಕುರಿತು ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದ ಕಾಲಾವಕಾಶವನ್ನು 2025ರ ಜ.28ರವರೆಗೆ ವಿಸ್ತರಣೆ ಮಾಡಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಮುಡಾ ನಿವೇಶನ ಹಂಚಿಕೆ ಅಕ್ರಮದ ಕುರಿತು ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದ ಕಾಲಾವಕಾಶವನ್ನು 2025ರ ಜ.28ರವರೆಗೆ ವಿಸ್ತರಣೆ ಮಾಡಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

 ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿತು. ಮೊದಲಿನ ಆದೇಶದಂತೆ ಡಿ.24ರೊಳಗೆ ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಹೈಕೋರ್ಟ್‌ ಈ ಆದೇಶದಿಂದ ತನಿಖಾ ವರದಿ ಸಲ್ಲಿಸುವ ಗಡುವು 2025ರ ಜ.28ರವರೆಗೆ ವಿಸ್ತರಣೆಯಾಗಿದೆ.

ಇದಕ್ಕೂ ಮುನ್ನ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕೆಂಬ ಅರ್ಜಿದಾರರ ಮುಖ್ಯ ಮನವಿಗೆ ಮತ್ತು ಅರ್ಜಿಯಲ್ಲಿ ಇ.ಡಿ.ಯನ್ನು ಪ್ರತಿವಾದಿಯಾಗಿಸಲು ಕೋರಿದ್ದ ಮಧ್ಯಂತರ ಮನವಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ಮುಖ್ಯಮಂತ್ರಿ ಸೇರಿ ಇತರೆ ಪ್ರತಿವಾದಿಗಳು ಕಾಲಾವಕಾಶ ಕೋರಿದರು. ಮತ್ತೊಂದೆಡೆ ಪ್ರಕರಣ ತನಿಖಾ ವರದಿಯನ್ನು ಲೋಕಾಯುಕ್ತ ಪೊಲೀಸರು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2024ರ ಡಿ.24ಕ್ಕೆ ಸಲ್ಲಿಸಬೇಕಿತ್ತು. ಆದರೆ, ಈವರೆಗೂ ವರದಿ ಸಲ್ಲಿಸಿಲ್ಲ.

ಈ ಅಂಶ ಪರಿಗಣಿಸಿದ ನ್ಯಾಯಪೀಠ ಲೋಕಾಯುಕ್ತ ತನಿಖೆಗೆ ತಡೆ ನೀಡಿತು. ಜೊತೆಗೆ, ವಿಚಾರಣೆಯನ್ನು ಜ.15ಕ್ಕೆ ನಿಗದಿಪಡಿಸಿ, ಅಷ್ಟರಲ್ಲಿ ಎಲ್ಲಾ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿತು.

ಈ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌, ನ್ಯಾಯಪೀಠವು ತಮ್ಮ ವಾದ ಆಲಿಸಬೇಕು. ಆತುರದಿಂದ ಮಧ್ಯಂತರ ಆದೇಶ ನೀಡಬಾರದು. ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶಿಸಬಾರದು. ಅರ್ಜಿದಾರರು ತನಿಖೆಗೆ ತಡೆಯಾಜ್ಞೆ ಕೇಳಿಲ್ಲ. ಹೀಗಾಗಿ ಸ್ವಯಂಪ್ರೇರಿತವಾಗಿ ಆದೇಶ ನೀಡಬಾರದು, ಲೋಕಾಯುಕ್ತ ತನಿಖೆ ಮುಂದುವರಿಯುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಮೊದಲಿನ ಆದೇಶ ಮಾರ್ಪಡಿಸಿತು. ಬಳಿಕ ನ್ಯಾಯಾಲಯ ಲೋಕಾಯುಕ್ತ ಪೊಲೀಸರ ತನಿಖೆಗೆ ಯಾವುದೇ ತಡೆ ನೀಡದೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕಿರುವ ಅವಧಿಯನ್ನು 2025ರ ಜ.28ಕ್ಕೆ ವಿಸ್ತರಣೆ ಮಾಡಿತು.

- ಈ ಹಿಂದೆ ಡಿ.24ರೊಳಗೆ ವರದಿ ಸಲ್ಲಿಕೆಗೆ ಸೂಚಿಸಿದ್ದ ಕೋರ್ಟ್‌

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ