ಸಿ.ಟಿ. ರವಿ ವಿರುದ್ಧ ಲಕ್ಷ್ಮೀ ಎರಡು ಅವಾಚ್ಯ ಶಬ್ದ ಬಳಕೆಯ ವಿಡಿಯೋ ಸಾಕ್ಷ್ಯ ಬಿಡುಗಡೆ

Published : Dec 24, 2024, 04:28 AM IST
lakshmi hebbalkar

ಸಾರಾಂಶ

ಸಿ.ಟಿ. ರವಿ ಬಳಸಿದ ಅವಾಚ್ಯ ಶಬ್ದ ಕುರಿತಂತೆ ಮತ್ತು ರಾಹುಲ್‌ ಗಾಂಧಿಗೆ ಡ್ರಗ್‌ ಅಡಿಕ್ಟ್‌ ಅಂದ ಬಗ್ಗೆ ಸೋಮವಾರ ಇಲ್ಲಿ ಎರಡು ವಿಡಿಯೋ ಬಿಡುಗಡೆ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಿ.ಟಿ. ರವಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.

ಬೆಳಗಾವಿ : ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ತಮ್ಮ ವಿರುದ್ಧ ಸಿ.ಟಿ. ರವಿ ಬಳಸಿದ ಅವಾಚ್ಯ ಶಬ್ದ ಕುರಿತಂತೆ ಮತ್ತು ರಾಹುಲ್‌ ಗಾಂಧಿಗೆ ಡ್ರಗ್‌ ಅಡಿಕ್ಟ್‌ ಅಂದ ಬಗ್ಗೆ ಸೋಮವಾರ ಇಲ್ಲಿ ಎರಡು ವಿಡಿಯೋ ಬಿಡುಗಡೆ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಿ.ಟಿ. ರವಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದರ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿಗಳಿಗೂ ಕೂಡ ಈಗ ಬಿಡುಗಡೆ ಮಾಡಿದ ವಿಡಿಯೋ ನೀಡುತ್ತೇನೆ. ಜೊತೆಗೆ ಅವರು ಕೂಡ ಮಾಧ್ಯಮದಲ್ಲಿ ನೋಡಿದ್ದಾಗಿ ಹೇಳಿದ್ದಾರೆ. ವಿಡಿಯೋ ಕೊಟ್ಟರೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ಎಸ್ಎಲ್ ವರದಿ ಬೇಗ ಬಹಿರಂಗವಾಗಬೇಕು. ಈ ನಿಟ್ಟಿನಲ್ಲಿ ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದರು.

ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ ಎಂದು ಮಾತು ಆರಂಭಿಸಿದ ಹೆಬ್ಬಾಳ್ಕರ್‌, ಸಿ.ಟಿ.ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ, ಮಹಾತ್ಮ ಗಾಂಧಿ ಅಧ್ಯಕ್ಷತೆ ಬೆಳಗಾವಿ ಅಧಿವೇಶನ ಶತಮಾನೋತ್ಸವದ ನಂತರ ಪ್ರಧಾನಿ, ರಾಷ್ಟ್ರಪತಿ ಭೇಟಿಗೂ ಅವಕಾಶ ಕೇಳುತ್ತೇನೆ ಎಂದು ತಿಳಿಸಿದರು.

ಸಿ.ಟಿ. ರವಿ ಅವರ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ. ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರಿಗೆ ಈಗಾಗಲೇ ಮನವಿ ಮಾಡಿದ್ದು, ನನಗೆ ಎಷ್ಟೆ ತೊಂದರೆಯಾದರೂ ಚಿಂತೆಯಿಲ್ಲ. ಯಾವ, ಯಾರ ಒತ್ತಡಕ್ಕೂ ಮಣಿಯದೇ ತನಿಖೆ ಮುಂದುವರಿಸಲು ಕೋರಿದ್ದೇನೆ ಎಂದು ತಿಳಿಸಿದರು.

ಘಟನೆ ಬಳಿಕ ಸಿ.ಟಿ.ರವಿ ಹಾರ ತುರಾಯಿ ಹಾಕಿಸಿಕೊಂಡು ವೈಭವೀಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲೂ ಬಿಜೆಪಿಯವರು ಸಿ.ಟಿ. ರವಿ ಬೆನ್ನಿಗೆ ನಿಂತಿರುವುದು ಸರಿಯಲ್ಲ. ಬಿಜೆಪಿಯವರು ಗೋಮುಖ ವ್ಯಾಘ್ರಗಳು ಎಂದು ಆಕ್ಷೇಪಿಸಿದರು.

ನನ್ನ ಪತಿ ಕೊಲೆ ಮಾಡುವುದನ್ನು ಸಚಿವೆ ಹೆಬ್ಬಾಳ್ಕರ್‌ ನೋಡಿದ್ದಾರಾ ಎಂದು ಸಿ.ಟಿ. ರವಿ ಅವರ ಪತ್ನಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್‌, ಹಾಗಾದರೆ ರಾಹುಲ್‌ ಗಾಂಧಿ ಡ್ರಗ್ಸ್‌ ತೆಗೆದುಕೊಳ್ಳುವುದನ್ನು ರವಿ ನೋಡಿದ್ದರೇನಮ್ಮ? ರಾಹುಲ್‌ ಗಾಂಧಿ ಅವರೊಂದಿಗೆ ಅವರೇನಾದರೂ ಡ್ರಗ್ಸ್‌ ತೆಗೆದುಕೊಂಡಿದ್ದರಾ? ಅಥವಾ ಅವರು ತೆಗೆದುಕೊಳ್ಳುವಾಗ ಪಕ್ಕದಲ್ಲಿಯೇ ಇದ್ದರಾ ಎಂದು ಖಾರವಾಗಿ ಪ್ರಶ್ನಿಸಿದರು. ಆಧಾರ ರಹಿತವಾಗಿ ಆರೋಪ ಮಾಡುವಾಗ ನಿಮಗೂ ಸಹಿತ ಇನ್ನೊಬ್ಬರು ಆರೋಪ ಮಾಡುತ್ತಾರೆಂಬ ಕಲ್ಪನೆ ಇರಲಿ ಎಂದು ತಿರುಗೇಟು ನೀಡಿದರು.

ಸಿ.ಟಿ. ರವಿ ಅವರಿಗೆ ಏನಾಗಿದೆ, ಎಷ್ಟಾಗಿದೆ ಗಾಯ? ಎಷ್ಟು ಹೊಲಿಗೆ ಬಿದ್ದಿವೆ. ಪೊಲೀಸರು ಎನ್ ಕೌಂಟರ್ ಮಾಡುತ್ತಿದ್ದರು, ಅಂತೀರಲ್ಲ ನಾಚಿಕೆ ಆಗಲ್ವೆ ನಿಮಗೆ? ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕು ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಬೆಳಗಾವಿ ಚಲೋ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ‌ಬೆಳಗಾವಿ ಶಾಂತಿಯ ತೋಟ. ಇದು ಕಿತ್ತೂರು ರಾಣಿ ಚನ್ನಮ್ಮನ ನಾಡು. ಇಲ್ಲಿಗೆ ನಾಲಿಗೆ ಸ್ವಚ್ಛವಾಗಿಟ್ಟುಕೊಂಡು ಯಾರು ಬೇಕಾದರೂ ಬರಬಹುದು. ಅಂತಹ ವ್ಯಕ್ತಿಗಳಿಗೆ ತುಂಬು ಹೃದಯದ ಸ್ವಾಗತ ಎಂದು ಹೆಬ್ಬಾಳಕರ್ ಹೇಳಿದರು.

ಸಚಿವ ಸತೀಶ ಜಾರಕಿಹೊಳಿ ಅವರು ಇಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದಾ ನನ್ನ ಹಿತ ಚಿಂತಕರು. ನನ್ನ ಹಿತದೃಷ್ಟಿಯಿಂದ ಅವರು ಹೇಳಿರಬಹುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ನಾಯಕರು ನನಗೆ ಧೈರ್ಯ ತುಂಬಿದ್ದಾರೆ ಎಂದು ಸ್ಮರಿಸಿಕೊಂಡರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು