ಹಾಲಿ ಡಿಸಿಎಂ, ಮಾಜಿ ಡಿಸಿಎಂ ಡಿಶುಂ ಡಿಶುಂ !

KannadaprabhaNewsNetwork |  
Published : Aug 14, 2025, 01:00 AM ISTUpdated : Aug 14, 2025, 04:39 AM IST
dk shivakumar, dr cn ashwath narayan

ಸಾರಾಂಶ

ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಕುರಿತ ಚರ್ಚೆ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗಲಾಟೆಯಾಗಿ ಕೆಲ ಕಾಲ ಕೋಲಾಹಲವೇ ಸೃಷ್ಟಿಯಾದ ಪ್ರಸಂಗ ನಡೆಯಿತು.

 ವಿಧಾನಸಭೆ :  ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಕುರಿತ ಚರ್ಚೆ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗಲಾಟೆಯಾಗಿ ಕೆಲ ಕಾಲ ಕೋಲಾಹಲವೇ ಸೃಷ್ಟಿಯಾದ ಪ್ರಸಂಗ ನಡೆಯಿತು. ಪರಿಣಾಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನಡುವೆ ಏಕವಚನ ಪ್ರಯೋಗದ ಜತೆಗೆ ಸಣ್ಣದೊಂದು ವಾಗ್ಯುದ್ಧವೇ ನಡೆಯಿತು.

ರಸಗೊಬ್ಬರ ಸಮಸ್ಯೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಹಾದಿ ತಪ್ಪಿ ಸ್ಮಾರ್ಟ್‌ ಮೀಟರ್‌, ರಾಮನಗರ ರಾಜಕೀಯ, ಜೈಲು, ಮತಗಳವು ಬಗ್ಗೆ ಕಾಂಗ್ರೆಸ್‌-ಬಿಜೆಪಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ ಪರಿಣಾಮ ಸದನದಲ್ಲಿ ಗದ್ದಲ ಏರ್ಪಟ್ಟಿತು. ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದ ಬಳಿಕವೂ ಸದಸ್ಯರ ಗದ್ದಲ ಹಾಗೂ ಮಾತಿನ ಜಟಾಪಟಿ ಮುಂದುವರೆಯಿತು.

ಬುಧವಾರ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ಬಳಿಕ ಇದೇ ವಿಚಾರವಾಗಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮಾತನಾಡುವಾಗ, ರಾಜ್ಯದ ಹಲವು ಜಿಲ್ಲೆಗಳಲ್ಲಿ ರಸಗೊಬ್ಬರ ಸಮಸ್ಯೆ ಉಂಟಾಗಿದೆ. ರೈತನೊಬ್ಬ ಗೊಬ್ಬರ ಸಿಗದೆ ಬೇಸರಗೊಂಡು ಮಣ್ಣು ತಿಂದು ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ರೈತ ಮಣ್ಣು ತಿನ್ನುವ ಚಿತ್ರ ಹಲವು ಪತ್ರಿಕೆಗಳಲ್ಲಿ ಬಂದಿದೆ ಎಂದು ಚಿತ್ರಗಳನ್ನು ಸದನದಲ್ಲಿ ಪ್ರದರ್ಶಿಸಿದರು.

ಗೊಬ್ಬರ ಕೊಟ್ಟಿದ್ದರೆ ಮಣ್ಣು ಯಾಕೆ ತಿನ್ನುತ್ತಿದ್ದ?:

ಆಗ ಎದ್ದು ನಿಂತ ಕೃಚಿ ಸಚಿವ ಎನ್‌.ಚಲುವರಾಯಸ್ವಾಮಿ, ಮಣ್ಣು ತಿನ್ನಲು ಕಾರಣವೇನು? ಮಣ್ಣು ತಿನ್ನಿಸಿದವರು ಯಾರು ಎಂಬುದನ್ನೂ ಹೇಳಿ ಎಂದು ಒತ್ತಾಯಿಸಿದರು. ಇದಕ್ಕೆ ಬೆಲ್ಲದ್‌, ನೀವು ಸರಿಯಾದ ಸಮಯಕ್ಕೆ ಗೊಬ್ಬರ ಕೊಟ್ಟಿದ್ದರೆ ಆ ರೈತ ಏಕೆ ಮಣ್ಣು ತಿನ್ನುತ್ತಿದ್ದ ಎಂದ ಪ್ರಶ್ನಿಸಿದರು. ಮುಂದುವರೆದು, ಅಕ್ಟೋಬರ್‌ ವರೆಗೆ 11.17 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಿರಿ. ಕೇಂದ್ರ ಸರ್ಕಾರ ಆ.11ರ ತನಕ ರಾಜ್ಯಕ್ಕೆ 7.60 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಕೊಡಬೇಕಿತ್ತು. ಬದಲಾಗಿ 9.70 ಲಕ್ಷ ಮೆಟ್ರಿಕ್‌ ಟನ್‌ ಕೊಟ್ಟಿದೆ ಎಂದು ಹೇಳಿದರು.

ನೀವು ಸತ್ಯವಂತರಾ?:

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ನೀವು ಸದನಕ್ಕೆ ಸುಳ್ಳು ಹೇಳಬೇಡಿ. ನಾವು 12 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು. ಇದಕ್ಕೆ ಅರವಿಂದ ಬೆಲ್ಲದ್, ನೀವು ಉತ್ತರ ಕೊಡುವಾಗ ಮಾತನಾಡಿ ಎಂದರು. ಇದರಿಂದ ಕೆರಳಿದ ಸಚಿವ ಚಲುವರಾಯಸ್ವಾಮಿ, ನೀವು ಸುಳ್ಳು ಹೇಳಿದರೂ ಕೇಳಿಸಿಕೊಂಡು ಕೂರಬೇಕಾ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಹಾಗಾದರೇ ನೀವು ಸತ್ಯವಂತರಾ? ಎಂದು ಕಿಚಾಯಿಸಿದರು.

ಆಗ ಸಚಿವ ಕೆ.ಜೆ.ಜಾರ್ಜ್‌ ಮಧ್ಯಪ್ರವೇಶಿಸಿ, ನೀವು ಸತ್ಯ ಹರಿಶ್ಚಂದ್ರರಾ ಎಂದು ಅಶ್ವತ್ಥನಾರಾಯಣ ಅವರನ್ನು ಪ್ರಶ್ನಿಸಿದರು. ಇದರಿಂದ ರೊಚ್ಚಿಗೆದ್ದ ಅಶ್ವತ್ಥನಾರಾಯಣ, ನಿಮ್ಮ ಇಲಾಖೆ ಬಗ್ಗೆ ಮಾತನಾಡಲು ನಿಮಗೆ ಧಮ್‌ ಇಲ್ಲ. ಸ್ಮಾರ್ಟ್‌ ಮೀಟರ್‌ ಬಗ್ಗೆ ಉತ್ತರ ನೀಡಲಾಗದೆ ಓಡಿ ಹೋದವರು ನೀವು ಎಂದು ಜಾರ್ಜ್‌ ಮೇಲೆ ಮುಗಿಬಿದ್ದರು. ಇದಕ್ಕೆ ಸಚಿವ ಕೆ.ಜೆ.ಜಾರ್ಜ್‌, ಸ್ಮಾರ್ಟ್ ಮೀಟರ್‌ ವಿಚಾರ ನ್ಯಾಯಾಲಯದಲ್ಲಿದೆ. ಕಾನೂನು ಇದೆ. ನೀವು ಸುಳ್ಳು ಹೇಳ್ಳಬೇಡಿ ಎಂದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಅಶ್ವತ್ಥನಾರಾಯಣ, ನೀವು ಅಸಮರ್ಥರು. ನೀವೊಬ್ಬ ಅಸಮರ್ಥ ಸಚಿವ ಎಂದು ವಾಗ್ದಾಳಿ ನಡೆಸಿದರು.

ನೀನು ಅಸಮರ್ಥ- ಡಿಕೆಶಿ ವಾಗ್ದಾಳಿ:

ತಕ್ಷಣ ಸಚಿವ ಕೆ.ಜೆ.ಜಾರ್ಜ್‌ ಪರ ಬ್ಯಾಟಿಂಗ್‌ಗೆ ಇಳಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನೀನು ಅಸಮರ್ಥ. ಜನ ವೋಟ್‌ ಹಾಕಿ ಜಾರ್ಜ್‌ ಅವರನ್ನು ಇಲ್ಲಿ ಕೂರಿಸಿದ್ದಾರೆ. ಅಲ್ಪಸಂಖ್ಯಾತ ಮಂತ್ರಿಯನ್ನು ಅಸಮರ್ಥ ಎನ್ನುವೆಯಾ? ನೀನು ಭ್ರಷ್ಟಾಚಾರದ ಪಿತಾಮಹ ಎಂದು ಅಶ್ವತ್ಥನಾರಾಯಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಈ ಮಾತಿನಿಂದ ಕೆರಳಿದ ಅಶ್ವತ್ಥನಾರಾಯಣ, ನಿಮ್ಮ ಇತಿಹಾಸವೇ ಭ್ರಷ್ಟಾಚಾರ. ಯಾರು ಭ್ರಷ್ಟಾಚಾರದ ಪಿತಾಮಹ ಎಂದು ನಾನು ಹೇಳುವುದೇ ಬೇಡ. ಎಲ್ಲವೂ ಜನಕ್ಕೆ ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ಮರುವಾಗ್ದಾಳಿ ನಡೆಸಿದರು.

ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತು. ಈ ಮಾತಿನಿಂದ ಕೆರಳಿ ಕೆಂಡವಾದ ಡಿ.ಕೆ.ಶಿವಕುಮಾರ್‌, ನೀನು ರಾಮನಗರಕ್ಕೆ ಬಂದಿದ್ದೆ. ನಿನಗೆ ಅಲ್ಲಿ ಠೇವಣಿ ಸಿಗಲಿಲ್ಲ ಎಂದು ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ ಚೋರ್‌ ಹೈ, ಬಿಜೆಪಿಗರು ಮತಗಳ್ಳರು ಘೋಷಣೆ:

ಇದರಿಂದ ಸದನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರ ನಡುವೆ ವಾಕ್ಸಮರ ಶುರುವಾಗಿ ಗಲಾಟೆಯಾಯಿತು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಬಂದು ತಮ್ಮ ಆಸನದಲ್ಲಿ ಕೂತರು. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್‌ ಸದನವನ್ನು ಐದು ನಿಮಿಷ ಮುಂದೂಡಿದರು. ನಂತರವೂ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಪರಸ್ಪರ ಘೋಷಣೆ ಕೂಗಲು ಆರಂಭಿಸಿದರು. ಬಿಜೆಪಿ ಶಾಸಕರು, ಶೇಮ್‌ ಶೇಮ್‌... ಎಂದು ಕಾಂಗ್ರೆಸ್‌ ಶಾಸಕರನ್ನು ಕಿಚಾಯಿಸಿದರು. ಇದಕ್ಕೆ ಕಾಂಗ್ರೆಸ್‌ ಶಾಸಕರು, ಬಿಜೆಪಿ ಚೋರ್‌ ಹೈ, ವೋಟ್‌ ಕಳ್ಳರು ಎಂದು ಘೋಷಣೆ ಕೂಗಿದರು.

PREV
Read more Articles on

Recommended Stories

ಮತಗಳ್ಳತನ ಕುರಿತ ಕಾಂಗ್ರೆಸ್‌ ವಿಡಿಯೋ ಬಿಡುಗಡೆ
ರಾಹುಲ್‌, ಪ್ರಿಯಾಂಕಾ ಕ್ಷೇತ್ರದಲ್ಲೂ ಮತಗಳ್ಳತನ: ಬಿಜೆಪಿ ತಿರುಗೇಟು