ಬೆಂಗಳೂರು : ದಸರಾ ಹಬ್ಬ ಹಾಗೂ ರಜೆಗಳ ಹಿನ್ನೆಲೆ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಇದರ ನಿವಾರಣೆಗೆ ಅಭಿಯಾನ ಕೈಗೊಂಡಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಸರ್ವಜ್ಞನಗರ ಕ್ಷೇತ್ರದ ಅಭಿವೃದ್ಧಿ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಟ್ಟಡ ತಾಜ್ಯ ಹಾಗೂ ಕಸ ಎಸೆಯುವವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರನ್ನು ಸ್ವಚ್ಛವಾಗಿಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತಾಜ್ಯ, ಕಸದ ರಾಶಿಯನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಡಬ್ಬಿಗಳು ಇಟ್ಟಿರುವ ಬಗ್ಗೆ ಪಾಲಿಕೆಗಳ ಆಯುಕ್ತರಿಂದ ವರದಿ ಕೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡುವಂತೆ ತಿಳಿಸಿದ್ದೇನೆ. ಎಲ್ಲೆಂದರಲ್ಲಿ ಕಸ ಬಿದ್ದಿದ್ದರೆ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದು ಅವರು ಮನವಿ ಮಾಡಿದರು.
₹1 ಕೋಟಿ ದಂಡ ಸಂಗ್ರಹ : ಏಕ ಬಳಕೆಯ ಪ್ಲಾಸ್ಟಿಕ್ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರಿಂದ 1 ಕೋಟಿ ರು. ದಂಡ ಸಂಗ್ರಹ ಮಾಡಲಾಗಿದೆ. ಜೊತೆಗೆ ಕಸ ಸಂಗ್ರಹ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮೊದಲು 198 ವಾರ್ಡ್ ಗಳು ಮಾತ್ರ ಇದ್ದವು ಈಗ 300ಕ್ಕೂ ಹೆಚ್ಚು ವಾರ್ಡ್ ಗಳು ಆಗುತ್ತಿರುವುದರಿಂದ ಕಸ ಸಂಗ್ರಹ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗುವುದು. ಅಲ್ಲದೇ ಬೆಂಗಳೂರಿನ ವ್ಯಾಪ್ತಿಗೆ ಸೇರದ ಆದರೆ ಪಕ್ಕ ಪಕ್ಕದ ಪ್ರದೇಶಗಳ ಹಕ್ಕು ಸೂಚನೆ ನೀಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನಧಿಕೃತ ಕೇಬಲ್ ನಗರಕ್ಕೆ ಕಪ್ಪು ಚುಕ್ಕೆ: ನಗರದಾದ್ಯಂತ ಎಲ್ಲೆಂದರಲ್ಲಿ ಕೇಬಲ್ ಎಳೆಯಲಾಗಿದೆ. ಬೆಸ್ಕಾಂಗೆ ಸೇರಿದ ಕಂಬಗಳಲ್ಲಿ ಟಿವಿ ಕೇಬಲ್ ನೇತಾಡುತ್ತಿದ್ದು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಸಮಸ್ಯೆ ಬಗೆಹರಿಸಲು ಸಚಿವರಾದ ಕೆ.ಜೆ.ಜಾರ್ಜ್ ಅವರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಡಕ್ಟ್ ಒಳಗಡೆ ಕೇಬಲ್ ಅಳವಡಿಸಲು ಯಾರೂ ಸಹ ಸಹಕಾರ ನೀಡುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಓಸಿ-ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್: 8ರ ಬಳಿಕ ಸಿಎಂ ಸಭೆ
ರಾಜ್ಯದಲ್ಲಿ ಓಸಿ ಮತ್ತು ಸಿಸಿ ಇಲ್ಲದ 4 ಲಕ್ಷ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕುರಿತು ಅ.8ರ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಅವರ ಜತೆ ಮುಂದಿನ ವಾರ ಚರ್ಚಿಸಲಾಗುವುದು. ಈ ವೇಳೆಯೇ ‘ಎ’ ಹಾಗೂ ‘ಬಿ’ ಖಾತಾ ವಿಚಾರವಾಗಿಯೂ ಚರ್ಚೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಎ ಮತ್ತು ಬಿ ಖಾತಾ ಪ್ರಕ್ರಿಯೆ ವಿಳಂಬವಾಗುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎ ಮತ್ತು ಬಿ ಖಾತಾ ವಿಚಾರದಲ್ಲಿ ಕ್ರಾಂತಿಕಾರಿ ಕೆಲಸಗಳು ನಡೆದಿವೆ. ಈ ಮೊದಲು ಹೇಗಿತ್ತು, ಏನಾಗಿದೆ ಎಂದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪಿಪಿಟಿ ತಯಾರಿಸಿ ಪ್ರತಿಯೊಂದೂ ಮಾಹಿತಿ ನೀಡಲಾಗುವುದು. ಟೀಕೆ ಮಾಡುವವರಿಗೂ ಇದರಿಂದ ಉತ್ತರ ದೊರೆಯಲಿದೆ ಎಂದರು.