ಕಾಂಗ್ರೆಸ್‌ ಗೆದ್ರೆ ಬರಗಾಲ ಎಂದಿದ್ದ ವಿಪಕ್ಷಗಳಿಗೆ ಡ್ಯಾಂ ಭರ್ತಿಯೇ ಉತ್ತರ : ಮಧು ಬಂಗಾರಪ್ಪ

ಸಾರಾಂಶ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಬರಗಾಲ ಬರುತ್ತದೆ ಎಂದು ವಿಪಕ್ಷದವರು ಹೇಳುತ್ತಿದ್ದರು. ಈಗ ಅವರ ಬಾಯಿ ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು

ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಬರಗಾಲ ಬರುತ್ತದೆ ಎಂದು ವಿಪಕ್ಷದವರು ಹೇಳುತ್ತಿದ್ದರು. ಈಗ ಅವರ ಬಾಯಿ ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದವರಿಗೆ ನಾವು ಉತ್ತರ ಕೊಡಲ್ಲ. 

ರಾಜ್ಯದ ಎಲ್ಲಾ ಜಲಾಶಯಗಳು ತುಂಬಿರುವುದೇ ಉತ್ತರ ಎಂದರು. ಇದೇ ವೇಳೆ ಕಳೆದ ಬಾರಿ ನನಗೆ ಅನುಭವ ಇರಲಿಲ್ಲ. ಆಗ ಹೊಸದಾಗಿ ಮಂತ್ರಿಯಾಗಿದ್ದೆ. ನೀರಿನ ಕೊರತೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಈಗ ಶರಾವತಿ ನದಿ ನೀರಿನಿಂದ ಸಾಗರ ಹೊಸನಗರ ಸೊರಬ ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಜವಾಬ್ದಾರಿ ಮುಗಿದಿದೆ: ಶರಾವತಿ ನದಿ ಸಂತ್ರಸ್ತ ಪರವಾಗಿ ರಾಜ್ಯ ಸರ್ಕಾರದ ಜವಾಬ್ದಾರಿ ಮುಗಿದಿದೆ. ಕೇಂದ್ರ ಸರ್ಕಾರದವರು ಜವಾಬ್ದಾರಿ ಹೊರಬೇಕು. ಶಿವಮೊಗ್ಗದಲ್ಲಿ ಹರಿಯುವ ತುಂಗಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ತುಂಗಾ ನದಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಚೆಕ್ ಡ್ಯಾಮ್ ಗಳು ಹಾಗೂ ಬ್ಯಾರೇಜ್‌ಗಳ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಹಾಗೆಯೇ ಕೆರೆಗಳ ಹೂಳನ್ನು ಎತ್ತಿ ನೀರು ಸಂಗ್ರಹಣೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

Share this article