ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ - ವೀರನಹೊಸಹಳ್ಳಿಯಿಂದ ಮೈಸೂರಿಗೆ ಬಂದ 9 ಆನೆಗಳು

Published : Aug 27, 2026, 11:08 AM IST
Mysuru Dasara 2026

ಸಾರಾಂಶ

ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು. 2026ರ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ

ವೀರನಹೊಸಹಳ್ಳಿ : ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು.

2026ರ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು. ಸುಮಾರು 2 ಕಿ.ಮೀ. ಗಜಪಯಣ ಬಳಿಕ ಲಾರಿಗಳಲ್ಲಿ ಹೊರಟ 9 ಆನೆಗಳು ಸಂಜೆಯ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ತಲುಪಿದವು.

ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ ಮತ್ತು ಕಾವೇರಿ, ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ ಮತ್ತು ಲಕ್ಷ್ಮೀ, ಮತ್ತಿಗೋಡು ಆನೆ ಶಿಬಿರದಿಂದ ಏಕಲವ್ಯ ಮತ್ತು ಶ್ರೀಕಂಠ ಆನೆಗಳು ಗಜಪಯಣದಲ್ಲಿ ಪಾಲ್ಗೊಂಡಿದ್ದವು. ನಂತರ ಪ್ರತ್ಯೇಕ ಲಾರಿಗಳ ಮೂಲಕ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿದವು.

ವಿಶೇಷ ಪೂಜೆ ಸಲ್ಲಿಕೆ:

ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಬಳಿ ಸಾಂಪ್ರದಾಯಿಕವಾಗಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ನಡೆದ ಪೂಜೆ ವೇಳೆ ಆನೆಗಳ ಪಾದ ತೊಳೆದ ಅರ್ಚಕರು, ನಂತರ ಅವುಗಳಿಗೆ ದೃಷ್ಟಿದೋಷ ತೆಗೆದರು. ಬಳಿಕ ಹಣೆ, ಪಾದಗಳಿಗೆ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಕಡುಬು, ಪಂಚ ಕಜ್ಜಾಯ, ಎಲೆ, ಅಡಿಕೆ, ಗಂಧ, ಪಂಚಫಲ, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು. ತದನಂತರ ಆನೆಗಳಿಗೆ ನವಧಾನ್ಯಗಳ ಪೂಜೆ ನೆರವೇರಿಸಿದರು.ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಗಜಪಯಣಕ್ಕೆ ಬೆಳಗ್ಗೆ 10 ರಿಂದ 10.28ರೊಳಗಿನ ತುಲಾ ಲಗ್ನದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಮಾವುತರ ಸೂಚನೆಯಂತೆ ಸೊಂಡಿಲೆತ್ತಿ ನಮಿಸಿದ ಆನೆಗಳು ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು.

ಇದೇ ವೇಳೆ ವೀರಗಾಸೆ, ಪೂಜಾ ಕುಣಿತ, ಡೊಳ್ಳು, ನಗಾರಿ, ಚಂಡೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಾಕಾರಗಳು ಮೇಳೈಸಿದವು. ಮುತ್ತೈದೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಮಂಗಳವಾದ್ಯಗಳೊಂದಿಗೆ ಗಜಪಯಣ ಆರಂಭವಾಯಿತು.

ನಾಳೆ ಗಜಪಡೆ ಅರಮನೆ ಪ್ರವೇಶ:

ಕಾಡಿನಿಂದ ನಾಡಿಗೆ ಆಗಮಿಸಿರುವ 9 ಆನೆಗಳು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಆ.28ರಂದು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಂತರ ಅರಮನೆ ಆವರಣದಲ್ಲಿ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ಆರಂಭಿಸಲಿವೆ.

ಸುಗ್ರೀವ ಬದಲು ಶ್ರೀಕಂಠ:

ಸುಗ್ರೀವ ಆನೆ ಹುಲಿ ಕಾರ್ಯಾಚರಣೆಯಲ್ಲಿ ನಿರತರಾಗಿದೆ. ಹಾಗಾಗಿ ಸುಗ್ರೀವ ಆನೆ ಬದಲು ಶ್ರೀಕಂಠ ಆನೆಯನ್ನು ಮೊದಲ ತಂಡದಲ್ಲಿ ಅರಣ್ಯ ಇಲಾಖೆ ಸೇರಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪಾರ್ಕ್‌ಗಳ ತಿದ್ದುಪಡಿ ಕಾಯ್ದೆ ತಿರಸ್ಕಾರಕ್ಕೆ ಗೌರ್ನರ್‌ಗೆ ಮನವಿ
ಕಾಂಗ್ರೆಸ್‌ನಲ್ಲಿ ನಾಗೇಂದ್ರ ರಾಜೀನಾಮೆ ಪಾಲಿಟಿಕ್ಸ್‌