ಬೆಳಗಾವಿ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಬಿಗಿಹಿಡಿತ ಹೊಂದಿದ್ದ ಕತ್ತಿ ಕುಟುಂಬಕ್ಕೆ ಆಘಾತ ನೀಡಿರುವ ಜಾರಕಿಹೊಳಿ ಕುಟುಂಬ ಮೇಲುಗೈ ಸಾಧಿಸಿದೆ.
ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಶನಿವಾರ ಒಟ್ಟು 16 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಜಾರಕಿಹೊಳಿ ಬೆಂಬಲಿಗರು ಅವಿರೋಧ ಆಯ್ಕೆಯಾಗಿದ್ದು, ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಮೂರು ದಶಕಗಳಿಂದ ಕತ್ತಿ ಕುಟುಂಬ ಬಿಡಿಸಿಸಿ ಬ್ಯಾಂಕಿನಲ್ಲಿ ಅಧಿಪತ್ಯ ಸಾಧಿಸಿತ್ತು.
ಮಾಜಿ ಸಚಿವ ಉಮೇಶ ಕತ್ತಿಯವರ ಪ್ರಭಾವ ಪ್ರಮುಖ ಕಾರಣವಾಗಿತ್ತು. ಜಿಲ್ಲಾ ರಾಜಕಾರ ಇಲ್ಲಿ ಬಿಗಿಹಿಡಿತ ಹೊಂದಿದ್ದ ಕತ್ತಿಯವರು ತಾವು ಶಾಸಕ, ಸಚಿವರಾದರೆ ಡಿಸಿಸಿ ಬ್ಯಾಂಕಿಗೆ ಸಹೋದರ ರಮೇಶ ಕತ್ತಿಯವರನ್ನು ಅಧ್ಯಕ್ಷರ ನ್ನಾಗಿ ಮಾಡಿದ್ದರು. ರಮೇಶ ಕತ್ತಿ 6 ಅವಧಿಗೆ ಸದಸ್ಯರಾಗಿ, ನಾಲ್ಕು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರೂ ಎರಡೂರು ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಅಭ್ಯ ರ್ಥಿಗಳನ್ನು ಗೆಲ್ಲಿಸಲು ಶಕ್ತವಾಗಿತ್ತು. ಕತ್ತಿ ಕುಟುಂಬದ ಬಿಗಿಹಿಡಿತ ಇದ್ದ ಕಾರಣ ಸಹಕಾರ ಕ್ಷೇತ್ರದತ್ತ ಚಿತ್ತ ಹರಿಸಲಿಲ್ಲ.
ಆದರೆ, 2022ರಲ್ಲಿ ರಮೇಶ ಕತ್ತಿ ಸಹೋದರ ಉಮೇಶ ಕತ್ತಿ ನಿಧನಾನಂತರ ಸಕ್ರಿಯವಾದ ಜಾರಕಿಹೊಳಿ ಕುಟುಂಬ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರೊಂದಿಗೆ ಸೇರಿ ಅಧ್ಯಕ್ಷ ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನದಿಂದ ಒತ್ತಾ ಯಪೂರ್ವಕವಾಗಿ ರಾಜೀನಾಮೆ ನೀಡುವಂತೆ ಮಾಡಿ, ರಾಯಬಾಗದ ಅಪ್ಪಾ ಸಾಹೇಬ ಕುಲಗೋಡೆರನ್ನು ಅಧ್ಯಕ್ಷರನ್ನಾಗಿಸಿದ್ದರು. ಬಳಿಕ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ವಿದ್ಯುತ್ ಬಳಕೆದಾರರರ ಸಹಕಾರ ಸಂಘದಲ್ಲೂ ಜಾರಕಿಹೊಳಿ ಹಾಗೂ ಜೊಲ್ಲೆಯ ವರು ಸೇರಿಕೊಂಡು ಕತ್ತಿ ಪರವಾಗಿದ್ದ ಆಡಳಿತ ಮಂಡಳಿಯನ್ನೇ ತಮ್ಮತ್ತ ಸೆಳೆದುಕೊಂಡು ಕತ್ತಿ ಕುಟುಂಬಕ್ಕೆ ಭಾರೀ ಹೊಡೆತ ನೀಡಿದ್ದರು.
ಈಚೆಗೆ ನಡೆದ ವಿದ್ಯುತ್ ಬಳಕೆದಾರರ ಸಹಕಾರಿ ಸಂಘದಚುನಾವಣೆಯಲ್ಲಿ ಕತ್ತಿ ಕುಟುಂಬವನ್ನು ಮೂಲೆಗುಂಪು ಮಾಡುವ ಪಣತೊಟ್ಟ ಜಾರಕಿ ಹೊಳಿ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆ ಯಾಗಿ ತೆಗೆದುಕೊಂಡು ತಮ್ಮ ಪ್ಯಾನೆಲ್‌ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮೂರು ತಿಂಗಳ ಮುಂಚಿತವೇ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿ ದ್ದರು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಮುಕ್ಕಾಂ ಹೂಡಿ ಹಳ್ಳಿಹಳ್ಳಿಗೆ ಹೋಗಿ ಸಭೆ ನಡೆಸಿದ್ದರು.
ಇದರಿಂದ ಕೆರಳಿದ ರಮೇಶ ಕತ್ತಿ ಕುಟುಂಬ ತಮ್ಮ ಪ್ಯಾನೆಲ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೊಡೆತಟ್ಟಿದ್ದರು. ಸ್ವಾಭಿಮಾನದ ಅಪ್ರಯೋ ಗಿಸಿ ಜಾರಕಿಹೊಳಿ ಕುಟುಂಬದ ಮೇಲೆ ವೈಯ ಕ್ತಿಕ ಟೀಕೆ ಮೂಲಕ ಕ್ಷೇತ್ರದಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದ ಪರಿಣಾಮ ಎಲ್ಲ ಕ್ಷೇತ್ರಗಳಲ್ಲಿ ಕತ್ತಿ ಬೆಂಬಲಿತರು ಜಯಭೇರಿ ಬಾರಿಸಿದ್ದರು.
ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ವಿಪ ಸದಸ್ಯ ಲಖನ್ ಜಾರಕಿಹೊಳಿ ಸೇರಿ ರಣತಂತ್ರ ರೂಪಿಸಿ ವ್ಯಾಪಕ ಪ್ರಚಾರ ಕೈಗೊಂಡರೂ ಸಂಪೂರ್ಣ ಪ್ಯಾನಲ್ ನೆಲಕಚ್ಚಿದ್ದರಿಂದ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಗೆ ಪೆಟ್ಟು ಬಿದ್ದಿತ್ತು. ಜಾರಕಿಹೊಳಿ ಕುಟುಂಬದ್ದೇ ಪ್ರಾಬಲ್ಯ ಬಿಡಿಸಿಸಿ ಬ್ಯಾಂಕ್ 16 ನಿರ್ದೇಶಕರ ಸ್ಥಾನಕ್ಕೆ ಬರುವ 19ರಂದು ಚುನಾವಣೆ ನಡೆಯಲಿದ್ದು, ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ವಾಗಿತ್ತು. ಕಳೆದ ನಾಲೈದು ತಿಂಗಳಿನಿಂದ ಜಾರ ಕಿಹೊಳಿ ಕುಟುಂಬ ಬಿಡಿಸಿಸಿ ಬ್ಯಾಂಕ್ ಚುನಾ ವಣೆಗೆ ತಾಲೀಮು ನಡೆಸಿದ್ದು ಜಾರಕಿಹೊಳಿ ಕುಟುಂಬ ಬಹುತೇಕ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿತ್ತು.
ಬ್ಯಾಂಕಿನ ಖಾನಾಪೂರ ತಾಲೂಕಿನ ಸದಸ್ಯ ಸ್ಥಾನದಮೇಲೆ ಕಣ್ಣಿಟ್ಟಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಹೋದರ, ಮೇಲ್ಮನೆ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವ ರನ್ನು ಕಣಕ್ಕಿಳಿಸಲು 2 ವರ್ಷದಿಂದ ತಯಾರಿ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಜಾರಕಿಹೊಳಿ ಹಾಗೂ ಹೆಬ್ಬಾಳಕರ್ ಕುಟುಂಬದ ಮಧ್ಯೆ ಹೊಂದಾಣಿಕೆ ಏರ್ಪಟ್ಟು ಚೆನ್ನರಾಜ ಹಟ್ಟಿಹೊಳಿಯನ್ನು ಡಿಸಿಸಿ ಬ್ಯಾಂಕ್ ಕಣದಿಂದ ಹಿಂದೆ ಸರಿಸಿ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರನ್ನಾಗಿ ಮಾಡಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಕ್ಷೇತ್ರವಾದ ಬೆಳಗಾವಿ ಗ್ರಾಮೀಣ ತಾಲೂಕಿನ ಸದಸ್ಯ ಸ್ಥಾನಕ್ಕೆ ರಾಹುಲ್ ಜಾರಕಿಹೊಳಿ ಉಮೇದು ವಾರಿಕೆ ಸಲ್ಲಿಸಿದ್ದು, ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದರು. ಆದರೆಕೊನೆಘಳಿಗೆಯಲ್ಲಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಕಸರತ್ತು ಸಾಧ್ಯವಾಗಿಲ್ಲ.
ರಮೇಶ ಜಾರಕಿಹೊಳಿ ಅವರ ಪುತ್ರ ಅಮರ ನಾಥ ಜಾರಕಿಹೊಳಿ ಅವಿರೋಧ ಆಯ್ಕೆ ಆಗಿ ದ್ದಾರೆ. ಯರಗಟ್ಟಿ ತಾಲೂಕಿನಿಂದ ಬಾಲಚಂದ್ರ ಜಾರಕಿಹೊಳಿ ಬೆಂಬಲಿತರಾದ ಶಾಸಕ ವಿಶ್ವಾಸ ವೈದ್ಯ, ಸವದತ್ತಿ ತಾಲೂಕಿನಿಂದ ವಿರುಪಾಕ್ಷ ಮಾಮನಿ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಚಿಕ್ಕೋಡಿ ತಾಲೂಕಿನಿಂದ ತಟಸ್ಥ ಅಭ್ಯರ್ಥಿಯಾಗಿ ಶಾಸಕ ಗಣೇಶ ಹುಕ್ಕೇರಿ ಅವಿರೋಧ ಆಯ್ಕೆ ಆಗಿದ್ದಾರೆ. ಬ್ಯಾಂಕಿನ 16 ಕ್ಷೇತ್ರಗಳ ಪೈಕಿ ಬಾಲಚಂದ್ರ ಜಾರಕಿಹೊಳಿ ಬೆಂಬಲಿತರು 13 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದು, 4 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಸಹೋದರರ ಸವಾಲ್: ಈ ಮಧ್ಯೆ ಚನ್ನಮ್ಮ ಕಿತ್ತೂರು, ನಿಪ್ಪಾಣಿ, ರಾಮದುರ್ಗ, ಅಥಣಿ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಚನ್ನಮ್ಮ ಕಿತ್ತೂರಲ್ಲಿ ಶಾಸಕ ಬಾಬಾಸಾಹೇಬ ಸಹೋದರ ನಾನಾಸಾಹೇಬ ಪಾಟೀಲ ವಿರುದ್ಧ
ಅವರ ಬೀಗರಾದ ಮಾಜಿ ಸಚಿವ ಡಿ.ಬಿ. ಇನಾಮದಾರ ಪುತ್ರ ವಿಕ್ರಮ ಇನಾಮದಾರ ಎದುರಾಳಿಯಾಗಿದ್ದಾರೆ.
ಏನಿದು ತಂತ್ರ?
• 3 ದಶಕದಿಂದ ಬೆಳಗಾವಿ ಡಿಸಿಸಿ ಬ್ಯಾಂಕಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಉಮೇಶ್ ಕತ್ತಿ 2022ರಲ್ಲಿ ಕತ್ತಿ ನಿಧನಾನಂತರ ಅಧಿಕಾರ ಕಸಿಯಲು ಮುಂದಾದ ಜಾರಕಿಹೊಳಿ ಟೀಂ
• ಕತ್ತಿ ಸಾವಿನ ನಂತರ ರಮೇಶ್ ಕತ್ತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವಲ್ಲಿ ಯಶ
• ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅತ್ಯಂತ ಯೋಜಿತ ತಂತ್ರಗಾರಿಕೆ
• ರಮೇಶ್, ಸತೀಶ್ ಜಾರಕಿಹೊಳಿ ಪುತ್ರರು, ಸಚಿವೆ ಹೆಬ್ಬಾಳ ಸೋದರ ಅಖಾಡಕ್ಕೆ