ಏನು ತೀರ್ಮಾನ ಆಗಿವೆಯೋ ಅವು ಜಾರಿ ಆಗ್ತವೆ : ಡಿಕೆ ಶಿವಕುಮಾರ್‌

Published : Apr 27, 2026, 05:53 AM IST
DK Shivakumar

ಸಾರಾಂಶ

ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಯಾವ ರಾಜಕೀಯವೂ ಇಲ್ಲ. ಏನೇನು ತೀರ್ಮಾನ ಆಗಿವೆಯೋ ಅವು ಚಾಲ್ತಿಗೆ ಬರಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಯಾವ ರಾಜಕೀಯವೂ ಇಲ್ಲ. ಏನೇನು ತೀರ್ಮಾನ ಆಗಿವೆಯೋ ಅವು ಚಾಲ್ತಿಗೆ ಬರಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ವಾಪಸಾದ ಬಳಿಕ ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾರ್ಮಿಕವಾಗಿ ಮಾತನಾಡಿ, ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸವಿದೆ. ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಪಕ್ಷ ಮಾಡುತ್ತದೆ. ಹೈಕಮಾಂಡ್‌ ನಾಯಕರಿಗೆ ಅದು ಗೊತ್ತಿದೆ. ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ, ರಾಜಕೀಯವೂ ಇಲ್ಲ ಎಂದರು.

ನಾಯಕತ್ವ ಬದಲಾವಣೆ ಚರ್ಚೆ ಮಾಡಲ್ಲ:

ನಾಯಕತ್ವ ಬದಲಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ನಿಮಗೆ ಈ ಬಗ್ಗೆ ಗೊಂದಲ ಇರಬಹುದು. ನಾನು ಆ ಬಗ್ಗೆ ಯಾವತ್ತೂ ಚರ್ಚೆ ಮಾಡಲ್ಲ. ಹೈಕಮಾಂಡ್‌ ಯಾವಾಗ, ಏನು ಸೂಚನೆ ನೀಡುತ್ತೋ ಅದನ್ನು ಪಾಲಿಸುತ್ತೇವೆ. ನಾನು ಮತ್ತು ಮುಖ್ಯಮಂತ್ರಿ ಅವರು ಈ ಹಿಂದೆಯೂ ಅದನ್ನು ಹೇಳಿದ್ದು, ಅದರಂತೆಯೇ ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೊಟ್ಟ ಮಾತಿನಂತೆ ಒಳ ಮೀಸಲಾತಿ:

ಒಳ ಮೀಸಲಾತಿ ವಿಚಾರವಾಗಿ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಬಿಜೆಪಿಯವರ ಕೈಯಲ್ಲಿ ಏನೂ ಮಾಡಲು ಆಗಿಲ್ಲ. ನಾವೇನು ಮಾತು ಕೊಟ್ಟಿದ್ದೆವೋ ಅದರಂತೆ ನಡೆದಿದ್ದೇವೆ. ಈ ಹಿಂದೆ ಶೇ.17ರ ಮೀಸಲಾತಿಗೂ ಒಳ ಮೀಸಲಾತಿ ನೀಡಿದ್ದೆವು. ಈಗಲೂ ಸರಳವಾಗಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಬಲ-ಎಡ ಸಮುದಾಯದವರಿಗೆ ಪರಿಹಾರ ನೀಡಿದ್ದೇವೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಿದೆ. 30-40 ವರ್ಷಗಳಿಂದ ಇದ್ದ ಸಮಸ್ಯೆ ಈಡೇರಿಸಿದ್ದೇವೆ ಎಂದರು.

ಹುಟ್ಟುಹಬ್ಬಕ್ಕೆ ಫ್ಲೆಕ್ಸ್‌ ಹಾಕಬೇಡಿ: ಮನವಿ

ತಮ್ಮ ಹುಟ್ಟುಹಬ್ಬಕ್ಕೆ ಯಾರೂ ಫ್ಲೆಕ್ಸ್‌ ಮತ್ತು ಬ್ಯಾನರ್‌ ಹಾಕಬಾರದು ಎಂದ ಡಿ.ಕೆ.ಶಿವಕುಮಾರ್‌, ಒಂದು ವೇಳೆ ಫ್ಲೆಕ್ಸ್‌ ಮತ್ತು ಬ್ಯಾನರ್‌ ಹಾಕಿದರೆ ಅವರ ವಿರುದ್ಧ ಸಂಬಂಧಪಟ್ಟ ನಗರ ಪಾಲಿಕೆ ಕ್ರಮ ಜರುಗಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

ಅವಶ್ಯಕತೆ ಇದ್ದರೆ ಹಣ ಪಾವತಿಸಿ ಜಾಹೀರಾತುಗಳನ್ನು ನೀಡಬಹುದು. ರಸ್ತೆಯಲ್ಲಿ ಫ್ಲೆಕ್ಸ್‌ ಹಾಕಿ ರಸ್ತೆ ಸೌಂದರ್ಯ ಹಾಳು ಮಾಡಬಾರದು. ಅನಧಿಕೃತವಾಗಿ ರಸ್ತೆಯಲ್ಲಿ ಫ್ಲೆಕ್ಸ್ ಹಾಕಿದರೆ ದುಬಾರಿ ದಂಡ ವಿಧಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರು ಮೂಲಸೌಕರ್ಯದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಟೀಕಿಸಿರುವ ಬಗ್ಗೆ ಮಾತನಾಡಿ, ತೇಜಸ್ವಿ ಸೂರ್ಯ ಇರುವುದೇ ಟೀಕೆ ಮಾಡುವುದಕ್ಕೆ. ಅವರ ಕೈಯಲ್ಲಿ ಇನ್ನೇನು ಮಾಡಲೂ ಆಗುವುದಿಲ್ಲ. ಟೀಕೆ ಮಾಡದೆ ಅವರೇನು ಹೊಗಳುತ್ತಾರೆಯೇ? ಅವರು ಹೊಗಳುತ್ತಾರೆ ಎಂದು ಭಾವಿಸಿದರೆ ನಾವು ಮೂರ್ಖರಾಗುತ್ತೇವೆ ಎಂದರು.

- ಯಾವಾಗ ಏನು ಆಗಬೇಕೋ ಆಗುತ್ತೆ

- ಹೈಕಮಾಂಡ್‌ ಸೂಚನೆ ಪಾಲಿಸುತ್ತೇವೆ

- ದಿಲ್ಲಿಯಿಂದ ಮರಳಿದ ಬೆನ್ನಲ್ಲೇ ಹೇಳಿಕೆ

- ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆಲಂಗಾಣಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್‌

- ಅಲ್ಲಿಂದಲೇ ನೇರವಾಗಿ ದೆಹಲಿಗೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಚರ್ಚೆ

- ಒಂದೂವರೆ ತಾಸು ಚರ್ಚೆ ನಡೆಸಿದ್ದ ಡಿಕೆಶಿ. ಬಳಿಕ ಪಕ್ಷದ ಇತರ ನಾಯಕರ ಭೇಟಿ

- ಸರ್ಕಾರಕ್ಕೆ 3 ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಡಿಕೆಶಿ ದೆಹಲಿ ಭೇಟಿ ಸಂಚಲನ

- ಡಿಸಿಎಂ ರಾಜಧಾನಿ ಭೇಟಿಯ ಬಗ್ಗೆ ನಾನಾ ರಾಜಕೀಯ ವಿಶ್ಲೇಷಣೆ, ತೀವ್ರ ಲೆಕ್ಕಾಚಾರ

- ದೆಹಲಿಯಿಂದ ಬೆಂಗಳೂರಿಗೆ ಮರಳಿದ ಬೆನ್ನಲ್ಲೇ ಡಿಕೆಶಿಯಿಂದ ಮಾರ್ಮಿಕ ಮಾತು

- ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವಾಗ ಏನು ಆಗಬೇಕೋ ಅದು ಆಗುತ್ತದೆ

- ಏನೇನು ತೀರ್ಮಾನ ಆಗಿವೆಯೋ ಅವು ಚಾಲ್ತಿಗೆ ಬರಲಿವೆ ಎಂದ ಉಪಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

7 ಪಕ್ಷಾಂತರಿಗಳ ಸದಸ್ಯತ್ವ ರದ್ದು : ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ
ಕಾಂಗ್ರೆಸ್ಸಲ್ಲಿ ಗೊಂದಲ ಇರೋದು 100% ನಿಜ, ಇತ್ಯರ್ಥವಾಗುವ ಕಾಲ ಬಂದಿದೆ : ಜಾರಕಿಹೊಳಿ