2028ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಕನಸು ಕಾಣಬೇಕಷ್ಟೆ : ಎಚ್ಡಿಕೆ ಲೇವಡಿ

KannadaprabhaNewsNetwork |  
Published : Jun 22, 2025, 11:48 PM ISTUpdated : Jun 23, 2025, 07:51 AM IST
22ಕೆಎಂಎನ್ ಡಿ11 | Kannada Prabha

ಸಾರಾಂಶ

ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನ ಸೌಧದಲ್ಲೂ ಮಧ್ಯವರ್ತಿಗಳ ಅವಶ್ಯಕತೆಯೂ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಅವರೇ ಎಲ್ಲಾ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಮನೆ ಎಂಬಂತೆ ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರೇ ಆರೋಪ ಮಾಡಿದ್ದಾರೆ.

  ಮಂಡ್ಯ :  ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಕನಸು ಕಾಣಬೇಕಷ್ಟೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಸಿಎಂ ಹುದ್ದೆಯನ್ನು ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟುಕೊಡುತ್ತಾರೆ. ನಮ್ಮ ಕೈಯ್ಯಲ್ಲಿ ಏನೂ ಇಲ್ಲ. ಅದೆಲ್ಲವೂ ಆ ಭಗವಂತನ ಕೈಯ್ಯಲ್ಲಿದೆ ಎಂದು ಮೇಲೆ ಕೈ ತೋರಿಸಿದರು.

ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನ ಸೌಧದಲ್ಲೂ ಮಧ್ಯವರ್ತಿಗಳ ಅವಶ್ಯಕತೆಯೂ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಅವರೇ ಎಲ್ಲಾ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಮನೆ ಎಂಬಂತೆ ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರೇ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ವಸತಿ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಆಕ್ರಮಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸಚಿವ ಎಚ್.ಕೆ. ಪಾಟೀಲ್ ಬರೆದಿರುವ ಪತ್ರವನ್ನು ತೇಲಿ ಬಿಡಲಾಗಿದೆ. ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ಜನರು ಹಾದಿಬೀದಿಗಳಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಇದು ಅತ್ಯಂತ ಕೆಟ್ಟ ವ್ಯವಸ್ಥೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಎನ್ನುವುದು ಸಮಾಜದ ಪ್ರತಿಯೊಬ್ಬರ ಕನಸು. ಆದರೆ, ಬಡಜನರ ಪಾಲಿಗೆ ಇದೊಂದು ಗಗನ ಕುಸುಮವಾಗಿದೆ. ಬಡ ಜನರಿಂದಲೇ ವಸತಿ ಇಲಾಖೆಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಎಲ್ಲಾ ಇಲಾಖೆಯಲ್ಲೂ ಇದು ನಡೆಯುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ. ಆ ಪಕ್ಷದ ಶಾಸಕರೇ ಈ ರೀತಿ ಮಾತನಾಡಿರುವುದರಲ್ಲಿ ಯಾವುದೇ ಅಚ್ಚರಿಯೂ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವರೆಗೂ ಯಾವುದೇ ಕೆಲಸವೂ ದುಡ್ಡು ಕೊಡದೆ ಆಗುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ದೂರಿದರು.

ಸರ್ಕಾರದ ಹಲವು ಇಲಾಖೆಗಳಲ್ಲಿ ದುಡ್ಡು ರಿಲೀಸ್ ಆಗಲು ಶಾಸಕರೇ ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್‌ಕೊಡಿ ದುಡ್ಡು ತಗೊಂಡು ಬರುತ್ತೇವೆ ಎಂದು ಹೇಳುತ್ತಾರೆ. ಶಾಸಕರ ಲೆಟರ್‌ಹೆಡ್‌ನಿಂದ ಮಧ್ಯವರ್ತಿಗಳು ದುಡ್ಡು ಕೊಟ್ಟು ಮನೆ ತರುತ್ತಾರೆ. ನನ್ನ ಬಳಿಯೂ ಮನೆ ತರಲು ಈ ಸರ್ಕಾರದಲ್ಲಿ ಅಷ್ಟು ಕೊಟ್ಟಿದ್ದೇವೆ ಎಂದು ಚರ್ಚೆ ಮಾಡುತ್ತಾರೆ ಎಂದರು.

ಟನಲ್ ಅನ್ನು ರಾಜ್ಯದೆಲ್ಲೆಡೆ ಮಾಡಲಿ:

ಸುರಂಗ ರಸ್ತೆ (ಟನಲ್)ಯನ್ನು ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಲಿ. ಬೇಡ ಎಂದವರು ಯಾರು?. ಯಾವ ಟನಲ್ ಮಾಡುತ್ತಾರೆ ನೋಡೋಣ ಎಂದ ಕೇಂದ್ರ ಸಚಿವರು, ಅವರ ಹೇಳುವ ಮಾತುಗಳು ಯಾವುದೂ ಆಗಲ್ಲ ಎಂದು ಟೀಕಿಸಿದರು.

ಈಗ 2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಎತ್ತಿನ ಹೊಳೆ ಬಂದಿಲ್ಲ. ಈಗಾಗಲೇ ಯೋಜನೆಗಾಗಿ 14, 15 ಸಾವಿರ ಕೋಟಿ ಲೂಟಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನ ಹೊಳೆ ಯೋಜನೆಗಾಗಿ 2013ರಲ್ಲಿ ಇದೇ ಸರ್ಕಾರ ಗುದ್ದಲಿ ಪೂಜೆ ಮಾಡಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡುತ್ತೇವೆ ಎಂದು ಹೇಳಿದರು. 2025 ಬಂದರೂ ಇನ್ನೂ ನೀರು ಮಾತ್ರ ಬಂದಿಲ್ಲ. ಎತ್ತಿನ ಹೊಳೆ ನೀರು ಕೊಡುತ್ತೇವೆ ಎಂದು ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯುವ ತರಕಾರಿನೂ ಕೊಳ್ಳದಂತೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯದ ವಿ.ಸಿ.ಫಾರ್ಮ್ ನಲ್ಲಿ ಕೃಷಿ ವಿವಿ ಮಾಡುತ್ತಿದ್ದಾರೆ. ಅದನ್ನು ಎಷ್ಟು ದಿನ ನಡೆಸುತ್ತಾರೋ ಗೊತ್ತಿಲ್ಲ. ಬೀದರ್‌ನಲ್ಲಿ ಪಶು ವೈದ್ಯಕೀಯ ವಿಶ್ವ ವಿಶ್ವವಿದ್ಯಾಲಯ ಮಾಡಿದ್ದರು. ಅದು ಮುಚ್ಚುವ ಸ್ಥಿತಿಯಲ್ಲಿದೆ. ಹಣ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಇವರು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ವಿವಿಗಳನ್ನು ಮುಚ್ಚಿದ್ದಾರೆ. ಬರೀ ಪ್ರಚಾರಕ್ಕೆ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿ ರಾಮ್‌ ಜಿ: ಈಗ ಎಚ್ಡಿಕೆಗೆ ಡಿಕೆಶಿ ಸವಾಲ್‌
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು