ಬಡವರ ಮನೆಗಳಿಗೆ ಸರ್ಕಾರ ಕನ್ನ - ಬಿ.ಆರ್.ಪಾಟೀಲ್ ಆರೋಪವೇ ಸಾಕ್ಷಿ: ಆರ್.ಅಶೋಕ್

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 07:53 AM IST
22ಕೆಎಂಎನ್ ಡಿ13 | Kannada Prabha

ಸಾರಾಂಶ

ವಸತಿ ಯೋಜನೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ ನೀಡುವ ಮೂಲಕ ದಲಿತ, ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. 

  ಮಂಡ್ಯ :  ಬಡವರ ಮನೆಗಳಿಗೆ ಸರ್ಕಾರ ಕನ್ನ ಹಾಕುತ್ತಿದೆ. ಇದಕ್ಕೆ ಅವರದ್ದೇ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪವೇ ಸಾಕ್ಷಿ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನುಡಿದಂತೆ ನಡೆಯುವ ಸರ್ಕಾರವಲ್ಲ. ಹಣ ಹೊಡೆಯುವ ಸರ್ಕಾರವಾಗಿದೆ. ಬಡವರಿಗೆ ಅನ್ನ ಕೊಡಿ ಎಂದರೆ ಅವರಿಗೆ ನೀಡಬೇಕಾದ ಮನೆಗಳಿಗೆ ಕನ್ನ ಹಾಕುತ್ತಿದೆ ಎಂದು ದೂರಿದರು.

ರಾಜೀವ್‌ಗಾಂಧಿ ವಸತಿ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಎಲ್ಲ ವಸತಿ ಯೋಜನೆಗಳಲ್ಲಿ ಕಮೀಷನ್ ಮೂಲಕ ಹಣ ಹೊಡೆಯುವುದೇ ಸರ್ಕಾರದ ಛಾಳಿಯಾಗಿದೆ. ಈ ಹಗರಣ ಪಕ್ಷದ ಶಾಸಕರ ಮುಖಾಂತರವೇ ಬಯಲಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೂ ಅನ್ಯಾಯ:

ವಸತಿ ಯೋಜನೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ ನೀಡುವ ಮೂಲಕ ದಲಿತ, ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ಹಿಂದೂಗಳ ಮುಖಾಂತರ 60ರಷ್ಟು ಕಮೀಷನ್ ಹೊಡೆದು, 15 ರಷ್ಟು ಮುಸ್ಲಿಂಮರಿಗೆ ಮೀಸಲಾತಿ ನೀಡುವ ಮೂಲಕ ನಮ್ಮದು ಟಿಪ್ಪು ಸರ್ಕಾರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ದೂರಿದರು.

ವಸತಿ ಯೋಜನೆಗಳಿರುವುದು ಬಡವರು, ನಿರ್ಗತಿಕರಿಗೆ, ಹಿಂದುಳಿದವರಿಗೆ ಮನೆ ನೀಡಲು. ಆದರೆ, ಈ ಸರ್ಕಾರ ಉಳ್ಳವರಿಗೆ ವಸತಿಯನ್ನು ಮಾರಿಕೊಳ್ಳುತ್ತಿದೆ. ಬಡವರ ರಕ್ತವನ್ನು ಜಿಗಣೆಗಳಂತೆ ಹೀರುತ್ತಾ, ಬಡವರ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ಸಂಕಲ್ಪ:

ಇತ್ತೀಚೆಗೆ ಬಳ್ಳಾರಿಯಲ್ಲಿ ಸಂಕಲ್ಪ ಸಮಾವೇಶ ಬಡವರ ನಾಶ ಹಾಗೂ ಭ್ರಷ್ಟಾಚಾರದ ಸಂಕಲ್ಪವಾಗಿದೆ. ಅಬಕಾರಿ, ವಾಲ್ಮೀಕಿ ನಿಗಮ, ಮೈಸೂರು ಮೂಡಾದಲ್ಲಿ ಹಗರಣ ನಡೆಸುವ ಮೂಲಕ ಅಧಿಕೃತವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಒಬ್ಬ ಮಂತ್ರಿ ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದಿದ್ದು ಹಾಗೂ ಸಿಎಂ 14 ನಿವೇಶನಗಳನ್ನು ವಾಪಸ್ ನೀಡಿದ್ದೇ ಸಾಕ್ಷಿ ಎಂದರು.

ಬಿ.ಆರ್.ಪಾಟೀಲ್ ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರೂ ಬೋಗಸ್ ಎಂದು ಬಿಂಬಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ನಾನು ಪಾಟೀಲ್ ಅವರನ್ನು ಸಂಪರ್ಕಿಸಿದಾಗ ಪಾಟೀಲ್ ಯಾರಿಗೂ ಅಂಜದೆ ಈ ಆಡಿಯೋ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ ಎಂದರು.

ಬಿ.ಆರ್.ಪಾಟೀಲ್ ಹಿರಿಯ ರಾಜಕಾರಣಿಯಾಗಿದ್ದು, ಮೇಲ್ಮನೆ ಉಪ ಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇಮಕ ಮಾಡಿದ್ದಾರೆ. ಇಂತಹ ವ್ಯಕ್ತಿ ಸ್ವಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮೂಕ ರಾಮಯ್ಯ:

ಪ್ರಧಾನಿ ಮೋದಿ ವಿರುದ್ಧವಾದರೆ ಗುಡುಗುವ ಸಿದ್ದರಾಮಯ್ಯ, ಈ ವಿಚಾರದಲ್ಲಿ ಮೂಕ ರಾಮಯ್ಯ ಆಗಿದ್ದಾರೆ. ಪಾಟೀಲ್ ಅವರು ನಾನು ಇನ್ನೂ ಬಾಯಿಬಿಟ್ಟರೆ ಸರ್ಕಾರ ಮೂರು ದಿನವೂ ಉಳಿಯಲ್ಲ ಎಂದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.

ನಮ್ಮ ವಿರುದ್ಧ ಕಮೀಷನ್ ಆರೋಪ ಮಾಡಿ ನಾವು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಬಿಜೆಪಿಗರನ್ನು ಜೈಲಿಗಟ್ಟುತ್ತೇವೆ ಎಂದಿದ್ದ ಸಿದ್ದರಾಮಯ್ಯ ಅವರು ಎರಡು ವರ್ಷ ಕಳೆದರೂ ಸುಮ್ಮನೆ ಕುಳಿತಿದ್ದಾರೆ. ನಮ್ಮ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿ ಅವರೇ 60 ಪರ್ಸೆಂಟ್ ನುಂಗುತ್ತಿದ್ದಾರೆ ಎಂದು ಕಿಡಿಕಾರಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾಕತ್ತು ಮತ್ತು ಧಮ್ ಇದ್ದರೆ ಬಿ.ಆರ್.ಪಾಟೀಲ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಿ. ಇಲ್ಲವೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆ ನೀಡಿ ತೊಲಗಲಿ ಎಂದು ಆಗ್ರಹಿಸಿದರು.

ಶೀಘ್ರವೇ ನಡೆಯುವ ಬಿಹಾರ ಚುನಾವಣೆಗೆ ಕರ್ನಾಟಕದಲ್ಲಿ ಭ್ರಷ್ಟಾಚಾರದ ಮೂಲಕ ಸಂಪಾದಿಸಿ ಹಣವನ್ನು ಬಿಹಾರಕ್ಕೆ ಎಟಿಎಂ ಕಳುಹಿಸಲು ಹುನ್ನಾರ ನಡೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಹಾರ ಚುನಾವಣೆಗಾಗಿ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಹೆಚ್ಚು ಹಣ ಕೊಡುವ ಸಚಿವರನ್ನು ಸಂಪುಟದಲ್ಲಿ ಮುಂದುವರೆಸುವ ಟಾಸ್ಕ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸರ್ಕಾರದಲ್ಲಿ ಮನೆ ಪಡೆದ ಫಲಾನುಭವಿಗಳು ಅರ್ಹರೇ, ಅನರ್ಹರೇ ಎಂಬುದು ತನಿಖೆಯಾಗಬೇಕು. ಕಳೆದ ಬಜೆಟ್‌ನಲ್ಲಿ 12 ಲಕ್ಷ ಬಡವರಿಗೆ ಮನೆ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಕನಿಷ್ಠ 6 ಲಕ್ಷ ಮನೆ ನಿರ್ಮಿಸಿಲ್ಲ. ಕೇವಲ 2.75 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ವಿವಿಧ ಎಲ್ಲ ವಸತಿ ಯೋಜನೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸರ್ಕಾರ 2137.44 ಕೋಟಿ ರು. ಕಮೀಷನ್ ಲೂಟಿ ಮಾಡಿದೆ. ಇದೊಂದು ದೊಡ್ಡ ಹಗರಣ. ಈ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ನೊಂದಿಗೆ ಹೋರಾಟ:

ಈ ಸರ್ಕಾರ ಹಾಲಿನ ಸಬ್ಸಿಡಿ ಹಣ ಬಿಡುವುದಿಲ್ಲ. ವಸತಿ ಯೋಜನೆ ಕಮೀಷನ್ ಹಗರಣವನ್ನು ಬಿಜೆಪಿ ಇಲ್ಲಿಗೆ ಬಿಡದೆ ಜೆಡಿಎಸ್‌ನೊಂದಿಗೆ ಸೇರಿ ಬೃಹತ್ ಹೋರಾಟ ನಡೆಸಲಾಗುವುದು. ವಿಧಾನ ಸಭೆಯಲ್ಲಿ ನಿಲುವಳಿ ಮಂಡಿಸಿ ಚರ್ಚೆ ನಡೆಸುವ ಮೂಲಕ ಹೋರಾಟ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು ಜೇನಿನಂತಿದೆ. ಕೆಲವೊಂದು ವಿಚಾರದಲ್ಲಿ ಕುಮಾರಸ್ವಾಮಿ ಸಲಹೆ ಪಡೆದು ಹೋರಾಟಗಳನ್ನು ರೂಪಿಸುತ್ತಿದ್ದೇವೆ. ಮುಂದಿನ 2028ಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರುವುದು ನಿಶ್ಚಿತ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಕ್ಕೂಟದ ಮೇಲೆ ಕೇಂದ್ರ ಪ್ರಹಾರ : ತ.ನಾಡು ಮುಖ್ಯಮಂತ್ರಿಗೆ ಸಿಎಂ ಪತ್ರ