ಯುವ ಜನರಿಗೆ ಉದ್ಯೋಗ ಕೊಡಬೇಕೆಂಬ ನನ್ನ ಕನಸಿಗೆ ರಾಜ್ಯ ಸರ್ಕಾರ ಅಡ್ಡಿ : ಎಚ್ಡಿಕೆ ಪರೋಕ್ಷ ಕಿಡಿ

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 07:57 AM IST
22ಕೆಎಂಎನ್ ಡಿ12 | Kannada Prabha

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಹಲವಾರು ಯೋಜನೆ ಹಮ್ಮಿಕೊಂಡಿದ್ದೇನೆ. ಜಿಲ್ಲೆಗೆ ಪ್ರಮುಖ ಕಾರ್ಖಾನೆ ತರುತ್ತಾರೆ ಎಂಬುದು ಜಿಲ್ಲೆಯ ಜನರ ದೊಡ್ಡ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಒಂದು ವೇಳೆ ಜಾಗ ಕೊಟ್ಟರೆ ಅದಕ್ಕೆ ತಕ್ಷಣವೇ ಕ್ರಮ ವಹಿಸುತ್ತೇನೆ.

 ಮಂಡ್ಯ :  ಜಿಲ್ಲೆಗೆ ಪ್ರಮುಖ ಕಾರ್ಖಾನೆ ತಂದು ಯುವ ಜನರಿಗೆ ಉದ್ಯೋಗ ಕೊಡಬೇಕೆಂಬುಂದು ನನ್ನ ಕನಸು. ಆದರೆ, ಈ ಸರ್ಕಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಿಡಿಕಾರಿದರು.

ನಗರದ ಸಾರಿಗೆ ಬಸ್ ನಿಲ್ದಾಣದ ಎದುರಿನಲ್ಲಿ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಗೂ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರಿಬ್ಬರ ಪ್ರದೇಶಾಭಿವೃದ್ಧಿ ಅನುದಾನದಿಂದ ನಿರ್ಮಾಣವಾಗುತ್ತಿರುವ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಹಲವಾರು ಯೋಜನೆ ಹಮ್ಮಿಕೊಂಡಿದ್ದೇನೆ. ಜಿಲ್ಲೆಗೆ ಪ್ರಮುಖ ಕಾರ್ಖಾನೆ ತರುತ್ತಾರೆ ಎಂಬುದು ಜಿಲ್ಲೆಯ ಜನರ ದೊಡ್ಡ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಒಂದು ವೇಳೆ ಜಾಗ ಕೊಟ್ಟರೆ ಅದಕ್ಕೆ ತಕ್ಷಣವೇ ಕ್ರಮ ವಹಿಸುತ್ತೇನೆ ಎಂದು ಘೋಷಣೆ ಮಾಡಿದರು.

ನಾನು ಈ ಹಿಂದೆ ದೊಡ್ಡ ದೊಡ್ಡ ಯೋಜನೆಗಳಿಗೆ ಚಾಲನೆ ಕೊಟ್ಟಾಗಲೂ ಪ್ರಚಾರಕ್ಕೆ ಹಾತೊರೆಯಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡೇಕು ಎಂಬ ಕನಸಿದೆ. ಮೊದಲ ಹಂತವಾಗಿ 8 ಕೋಟಿ ರು. ವೆಚ್ಚದಲ್ಲಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ ಎಂದರು.

100 ನಿಲ್ದಾಣಗಳಲ್ಲಿ ಬಸ್ ಶೆಲ್ಟರ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯ ವಿಕಲಚೇತನರಿಗಾಗಿ ದೊಡ್ಡ ಮಟ್ಟದ ಕಾರ್‍ಯಕ್ರಮ ರೂಪಿಸಿದ್ದೇನೆ. ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಡ್ಯೂಟಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.

ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿತ್ತು. ಆ ಬೇಡಿಕೆಯನ್ನು ಈಡೇರಿಸುವ ಕೆಲಸವಾಗುತ್ತಿದೆ. ಶೀಘ್ರದಲ್ಲಿಯೇ ಈ ಜಾಗದಲ್ಲಿ ಅತ್ಯುತ್ತಮ ಆಟೋ ನಿಲ್ದಾಣ ತಲೆ ಎತ್ತಲಿದೆ. ನಿಮ್ಮ ನಿಲ್ದಾಣಕ್ಕೆ ನೀವೇ ಭೂಮಿಪೂಜೆ ಮಾಡಿ ಎಂದು ಚಾಲಕರಿಗೆ ತಿಳಿಸಿದ್ದೆ. ನಾನು ಮತ್ತು ಚಾಲಕರು ಸೇರಿ ಪೂಜೆ ನೆರವೇರಿಸಿದ್ದೇವೆ. ಇದು ನನಗೆ ಬಹಳ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿ ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೇವೆ. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ನಾಗೇಶ್, ಮುಖಂಡರಾದ ಬಿ.ಆರ್.ರಾಮಚಂದ್ರು, ಕೆ.ಎಸ್. ವಿಜಯ್ ಆನಂದ್, ಆಟೋ ಚಾಲಕರ ಸಂಘದ ಕೊಮ್ಮೇರಹಳ್ಳಿ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

ಮೈಷುಗರ್ ಶಾಲೆ ಗುತ್ತಿಗೆ ನೀಡುವುದು ಸರಿಯಲ್ಲ: ಹೆಚ್ಡಿಕೆ

ಮಂಡ್ಯದ ಮೈಷುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾ ಸಂಸ್ಥೆಗೆ ಗುತ್ತಿಗೆಗೆ ನೀಡುವುದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮೈಷುಗರ್ ಸ್ಕೂಲ್‌ನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಬಿಡುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಸರಿಯಲ್ಲ. ಇದು ಹಗಲು ದರೋಡೆ ಆಗಿದೆ ಎಂದು ದೂರಿದರು.

ಮೈಷುಗರ್ ಶಾಲೆ ಅಭಿವೃದ್ಧಿಗೆ 25 ಕೋಟಿ ರು. ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ತಯಾರಿದ್ದೇನೆ. ಗುತ್ತಿಗೆ ನೀಡುವ ಆಲೋಚನೆ ಸರಿ ಅಲ್ಲ ಎಂದು ಸಚಿವರು ಹೇಳಿದರು.

PREV
Read more Articles on

Recommended Stories

ಛಲವಾದಿಗೆ ಘೇರಾವ್‌ ಕೇಸ್‌ ಹಕ್ಕು ಬಾಧ್ಯತಾ ಸಮಿತಿಗೆ
ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಏನು ಚಿನ್ನದ್ದಾ? : ವಿಪಕ್ಷ ಕಿಡಿ