ಸಂಪುಟ ವಿಸ್ತರಣೆ ಚರ್ಚೆಗಾಗಿ ಇಂದು ಡಿಕೆ, ಬಿಕೆ, ಸಿದ್ದು ದಿಲ್ಲಿಗೆ

Published : Jul 21, 2026, 06:26 AM IST
DK SHivakumar

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಬಿರುಸು ಬಂದಿದ್ದು, ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಮಂಗಳವಾರ ಬೆಳಗ್ಗೆ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ.

 ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಬಿರುಸು ಬಂದಿದ್ದು, ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಮಂಗಳವಾರ ಬೆಳಗ್ಗೆ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮ ದಿನದ ಶುಭಾಶಯ ಕೋರುವ ನೆಪದಲ್ಲಿ ಈ ಪ್ರವಾಸ ಕೈಗೊಳ್ಳುತ್ತಿದ್ದರೂ ಮುಖ್ಯ ಉದ್ದೇಶ ಸಂಪುಟ ಪುನಾರಚನೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುವುದು. ಮೂಲಗಳ ಪ್ರಕಾರ, ಮಂಗಳವಾರ ಸಂಜೆ ವರಿಷ್ಠರೊಂದಿಗೆ ಈ ನಾಯಕರು ಸಭೆ ನಡೆಸುವ ಸಾಧ್ಯತೆಯಿದ್ದು, ಚರ್ಚೆ ಅಪೂರ್ಣಗೊಂಡರೆ ದಿಲ್ಲಿಯಲ್ಲೇ ಉಳಿದುಕೊಂಡು ಬುಧವಾರವೂ ಸಭೆ ಮುಂದುವರೆಸಬಹುದು.

ಅಲ್ಲದೆ, ವರಿಷ್ಠ ರಾಹುಲ್ ಅವರ ಭೇಟಿಗೂ ಈ ನಾಯಕರು ಸಮಯಾವಕಾಶ ಕೋರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಶುಕ್ರವಾರ (ಜು.24) ಅಥವಾ ಶನಿವಾರ (ಜು.25)ರ ವೇಳೆಗೆ ನೂತನ ಸಚಿವರ ಪದಗ್ರಹಣ ನೆರವೇರಿಸುವ ಉದ್ದೇಶ ರಾಜ್ಯ ನಾಯಕರಿಗೆ ಇದೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ 8 ಕ್ಕೆ ವಿಶೇಷ ವಿಮಾನದ ಮೂಲಕ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕಳೆದ ವಾರವಷ್ಟೇ ಈ ತ್ರಿವಳಿ ನಾಯಕರಿಗೆ ದೆಹಲಿಗೆ ಬುಲಾವ್ ನೀಡಿ ಸಚಿವ ಸಂಪುಟ ಬಗ್ಗೆ ಚರ್ಚೆ ನಡೆಸಿತ್ತು. ಆದರೆ, ಈ ವೇಳೆ ಖರ್ಗೆ ಅವರು ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ಹಿಂತಿರುಗಿದ್ದರಿಂದ ಈ ಚರ್ಚೆ ಸಂಪೂರ್ಣಗೊಂಡಿರಲಿಲ್ಲ.

ಆದಾಗ್ಯೂ, ಹೈಕಮಾಂಡ್ ವರಿಷ್ಠರಾದ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ಈ ತ್ರಿವಳಿ ನಾಯಕರೊಂದಿಗೆ ಒಟ್ಟಿಗೆ ಚರ್ಚೆ ಮತ್ತು ಪ್ರತ್ಯೇಕ ಚರ್ಚೆಗಳನ್ನು ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. ಅಲ್ಲದೆ, ಈ ನಾಯಕರು ಸಚಿವ ಸಂಪುಟದಲ್ಲಿ ಯಾರಿರಬೇಕೆಂಬ ತಮ್ಮ ಆಯ್ಕೆ ಬಗ್ಗೆ ಪ್ರತ್ಯೇಕ ಪಟ್ಟಿಯನ್ನೂ ಹೈಕಮಾಂಡ್‌ಗೆ ನೀಡಿದ್ದರು ಎನ್ನಲಾಗಿದೆ.

ಇದೇ ವೇಳೆ ಹೈಕಮಾಂಡ್ ಸಹ ತನ್ನ ಮೂಲಗಳಿಂದ ಸಂಗ್ರಹಿಸಿದ್ದ ಮಾಹಿತಿ ಆಧಾರದ ಮೇಲೆ ತಾನೂ ಪ್ರತ್ಯೇಕ ಪಟ್ಟಿ ಹೊಂದಿತ್ತು. ಈ ಹಲವು ಪಟ್ಟಿಗಳ ಬಗ್ಗೆ ಒಮ್ಮತ ಮೂಡದಿದ್ದರಿಂದ ಹಾಗೂ ಖರ್ಗೆ ಅವರು ದೆಹಲಿಯಲ್ಲಿರದ ಕಾರಣದಿಂದಾಗಿ ಪಟ್ಟಿ ಅಖೈರುಗೊಂಡಿರಲ್ಲಿಲ್ಲ.

ಹೀಗಾಗಿ ತ್ರಿವಳಿ ನಾಯಕರು ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪಟ್ಟಿ ಅಖೈರುಗೊಳಿಸುವ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

- ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನ ಇಂದು. ಅವರಿಗೆ ಶುಭ ಕೋರುವ ನೆಪದಲ್ಲಿ ಡಿಕೆಶಿ, ಬಿಕೆ, ಸಿದ್ದು ಇಂದು ದೆಹಲಿಗೆ

- ಅದೇ ನೆಪದಲ್ಲಿ ಮೂವರೂ ನಾಯಕರು ದಿಲ್ಲಿಗೆ ಪ್ರವಾಸ. ಆ ವೇಳೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮುಖ್ಯ ಉದ್ದೇಶ

- ಇಂದು ಸಂಜೆಯೇ ವರಿಷ್ಠರ ಜತೆ ಮಾತುಕತೆ ಸಾಧ್ಯತೆ. ಚರ್ಚೆ ಅಪೂರ್ಣವಾದರೆ ದೆಹಲಿಯಲ್ಲೇ ಉಳಿದು ನಾಳೆಯೂ ಸಭೆ

- ರಾಹುಲ್‌ ಗಾಂಧಿ ಭೇಟಿಗೂ ಸಮಯಾವಕಾಶಕ್ಕೆ ಕೋರಿಕೆ ಸಾಧ್ಯತೆ. ಎಲ್ಲ ಒಪ್ಪಿಗೆಯಾದರೆ ಇದೇ ವಾರ ಪ್ರಮಾಣವಚನ

40 ಆಕಾಂಕ್ಷಿಗಳಿಂದ ದಿಲ್ಲಿಯಲ್ಲಿ ಭಾರಿ ಲಾಬಿ

ಈ ನಡುವೆ ಸುಮಾರು 40ಕ್ಕೂ ಹೆಚ್ಚು ಮಂದಿ ಸಚಿವ ಸ್ಥಾನಾಕಾಂಕ್ಷಿಗಳು ದೆಹಲಿಯಲ್ಲಿದ್ದು, ಸಂಪುಟ ಸೇರಲು ತೀವ್ರ ಲಾಬಿ ನಡೆಸಿದ್ದಾರೆ. ನಾಯಕರಾದ ಸಲೀಂ ಅಹಮದ್‌, ಎಚ್.ಕೆ.ಪಾಟೀಲ್‌, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್‌, ಎಂ.ವೈ. ಪಾಟೀಲ್‌, ಮಳವಳ್ಳಿ ನರೇಂದ್ರಸ್ವಾಮಿ, ಅಶೋಕ್‌ ಪಟ್ಟಣ್‌, ಪ್ರಸಾದ್‌ ಅಬ್ಬಯ್ಯ, ಅಲ್ಲಮ ಪ್ರಭು ಪಾಟೀಲ್‌ ಸೇರಿ 40ಕ್ಕೂ ಹೆಚ್ಚು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೇಂದ್ರಕ್ಕೆ ಜಿರಳೆ ಪಕ್ಷದ ಮೂರು ಬೇಡಿಕೆ
ಪ್ರಧಾನ್‌ರಿಂದ ಪ್ರಧಾನಿವರೆಗೆ ಹಬ್ಬಿತು ಹೋರಾಟ - ದೆಹಲಿಯಲ್ಲಿ ಜಿರಳೆ ಕ್ರಾಂತಿ!