ಜನರ ಗುಳೆ ತಪ್ಪಿಸಲು ಜಿರಾಮ್‌ಜಿ ಅಡಿ ನೌಕರಿ ಕೊಡಿ

Published : Jul 20, 2026, 09:51 AM IST
Drought

ಸಾರಾಂಶ

ಬರಗಾಲದ ಹಿನ್ನೆಲೆಯಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಎಲ್ಲ ಜಿಪಂ ಸಿಇಒಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡಿ, ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

  ಬೆಂಗಳೂರು :  ಬರಗಾಲದ ಹಿನ್ನೆಲೆಯಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಎಲ್ಲ ಜಿಪಂ ಸಿಇಒಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡಿ, ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಭಾನುವಾರ ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಬರ ಕುರಿತು ಮಾಹಿತಿ ಪಡೆದು ಬಳಿಕ ಹಲವು ಸೂಚನೆಗಳನ್ನು ನೀಡಿದರು.

ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜನ ಗುಳೆ ಹೋಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಕೂಡಲೇ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸ ಆರಂಭಿಸಬೇಕು. ಜನರಿಗೆ ಊರುಗಳಲ್ಲೇ ಕೆಲಸ ನೀಡಿ, ಗುಳೆ ತಪ್ಪಿಸಬೇಕು ಎಂದು ಹೇಳಿದರು.

2,443 ಗ್ರಾಪಂಗಳಲ್ಲಿ ಕೆಲಸ ಪ್ರಾರಂಭಿಸಿಲ್ಲ:

ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ ವಿಬಿ ಜಿ ರಾಮ್ ಜಿ ಬಹುತೇಕ ಜಿಲ್ಲೆಗಳಲ್ಲಿ ಕೆಲಸ ಪ್ರಾರಂಭಿಸಿಲ್ಲ. ಸುಮಾರು 5 ಸಾವಿರ ಗ್ರಾಪಂಗಳ ಪೈಕಿ, 2,443 ಪಂಚಾಯತಿಗಳಲ್ಲಿ ವಿಬಿ ಜಿ ರಾಮ್‌ ಜಿ ಕೆಲಸ ಪ್ರಾರಂಭಿಸಿಲ್ಲ. 75 ತಾಲೂಕುಗಳಲ್ಲಿ 4 ವಾರಗಳಿಂದ ಒಣ ಹವೆ ಮುಂದುವರಿದಿದೆ. ಹೀಗಾಗಿ ಬರ ಪರಿಸ್ಥಿತಿಯ ವಾಸ್ತವಾಂಶ ಪರಿಶೀಲಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂದರು.

ಮೇವು ಲಭ್ಯತೆ ಬಗ್ಗೆ ತಿಳಿಸಿ:

ಬಹುತೇಕ ಜಿಲ್ಲೆಗಳಲ್ಲಿ 25 ವಾರ, 38 ವಾರ, 54 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ ಎಂದೆಲ್ಲ ಮಾಹಿತಿ ನೀಡಲಾಗುತ್ತಿದೆ. ರೈತರ ಬಳಿ ಸಂಗ್ರಹವಿರುವ ಮೇವಿನ ಬಣವೆಗಳನ್ನು ಆಧರಿಸಿ ಸರ್ಕಾರಕ್ಕೆ ಮಾಹಿತಿ ನೀಡುವುದು ಸರಿಯಲ್ಲ. ರೈತರು ಸಂಗ್ರಹಿಸಿರುವುದು ನಮಗೆ ಲಭ್ಯವಾಗುವುದಿಲ್ಲ. ನಿಮ್ಮಲ್ಲಿ ಲಭ್ಯತೆ ಇರುವುದನ್ನು ಮಾತ್ರ ತಿಳಿಸಬೇಕು. ಜಾನವಾರುಗಳಿಗೆ ತಕ್ಷಣಕ್ಕೆ ಮೇವು ಬೇಕು ಎಂದಾಗ ಒದಗಿಸುತ್ತೀರಾ ಎಂಬುದು ಮುಖ್ಯ ಎಂದು ಹೇಳಿದರು.

4ರಿಂದ 6 ಡಿಗ್ರಿ ತಾಪಮಾನ ಹೆಚ್ಚಳ:

ರಾಜ್ಯದಲ್ಲಿ ಭೀಕರ ಬರಗಾಲ ಕಾಣುತ್ತಿದ್ದೇವೆ. ಎಲ್‌ನಿನೋ ಬಂದಾಗಲೆಲ್ಲ ಸಮುದ್ರದಲ್ಲಿ ಉಷ್ಣಾಂಶ 2 ಡಿಗ್ರಿ ಹೆಚ್ಚಾಗುತ್ತದೆ. ರಾಜ್ಯದಲ್ಲಿಯೂ 4 ರಿಂದ 6 ಡಿಗ್ರಿ ತಾಪಮಾನ ಜಾಸ್ತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ. 68ರಷ್ಟು ಮಳೆ ಕೊರತೆಯಾಗಿರುವುದು ನೋಡಬಹುದು. ಕೆಲ ಕಡೆ 48ರಷ್ಟು ಕೊರತೆಯಾಗಿದೆ. ಹೀಗಾಗಿ ಸುಮಾರು ತಾಲೂಕುಗಳಲ್ಲಿ ಬರದ ತೀವ್ರತೆ ನೋಡುತ್ತಿದ್ದೇವೆ. ಅಂತರ್ಜಲ ಮಟ್ಟ 88 ತಾಲೂಕಿನಲ್ಲಿ ಮೈನಸ್‌ 4ರಷ್ಟು ಕುಸಿದಿದೆ ಎಂದು ಅಂಕಿ-ಅಂಶಗಳು ಹೇಳುತ್ತದೆ. ಮಳೆ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತೀರಾ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಬಹುದು ಎಂದು ಪ್ರಸ್ತುತ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಕೊಳವೆ ಬಾವಿಗಳಿಗೆ ಶಾಸಕರಿಂದ ಬೇಡಿಕೆ:

ಕುಡಿಯಲು ನೀರು ಇಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌. ಶಾಸಕರುಗಳು ಹೊಸದಾಗಿ ಬೋರ್‌ವೆಲ್ ಕೊರೆಸುವಂತೆ ಮನವಿಗಳನ್ನು ನೀಡಿದ್ದಾರೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಲಾಶಯದ ನೀರು ಬೆಳೆಗೆ ಪೂರೈಕೆ ಆಗಬಾರದು. ಬಹಳ ಗಂಭೀರವಾದ ಪರಿಸ್ಥಿತಿ ಇದೆ. ನೀವೆಲ್ಲರೂ ಈ ಬಗ್ಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಮೇವು ಖರೀದಿಸಿ:

ಮೆಕ್ಕೆಜೋಳ, ಕಬ್ಬು ಸೇರಿ ಮುಂತಾದ ಬೆಳೆಗಳಿಗೆ ಹೆಚ್ಚು ನೀರು ತೆಗೆದುಕೊಳ್ಳುತ್ತದೆ. ಅಂಥ ಬೆಳೆಗಳನ್ನು ಬೆಳೆಯದಂತೆ ಕ್ರಮ ವಹಿಸಬೇಕು. ಜಾನುವಾರುಗಳಿಗೂ ತೊಂದರೆ ಆಗುತ್ತಿದೆ. ಮೇವು ನೆರೆ ರಾಜ್ಯಗಳಲ್ಲೂ ಸಿಗುತ್ತಿಲ್ಲ. ಅಲ್ಲೂ ಬರ ಪರಿಸ್ಥಿತಿ ಇದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯವರು ಗಮನಿಸಬೇಕು. ನೀರಿನ ಮೂಲ ಇರುವ ರೈತರಿಗೆ ಮೇವಿನ ಬೀಜ ವಿತರಿಸಬೇಕು. ಮೇವು ಬೆಳೆದ ರೈತರಿಂದ ಖರೀದಿಸಿ ಎಂದು ಪರಮೇಶ್ವರ್‌ ಸೂಚಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ: ಜನರ ಗುಳೆ ತಪ್ಪಿಸಲು ವಿಬಿಜಿ ರಾಮ್‌ ಜಿ ಯೋಜನೆಯಡಿ ಜನರಿಗೆ ಉದ್ಯೋಗ ಕೊಡಿ: ಜಿ.ಪಂ.ಸಿಇಒಗಳಿಗೆ ಡಿಸಿಎಂ ಪರಮೇಶ್ವರ್‌ ಸೂಚನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಗೃಹಲಕ್ಷ್ಮಿ ಫಲಾನುಭವಿಗಳ ಪುನರ್‌ ಪರಿಶೀಲನೆಗೆ ಸಂಪುಟ ನಿರ್ಧಾರ
ಖುದ್ದು ಬರ ಪರಿಸ್ಥಿತಿ ಪರಿಶೀಲನೆ ಮಾಡ್ತೀನಿ : ಸಿಎಂ