;Resize=(412,232))
ಸುವರ್ಣ ವಿಧಾನಸೌಧ : ‘ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ’ ಎಂಬ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಮಂಗಳವಾರವೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರು ತೀವ್ರ ಪ್ರತಿಕ್ರಿಯೆ, ತಿರುಗೇಟು ನೀಡಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಯತೀಂದ್ರ ಅವರು ಹೈಕಮಾಂಡ್ ಕಾರ್ಯವನ್ನು ನಿರ್ವಹಿಸುವುದು ಬೇಡ ಎಂದಿದ್ದರೆ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ಯತೀಂದ್ರ ನೀಡಿರುವಂತಹ ಹೇಳಿಕೆಗಳು ಈಗ ಅವಶ್ಯಕತೆ ಇಲ್ಲ ಎಂದು ತಿರುಗೇಟು ಹೇಳಿದ್ದಾರೆ. ಮತ್ತೊಂದೆಡೆ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರು, ಶಾಸಕರ ಹೇಳಿಕೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಅಧಿವೇಶನ ಮುಗಿಯುವವರೆಗೂ ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು, ಆ ಮೇಲೆ ನಿಮ್ಮ ಚಟ ತೀರಿಸಿಕೊಳ್ಳಿ ಎಂದು ಹೇಳಿದ್ದಾರೆ.
ಈ ಮಧ್ಯೆ, ಡಿಕೆಶಿ ಬಣದ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ‘ಬೇಕಿದ್ದರೆ, ನನ್ನ ಹೇಳಿಕೆ ಕುರಿತು ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡಲಿ’ ಎಂದು ಎದಿರೇಟು ನೀಡಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಅಧಿವೇಶನ ಮುಗಿಯುವವರೆಗೂ ಎಲ್ಲರೂ ಬಾಯ್ಮುಚ್ಚಿಕೊಂಡು ಸುಮ್ಮನಿದ್ದು ಬಿಡಿ. ಆ ಮೇಲೆ ನಿಮ್ಮ ಚಟ ತೀರಿಸಿಕೊಳ್ಳಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ ಶಾಂತಿಮಂತ್ರ ಹಾಕಿಕೊಂಡಿದ್ದಾರೆ. ಅವರೇ ಏನೂ ಇಲ್ಲ ಎಂದು ಸುಮ್ಮನಿರುವಾಗ ಬೇರೆಯವರು ಹೇಳಿಕೆ ಕೊಡುವುದು ತಪ್ಪಾಗುತ್ತದೆ. ಯಾವ ಉದ್ದೇಶಕ್ಕೆ ಹೇಳಿಕೆ ಕೊಡಬೇಕು? ಹೀಗೆ ಮಾತನಾಡುವವರಿಗೆ ಹೈಕಮಾಂಡ್ ನಾಯಕರು ನೋಟಿಸ್ ಕೊಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನಿತ್ಯ ಇದೇ ವಿಚಾರ ಚರ್ಚಿಸುತ್ತಾ ಹೋದರೆ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಇದಕ್ಕೆಲ್ಲ ಕೇಂದ್ರದ ನಾಯಕರು ಕಡಿವಾಣ ಹಾಕಬೇಕು ಎಂದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಬೇಳೂರು ಗೋಪಾಲಕೃಷ್ಣ ಅವರು ಸರಿಯಾಗಿ ಹೇಳಿದ್ದಾರೆ. ಅವರ ಸಲಹೆಯನ್ನು ಅನುಮೋದಿಸುತ್ತೇನೆ. ಯತೀಂದ್ರ ತರದ ಮಾತುಗಳು ಈಗ ಅನಗತ್ಯ. ಸಿಎಂ-ಡಿಸಿಎಂ ಇಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಮುಂದಿನದ್ದನ್ನು ತೀರ್ಮಾನ ಮಾಡಲು ನಮ್ಮಲ್ಲಿ ಹೈಕಮಾಂಡ್ ಇದೆ. ಹಾಗಾಗಿ, ಸಿಎಲ್‌ಪಿ ಸಭೆಯಲ್ಲಿ ಚರ್ಚೆ ಮಾಡುವ ವಿಷಯ ಇದಲ್ಲ. ಶಾಸಕರು ತಮ್ಮ, ತಮ್ಮ ನಾಯಕರ ಪರ ಮಾತನಾಡುವುದು ಸಹಜ. ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದರು.
ನನ್ನ ಹೇಳಿಕೆಯನ್ನು ಸಿಎಲ್ಪಿಯಲ್ಲಿ ಪ್ರಸ್ತಾಪಿಸಲಿ-ಯತೀಂದ್ರ:
ಈ ಮಧ್ಯೆ, ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತೀಂದ್ರ, ‘ನಾನು ಹೇಳಬೇಕಾದ್ದನ್ನು ನಿನ್ನೆಯೇ ಹೇಳಿದ್ದೇನೆ. ಮತ್ತೆ ಯಾವುದರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ’ ಎಂದರು.
ಕೆಲ ಶಾಸಕರು ನಿಮ್ಮ ಹೇಳಿಕೆಯನ್ನು ಸಿಎಲ್‌ಪಿ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳುತ್ತಿದ್ದಾರಲ್ಲಾ ಎಂದು ಕೇಳಿದಾಗ, ‘ನನಗೆ ಗೊತ್ತಿರುವ ಹಾಗೆ ಸಿಎಲ್‌ಪಿ ಸಭೆಯಲ್ಲಿ ಈ ವಿಚಾರ ಚರ್ಚೆ ಆಗುವುದಿಲ್ಲ. ಒಂದು ವೇಳೆ ಯಾರಾದರೂ ಶಾಸಕರು ಈ ಬಗ್ಗೆ ಪ್ರಸ್ತಾಪಿಸುವುದಾದರೆ ಪ್ರಸ್ತಾಪಿಸಲಿ’ ಎಂದರು.
ಅನಗತ್ಯ ಹೇಳಿಕೆ ಬೇಡ: ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಾಯಕತ್ವ ಬದಲಾವಣೆ ವಿಚಾರವನ್ನು ಸ್ವತಃ ಸಿಎಂ ಮತ್ತು ಡಿಸಿಎಂ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿರುವಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವ್ಯಾರೂ ಅನಗತ್ಯ ಹೇಳಿಕೆ ನೀಡಿ ಗೊಂದಲಕ್ಕೆ ಎಡೆಮಾಡಿಕೊಡಬಾರದು. ಹೈಕಮಾಂಡ್ ಹೇಳೋದನ್ನು ನಾವೆಲ್ಲರೂ ಕೇಳಬೇಕು ಅಷ್ಟೆ. ಯತೀಂದ್ರ ಅವರಿಗೆ ನೋಟಿಸ್ ನೀಡುವ ವಿಚಾರದ ಬಗ್ಗೆ ನಾನೇನೂ ಮಾತನಾಡಲ್ಲ, ಅದು ಪಕ್ಷಕ್ಕೆ ಬಿಟ್ಟದ್ದು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿ, ನಾಯಕತ್ವದ ವಿಚಾರದಲ್ಲಿ ಯತೀಂದ್ರ ಅವರು ಏನಾದರೂ ಹೇಳಿರಲಿ, ಹೈಕಮಾಂಡ್ ಮಾಡುವ ತೀರ್ಮಾನವೇ ಅಂತಿಮ ಎಂದರು.