ಬೇರೆ ಮಂತ್ರಿ ಖಾತೆ ಒತ್ತುವರೀಲೂ ಡಿಕೆಶಿ ನಿಸ್ಸೀಮ : ಎಚ್‌ಡಿಕೆ ಟಾಂಗ್‌

KannadaprabhaNewsNetwork |  
Published : Jan 10, 2026, 02:00 AM ISTUpdated : Jan 10, 2026, 04:32 AM IST
HD Kumaraswamy DK Shivakumar

ಸಾರಾಂಶ

‘ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲೂ ನೀವು ನಿಸ್ಸೀಮರು’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕಿಡಿಕಾರಿದ್ದಾರೆ.

 ಬೆಂಗಳೂರು :  ‘ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲೂ ನೀವು ನಿಸ್ಸೀಮರು’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕಿಡಿಕಾರಿದ್ದಾರೆ.

ಜೆಡಿಎಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಕುರಿತ ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ‘ನಮ್ಮ ವಿಲೀನದ ಚಿಂತೆ ಪಕ್ಕಕ್ಕೆ ಬಿಡಿ. ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ ನಾಯಕ. ಈಗ ಕೇಂದ್ರ ಮಂತ್ರಿ. ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ. ಈಗ ಮಂತ್ರಿ, ಉಪ ಮುಖ್ಯಮಂತ್ರಿ. ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನೇ ಕೇಳಬೇಕು’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

‘ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್‌ಪೀರಿಯನ್ಸ್‌ ಅಲ್ಲ ಡಿಕೆಶಿರವರೇ... ಏನೋ, ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನಷ್ಟೇ. ನಿಮಗೆ ಸಿದ್ಧಿಸಿರುವಂತಹ ಭಾರೀ ಅನುಭವ ನನಗಿಲ್ಲ. ಇದನ್ನು ವಿನಮ್ರವಾಗಿ ಒಪ್ಪಿಕೊಳ್ಳುವೆ’ ಎಂದು ಕಾಲೆಳೆದಿದ್ದಾರೆ.

ಡಿಸಿಎಂ ಹುದ್ದೆಗೆ ಎಕ್ಸ್‌ಟ್ರಾ ಕೊಂಬಿಲ್ಲ:

ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನಿಸ್ಸೀಮರು. ಅದನ್ನಷ್ಟೇ ನಾನು ಹೇಳಿದ್ದು. ತಾವು ಉಪಮುಖ್ಯಮಂತ್ರಿ ಆಗಿರಬಹುದು. ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ, ಅಧಿಕಾರ ವ್ಯಾಪ್ತಿ ಆ ಹುದ್ದೆಗಿದೆ ಎನ್ನುವುದು ಗೊತ್ತಿಲ್ಲವೇ? ಅದಕ್ಕೇನು ಎಕ್ಸ್‌ಟ್ರಾ ಕೊಂಬು, ಕೋಡು ಇರಲ್ಲ. ಇರಲಿ ಎಂದು ತಾವು ಸಿಕ್ಕಿಸಿಕೊಳ್ಳೋದಕ್ಕೂ ಬರಲ್ಲ. ನಿಮ್ಮ ಎಕ್ಸಿಪೀರಿಯನ್ಸ್‌ಗೆ ಈ ಸಣ್ಣ ವಿಷಯವೂ ತಟ್ಟಲಿಲ್ಲವೇ ಮಿಸ್ಟರ್ ಡಿಕೆಶಿ ಅವರೇ..? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಸಭೆಯನ್ನು ಗೃಹ ಸಚಿವರೇ ನಡೆಸಬೇಕಿತ್ತು

‘ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ಗೃಹ ಸಚಿವರೇ ನಡೆಸಬೇಕಿತ್ತು. ಅದು ಅವರ ಅಧಿಕಾರ ವ್ಯಾಪ್ತಿ. ಅವರು ಬಿಟ್ಟರೆ ಮುಖ್ಯಮಂತ್ರಿಗಳು ಅಂಥ ಸಭೆ ನಡೆಸಬಹುದು. ನೀವು ಸಭೆ ನಡೆಸಿದ್ದು ಶಿಷ್ಟಾಚಾರ, ಅಧಿಕಾರದ ಸ್ಪಷ್ಟ ಉಲ್ಲಂಘನೆ. ಇದನ್ನು ಆಡಳಿತಾನುಭವ, ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುತ್ತೀರಾ? ಹೋಗಲಿ, ನೀವು ಮೀಟಿಂಗ್ ಮಾಡಿ ಎಂದು ಗೃಹ ಸಚಿವರು, ಸಿಎಂ ಅವರು ಹೇಳಿದ್ದರಾ? ಇಲ್ಲವಲ್ಲ. ಅದಕ್ಕೇ ನಾನು ಹೇಳಿದ್ದು, ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಮಂತ್ರಿಗಳಾ’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ನೀವು ಹೀಗೆ ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನನ್ನಾದರೂ ಮಾಡಿಸಿದ್ದೀರಾ? ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ. ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಮಿಸ್ಟರ್ ಡಿಕೆಶಿ ಅವರೇ... ಎಂದು ಪ್ರಶ್ನಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ-ಎಚ್‌ಡಿಕೆ ಜಿ ರಾಮ್‌ ಜಿ ಸ್ಕೀಂ ಸವಾಲು ಸಮರ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು