ಬೆಂಗಳೂರು : ‘ಮೀಡಿಯಾ ಹುಲಿ ಎಚ್.ಡಿ.ಕುಮಾರಸ್ವಾಮಿ ಅವರ ಅನುಭವದ ಕಾಲುವೆಯಲ್ಲಿ ಕೇವಲ ಸುಳ್ಳು, ಹಿಟ್ ಆ್ಯಂಡ್ ರನ್, ಅವಕಾಶವಾದ, ಆತ್ಮರತಿ ಎಂಬ ಕೊಚ್ಚೆ ಹರಿಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
‘ಗೃಹ ಸಚಿವರ ಖಾತೆಯನ್ನು ಡಿ.ಕೆ.ಶಿವಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಎಕ್ಸ್ ಖಾತೆ ಮೂಲಕವೇ ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ.
ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ ಎಂದು ಪುಂಗಿದ್ದು, ಅರ್ಜಿ ಹಾಕದಿದ್ದರೂ ಮಂಡ್ಯದಲ್ಲಿ ಕೈಗಾರಿಕೆಗೆ ಜಮೀನು ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದು, ಕುಮಾರಸ್ವಾಮಿ ಅವರ ಸುಳ್ಳುಗಳಿಗೆ ಸಣ್ಣ ಉದಾಹರಣೆ. ಪೇಪರ್ ಟೈಗರ್ ಆದ ಕುಮಾರಣ್ಣ ಮಾಧ್ಯಮಗಳ ಮುಂದೆ ರಾಜಕಾರಣ ಮಾಡುವ ಬದಲು, ಪಟಾಲಂ ಕರೆದುಕೊಂಡು ಬಳ್ಳಾರಿಗೆ ಹೋಗಿ ಎರಡು ಬಾರಿ ಮರಣೋತ್ತರ ಪರೀಕ್ಷೆ ಆದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.