ಅಧಿಕಾರಿಗಳಿಂದ ನಮೂನೆ ಪಡೆದು ಸುಮ್ಮನಾಗಬೇಡಿ, ಅವರಿಗೆ ತಲುಪಿಸಿಬಿಡಿ

Published : Jul 09, 2026, 04:44 AM IST
SIR

ಸಾರಾಂಶ

‘ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯಲ್ಲಿ ಮತದಾರರು ಬೂತ್‌ ಮಟ್ಟದ ಅಧಿಕಾರಿಗಳಿಂದ(ಬಿಎಲ್ಒ) ಗಣತಿ ನಮೂನೆ ಪಡೆದ ಬಳಿಕ ಭರ್ತಿ ಮಾಡಿ ಸಹಿಯೊಂದಿಗೆ ವಾಪಸ್ ನೀಡಬೇಕು.

  ಬೆಂಗಳೂರು :  ‘ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯಲ್ಲಿ ಮತದಾರರು ಬೂತ್‌ ಮಟ್ಟದ ಅಧಿಕಾರಿಗಳಿಂದ(ಬಿಎಲ್ಒ) ಗಣತಿ ನಮೂನೆ ಪಡೆದ ಬಳಿಕ ಭರ್ತಿ ಮಾಡಿ ಸಹಿಯೊಂದಿಗೆ ವಾಪಸ್ ನೀಡಬೇಕು. ಒಂದು ವೇಳೆ ಗಣತಿ ನಮೂನೆ ವಾಪಸ್‌ ನೀಡದಿದ್ದಲ್ಲಿ ಅಂಥ ಮತದಾರರು ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ 5.54 ಕೋಟಿ ಮತದಾರರು ಈ ಎಸ್‌ಐಆರ್‌ ಪ್ರಕ್ರಿಯೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಮನೆ-ಮನೆಗೆ ತೆರಳಿ ಪ್ರತಿ ಮತದಾರರಿಗೆ ಗಣತಿ ನಮೂನೆ ತಲುಪಿಸುವ ಕಾರ್ಯ ಜೂ.30ರಿಂದ ಆರಂಭಗೊಂಡಿದೆ. ಬಿಎಲ್‌ಒಗಳು ಜು.8ರವರೆಗೆ 4.57 ಕೋಟಿ ಗಣತಿ ನಮೂನೆ ವಿತರಿಸಿದ್ದಾರೆ. ಈ ಮೂಲಕ ಶೇ.82.45ರಷ್ಟು ಪ್ರಗತಿ ಸಾಧಿಸಲಾಗಿದೆ ವಿವರಿಸಿದರು.

35 ಬಿಎಲ್‌ಒಗಳಿಗೆ ಶೋಕಾಸ್‌ ನೋಟಿಸ್‌:

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ರಾಜ್ಯದ ಕೆಲ ಕಡೆ ಗುಂಪು ಗುಂಪಾಗಿ ಗಣತಿ ನಮೂನೆ ವಿತರಿಸಿದ ಬಗ್ಗೆ ದೂರುಗಳು ಬಂದಿವೆ. ದೂರುಗಳು ಬಂದಿರುವ ಕಡೆ ಸಂಬಂಧಿತ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆಯಲಾಗಿದೆ. ಬಿಎಲ್‌ಒಗಳು ಸಂಬಂಧಿತ ವ್ಯಕ್ತಿಗಳಿಗೆ ಕಡ್ಡಾಯವಾಗಿ ಗಣತಿ ನಮೂನೆ ನೀಡಬೇಕು. ಈಗಾಗಲೇ ರಾಜ್ಯದ 35 ಬಿಎಲ್‌ಒಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅನ್ಬುಕುಮಾರ್‌ ಹೇಳಿದರು.

ಅಂತೆಯೇ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ಕಡ್ಡಾಯವಾಗಿ ವಿತರಿಸಬೇಕು ಎಂದು ಬಿಎಲ್‌ಒಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಕಚೇರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಲ್ಲಿಕೆಯಾಗಿರುವ ಪ್ರತಿ ದೂರಿನ ಬಗ್ಗೆ ಪರಿಶೀಲಿಸಲಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೂ ವರದಿ ನೀಡಲಾಗಿದೆ. ನಿರ್ದಿಷ್ಟ ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ, ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎರಡು ಆಯ್ಕೆಯಲ್ಲಿ ಒಂದು ಮಾಡಿ:

ಬಿಎಲ್‌ಒಗಳು ಗಣತಿ ನಮೂನೆ ವಿತರಿಸಿದ ಬಳಿಕ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡುತ್ತಿದ್ದಾರೆ. ಜು.29ರ ವರೆಗೆ ಗಣತಿ ನಮೂನೆ ಸಂಗ್ರಹಿಸಿ ಡಿಜಿಟಲೀಕರಣ ಮಾಡಲು ಅವಕಾಶವಿದೆ. ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಲು ಎರಡು ಆಯ್ಕೆ ನೀಡಲಾಗಿದೆ. ಒಂದು ಗಣತಿ ನಮೂನೆ ಭರ್ತಿ ಮಾಡಿ ಸಹಿ ಹಾಕಿ ಬಿಎಲ್‌ಒಗಳಿಗೆ ವಾಪಸ್‌ ನೀಡಬೇಕು. ಆನ್‌ಲೈನ್‌ ಮೂಲಕವೂ ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಎರಡರಲ್ಲಿ ಯಾವುದು ಅನುಕೂಲವೋ ಅದನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಆನ್‌ಲೈನ್‌ನಲ್ಲೂ ಸಲ್ಲಿಸಿ, ಗಣತಿ ನಮೂನೆ ಭರ್ತಿ ಮಾಡಿ ಕೊಟ್ಟಲ್ಲಿ ಪರಿಶೀಲನೆ ವೇಳೆ ಒಂದನ್ನಷ್ಟೇ ಪರಿಗಣಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಗತಿಗೆ ಕ್ರಮ

ನಗರ ಪ್ರದೇಶಗಳಲ್ಲಿ ಗಣತಿ ನಮೂನೆ ವಿತರಣೆ ಪ್ರಗತಿ ಕಡಿಮೆಯಿದೆ. ನಗರ ಪ್ರದೇಶಗಳ ಮತದಾರರು ಕೆಲಸ ಸಮಯದಲ್ಲಿ ವ್ಯತ್ಯಾಸಗಳು ಇರುವುದರಿಂದ ಬಿಎಲ್‌ಒಗಳು ಹೋದಾಗ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಹೀಗಾಗಿ ನಗರ ಪ್ರದೇಶಗಳಲ್ಲಿ ಮತದಾರರು ಲಭ್ಯವಿರುವ ಸಮಯ ತಿಳಿದುಕೊಂಡು ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿಸಿ ವಾಪಸ್‌ ಪಡೆಯುವಂತೆ ಬಿಎಲ್‌ಒಗಳಿಗೆ ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಶೇ.46ರಷ್ಟು ಗಣತಿ ನಮೂನೆ ವಿತರಿಸಲಾಗಿದೆ. ನಾಲ್ಕೈದು ದಿನಗಳಲ್ಲಿ ಈ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

8 ದಿನಗಳಲ್ಲಿ 4.57 ಕೋಟಿ ಗಣತಿ ನಮೂನೆ ವಿತರಣೆ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಭಾಗವಾಗಿ ಬುಧವಾರ ಸಂಜೆ 6 ಗಂಟೆ ವೇಳೆಗೆ 4.57 ಕೋಟಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಈ ಮೂಲಕ ಶೇ.82.45ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 56.65 ಲಕ್ಷ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 1.66 ಲಕ್ಷ ಮತದಾರರು ಆನ್‌ಲೈನ್‌ ಮುಖಾಂತರ ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದ್ದಾರೆ. ಪತ್ತೆಯಾಗದ ಮತ್ತು ಗೈರಾದ ಮತದಾರರು 2,772, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 75,061, ಮೃತಪಟ್ಟ ಮತದಾರರು 59,461, ಈಗಾಗಲೇ ನೋಂದಣಿ ಮಾಡಿಕೊಂಡ ಮತದಾರರು 10,078 ಹಾಗೂ ಇತರೆ 635 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ.

ಶೇ.37.46ರಷ್ಟು ಡಿಜಿಟಲೀಕರಣ

ರಾಜ್ಯದ ಒಟ್ಟು ಮತಗಟ್ಟೆಗಳ ಪೈಕಿ 22,122ರಲ್ಲಿ ಶೇ.100ರಷ್ಟು ಗಣತಿ ನಮೂನೆ ವಿತರಿಸಲಾಗಿದೆ. ಅಂತೆಯೆ 14,108 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಗಣತಿ ನಮೂನೆ ವಿತರಿಸಲಾಗಿದೆ. 5 ಮತಗಟ್ಟೆಗಳಲ್ಲಿ ಶೇ.100 ಮತ್ತು 83 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಗಣತಿ ನಮೂನೆ ಡಿಜಿಟಲೀಕರಣ ಮಾಡಲಾಗಿದೆ.

ಚಿತ್ರದುರ್ಗ ಶೇ.98.95 ಗಣತಿ ನಮೂನೆ ವಿತರಣೆ

ಕಳೆದ ಎಂಟು ದಿನಗಳಲ್ಲಿ ರಾಜ್ಯದ 34 ಚುನಾವಣಾ ಜಿಲ್ಲೆಗಳ ಪೈಕಿ 14 ಜಿಲ್ಲೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಗಣತಿ ನಮೂನೆ ವಿತರಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ಚಿತ್ರದುರ್ಗ ಶೇ.98.95ರಷ್ಟು ವಿತರಿಸಲಾಗಿದೆ. ಅತಿ ಕಡಿಮೆ ಬೆಂಗಳೂರು ದಕ್ಷಿಣ ಶೇ.44.18ರಷ್ಟು ವಿತರಿಸಲಾಗಿದೆ.

ರಾಜಕೀಯ ಪಕ್ಷಗಳ ಕಾರ್‍ಯಕರ್ತರೂ ಅರ್ಜಿ ಸ್ವೀಕರಿಸಬಹುದು

ಬಿಎಲ್ಒಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿದ ಬಳಿಕ ಭರ್ತಿ ಮಾಡಿ ವಾಪಸ್‌ ನೀಡಬೇಕು. ಒಂದು ವೇಳೆ ಮತದಾರರು ವಾಪಸ್‌ ನೀಡಲು ಸಾಧ್ಯವಾಗದಿದ್ದಲ್ಲಿ ಬೂತ್‌ ಮಟ್ಟದ ಏಜೆಂಟ್‌ಗಳು ಅರ್ಥಾತ್‌ ರಾಜಕೀಯ ಪಕ್ಷಗಳ ಕಾರ್ಯಕರ್ತರು (ಬಿಎಲ್‌ಎ) ತಲಾ 50 ಮತದಾರರ ಗಣತಿ ನಮೂನೆಗಳನ್ನು ಸಂಗ್ರಹಿಸಿ ಸಂಬಂಧಿತ ಬಿಎಲ್‌ಒಗಳಿಗೆ ತಲುಪಿಸಲು ಕಾನೂನಿನಲ್ಲಿ ಅವಕಾಶವಿದೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಆಯೋಗ ಸ್ಪಷ್ಟನೆ ನೀಡಿದೆ.

ಗುಂಪುಗೂಡಿ ಎಸ್‌ಐಆರ್‌ನಡೆಸಿದ 35 ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ರಾಜ್ಯದ ಕೆಲ ಕಡೆ ಗುಂಪು ಗುಂಪಾಗಿ ಗಣತಿ ನಮೂನೆ ವಿತರಿಸಿದ ಬಗ್ಗೆ ದೂರುಗಳು ಬಂದಿವೆ. ದೂರುಗಳು ಬಂದಿರುವ ಕಡೆ ಸಂಬಂಧಿತ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆಯಲಾಗಿದೆ. ಈಗಾಗಲೇ ರಾಜ್ಯದ 35 ಬಿಎಲ್‌ಒಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಯನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ಬಿಎಲ್‌ಒಗಳಿಗೆ ಸೂಚನೆ ನೀಡಲಾಗಿದೆ ಎಂದು ಅನ್ಬುಕುಮಾರ್‌ ಹೇಳಿದರು.

2002ರ ಮತಪಟ್ಟೀಲಿ ಹೆಸರಿಲ್ವಾ? ಚಿಂತೆ ಬಿಡಿ ನಮೂನೆ ತುಂಬಿ

ಬಿಎಲ್‌ಒಗಳು ಗಣತಿ ನಮೂನೆ ಕೊಟ್ಟ ಬಳಿಕ ಮತದಾರರಿಗೆ 2002ರ ಮತದಾರರ ಪಟ್ಟಿ ಮಾಹಿತಿ ಪಡೆಯಲು ಸಾಧ್ಯವಾಗದಿದ್ದಲ್ಲಿ ಆತಂಕಪಡುವ ಅಗತ್ಯವಿಲ್ಲ. ಗಣತಿ ನಮೂನೆಯಲ್ಲಿ ಇರುವ ಮಾಹಿತಿ ಭರ್ತಿ ಮಾಡಿ ಸಹಿ ಹಾಕಿ ವಾಪಸ್‌ ಬಿಎಲ್‌ಒಗಳಿಗೆ ಕೊಟ್ಟರೆ ಸಾಕು. ಆ ಮತದಾರರ ಹೆಸರು ಕಡ್ಡಾಯವಾಗಿ ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಪರಿಶೀಲನೆ ವೇಳೆ ಮಾಹಿತಿ ಹೊಂದಾಣಿಕೆ ಆಗದಿದ್ದಲ್ಲಿ ಸಂಬಂಧಿತ ಅಧಿಕಾರಿಗಳು ನೋಟಿಸ್‌ ಕೊಡುತ್ತಾರೆ. ಈ ವೇಳೆ ಕೇಂದ್ರ ಚುನಾವಣಾ ಆಯೋಗ ನಿಗದಿ ಮಾಡಿರುವ 11 ದಾಖಲೆಗಳ ಪೈಕಿ ಒಂದು ದಾಖಲೆ ಸಲ್ಲಿಸಬೇಕು. ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಹೇಳಿದರು.

ಬಿಎಲ್‌ಒಗೆ ನಮೂನೆ ಮರಳಿಸಿದ ಬಳಿಕವೂ ತಿದ್ದುಪಡಿಗಿದೆ ಅವಕಾಶ

ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಬಿಎಲ್‌ಒಗೆ ವಾಪಸ್‌ ಕೊಟ್ಟ ಬಳಿಕ ಏನಾದರೂ ಬದಲಾವಣೆ ಮಾಡುವುದಿದ್ದಲ್ಲಿ ಜು.29ರೊಳಗೆ ಮಾಡಿಕೊಳ್ಳಬೇಕು. ತಿದ್ದುಪಡಿ ಮಾಡಲು ಬಿಎಲ್‌ಒಗಳಿಗೆ ಅಧಿಕಾರವಿದೆ. ಮತದಾರರ ಅನುಮತಿ ಇಲ್ಲದೆ ಬಿಎಲ್‌ಒಗಳು ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕವೂ ತಿದ್ದುಪಡಿಗಳಿಗೆ ಅವಕಾಶವಿದೆ. ಮತದಾರರು ಫಾರ್ಮ್‌ 8 ಭರ್ತಿ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಬದಲಾವಣೆ ಮಾಡಿಕೊಳ್ಳಬಹುದು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಾತಿ ಗಣತಿ ಮಂಡನೆ ಆಗಲೇಬೇಕು : ಸತೀಶ್ ಜಾರಕಿಹೊಳಿ
ಫುಟ್ಪಾತ್‌ ತೆರವು ಕಾರ್‍ಯಾಚರಣೆ ನಿಲ್ಲಿಸಲು ಆಗ್ರಹ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ