ದೊಡ್ಡಬಳ್ಳಾಪುರ/ಹೊಸಕೋಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ. ರಾಜ್ಯದ ಆರೂವರೆ ಕೋಟಿ ಜನರ ಏಳಿಗೆಗಾಗಿ ಈ ಸಮಾಗಮ ನಡೆದಿದೆ ಎಂದರು.
ಬಡಜನರ ಕಣ್ಮಣಿ ಎಂದು ಎಚ್.ಡಿ.ಕುಮಾರಸ್ವಾಮಿ ಹೆಸರಾಗಿದ್ದಾರೆ. ಅವರ ಕಾಲದಲ್ಲಿ ಹಾಗೂ ಬಿಜೆಪಿ ಸರ್ಕಾರದ ಕಾಲದಲ್ಲಿ ನೀಡಿದ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡಿದೆ. ವಿದ್ಯುತ್ ಉಚಿತ ನೀಡುತ್ತೇವೆಂದು ವಿದ್ಯುತ್ ಇಲ್ಲದಂತೆ ಮಾಡಿದ್ದಾರೆ. ರೈತರು ಒಂದು ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಬೇಕೆಂದರೆ 4-5 ಲಕ್ಷ ರು. ನೀಡಬೇಕಿದೆ. ಬಿಜೆಪಿ ಕಾಲದಲ್ಲಿ ಕೇವಲ 25 ಸಾವಿರ ರು.ನಲ್ಲಿ ಈ ಕೆಲಸ ನಡೆಯುತ್ತಿತ್ತು. ದೇಶದಲ್ಲಿ 10 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡಲಾಗಿದೆ ಎಂದರು.ನಿಮ್ಮ ಸಂಸದರು 400 ರಲ್ಲಿ ಇರಬೇಕಾ, ವಿರೋಧ ಪಕ್ಷದಲ್ಲಿ ಕೂರುವ 40 ರಲ್ಲಿ ಇರಬೇಕಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಆರೋಗ್ಯ ಸಚಿವನಾಗಿ, ಕೋವಿಡ್ ಹೋರಾಟದ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯಕ್ಕೆ ಕಾಲಿಟ್ಟರೆ ಬರಗಾಲ ಬರುತ್ತದೆ, ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದಿಂದ ಬೆಳೆ ನಷ್ಟವಾದಾಗ, 48 ಗಂಟೆಯಲ್ಲಿ ಅಂದಾಜು ತಿಳಿದು ಒಂದೇ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಎರಡು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಈ ಬಗ್ಗೆ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಯುಪಿಎ ಇದ್ದಾಗ 1.50 ಲಕ್ಷ ಕೋಟಿ ರೂ. ರಾಜ್ಯಕ್ಕೆ ಬಂದರೆ, ಪ್ರಧಾನಿ ಮೋದಿ ಸರ್ಕಾರದಿಂದ 4.52 ಲಕ್ಷ ಕೋಟಿ ರು. ಬಂದಿದೆ. ರಾಜ್ಯ ಸರ್ಕಾರ ಮೇಕೆದಾಟುವಿಗಾಗಿ ಪಾದಯಾತ್ರೆ ಮಾಡಿದ್ದು, ಈಗ ಅದರಿಂದ ಮೇಕೆಯ ಶಬ್ದವೂ ಕೇಳುತ್ತಿಲ್ಲ. ಬಡವರು ಬಡವರಾಗಿಯೇ ಉಳಿಯಬೇಕೆನ್ನುವುದು ಕಾಂಗ್ರೆಸ್‌ನ ಧ್ಯೇಯ ಎಂದರು.
ಸರ್ಕಾರಿ ಜಮೀನನ್ನು ಗುರುತಿಸಿ ಜನರಿಗೆ ವಸತಿ ನಿರ್ಮಿಸಲಾಗಿದೆ. ನಾನು ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ನಿವೇಶನಗಳನ್ನು ಬಡಜನರಿಗೆ ನೀಡಿದ್ದೆ. ಹೊಸಕೋಟೆಯಲ್ಲಿ 291 ಎಕರೆ ಜಾಗವನ್ನು ಗುರುತಿಸಿ ಅಲ್ಲಿ ಬಡಜನರಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಿಂದಾಗಿ 10,450 ಕುಟುಂಬಗಳಿಗೆ ಉಚಿತ ನಿವೇಶನ ಸಿಕ್ಕಿದೆ. ಅಂತಹ ಪುಣ್ಯದ ಕೆಲಸವನ್ನು ಎಂಟಿಬಿ ನಾಗರಾಜ್ ಮಾಡಿದ್ದಾರೆ. ಆದರೆ ಈಗಿನ ಶಾಸಕರು ಹಳೆಯ ಯೋಜನೆಗಳನ್ನು ಈಗ ಉದ್ಘಾಟಿಸಿ ಹೆಸರು ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತ ಅಂತ್ಯಗೊಳಿಸಲು ಹಾಗೂ ಕಳೆದ 10 ತಿಂಗಳಲ್ಲಿ ಕಾಣದ ಅಭಿವೃದ್ಧಿಯನ್ನು ಮತ್ತೆ ತರಲು ಶ್ರೀ ನರೇಂದ್ರ ಮೋದಿಯವರ ನಾಯಕತ್ವ ಬೇಕಿದೆ. ಮೂರನೇ ಬಾರಿಗೆ ಮೋದಿಯವರನ್ನು ಗೆಲ್ಲಿಸುವ ಮೂಲಕ ವಿಕಸಿತ ಚಿಕ್ಕಬಳ್ಳಾಪುರಕ್ಕೆ ಎಲ್ಲರೂ ಕೈ ಜೋಡಿಸಬೇಕು.