ಬರ: ನಿರ್ಮಲಾ ಅವರೇ ಅನ್ಯಾಯ ಒಪ್ಪಿದ್ದಾರೆ- ಡಿಕೆಶಿ

Published : Apr 08, 2024, 06:32 AM IST
Nirmala Sitharaman

ಸಾರಾಂಶ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗ ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡಿದ್ದು, ಅವರಿಗೆ ಧನ್ಯವಾದಗಳು. ಆದರೆ ಬರ ಪರಿಹಾರಕ್ಕೂ ಚುನಾವಣೆಗೂ ಏನು ಸಂಬಂಧ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರು :  ಬರ ಪರಿಹಾರ ವಿಚಾರದಲ್ಲಿ ಇಷ್ಟು ದಿನ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗ ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡಿದ್ದು, ಅವರಿಗೆ ಧನ್ಯವಾದಗಳು. ಆದರೆ ಬರ ಪರಿಹಾರಕ್ಕೂ ಚುನಾವಣೆಗೂ ಏನು ಸಂಬಂಧ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್ಮೆಂಟ್ ನಿವಾಸಿಗಳ ಭೇಟಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರ ಪರಿಹಾರ ವಿಳಂಬಕ್ಕೆ ಚುನಾವಣಾ ಆಯೋಗ ಕಾರಣ ಎಂದು ಕೇಂದ್ರ ವಿತ್ತ ಸಚಿವರು ಹೇಳಿದ್ದಾರೆ. ಆದರೆ ಬರ ಪರಿಹಾರಕ್ಕೂ ಚುನಾವಣೆಗೂ ಏನು ಸಂಬಂಧ? ಈ ಹೇಳಿಕೆ ಮೂಲಕ ರಾಜ್ಯಕ್ಕೆ ಬರ ಪರಿಹಾರ ಬರುವುದು ವಿಳಂಬವಾಗಿದ್ದು, ರಾಜ್ಯಕ್ಕೆ ಅನ್ಯಾಯ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದರು ಎಂದರು.

ನಾವು ಬರ ಪರಿಹಾರ ನೀಡುವಂತೆ ಮನವಿ ನೀಡಿ ಎಷ್ಟು ತಿಂಗಳುಗಳಾಗಿವೆ? ನಾವು ಬರ ಪರಿಹಾರ ಮನವಿ ಕೊಟ್ಟ ಬಳಿಕ ನಾಲ್ಕು ತಿಂಗಳವರೆಗೂ ಯಾವುದೇ ಚುನಾವಣೆ ನೀತಿ ಸಂಹಿತೆ ಹಾಗೂ ಚುನಾವಣಾ ಆಯೋಗದ ನಿರ್ಬಂಧ ಇರಲಿಲ್ಲ. ಈಗ ಚುನಾವಣಾ ಆಯೋಗದ ನೆಪ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಅಕ್ಷಮ್ಯ ಅಪರಾಧದ ಬಗ್ಗೆ ಜನರಿಗೂ ಅರಿವಾಗಿದೆ. ಈ ಮೂಲಕ ಡಿ.ಕೆ. ಸುರೇಶ್ ಅವರ ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಪಾಲಿನ ಹೋರಾಟ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಅಧಿಕಾರ ಇದ್ದಾಗ ಕುಮಾರಸ್ವಾಮಿ ಯಾಕೆ ಮಾಡಲಿಲ್ಲ:

ಮೇಕೆದಾಟು ಯೋಜನೆ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಶಿವಕುಮಾರ್‌, ಇಲ್ಲಿನ ಜನರ ಕಷ್ಟಕ್ಕೆ ಪರಿಹಾರ ನೀಡಿ ಧೈರ್ಯ ತುಂಬುವವರು ನಾವು. ಬೇರೆ ಅಭ್ಯರ್ಥಿಗಳು ನಮ್ಮಂತೆ ಜನರಿಗೆ ಅಭಯ ನೀಡುವುದಿಲ್ಲ. ಕುಮಾರಸ್ವಾಮಿ ಅವರು ಈಗ ಮೇಕೆದಾಟು, ಮಹದಾಯಿ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಈ ವಿಚಾರದಲ್ಲಿ ಏನೂ ಮಾಡದವರು ಈಗ ಏನು ಮಾಡುತ್ತಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡುವಾಗ ಅವರು ಕೊಟ್ಟಿರುವ ಹೇಳಿಕೆ ನೋಡಿ. ನಮ್ಮ ಪಾದಯಾತ್ರೆ ಸಂದರ್ಭದಲ್ಲಿ ಕಬಾಬ್ ತಿನ್ನೋಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದ ಕುಮಾರಸ್ವಾಮಿ ಅವರು ಈಗ ಪಾದಯಾತ್ರೆ ಬಗ್ಗೆ ಮಾತಾಡುತ್ತಿದ್ದಾರೆ. ಮಂಡ್ಯಕ್ಕೆ ಬಂದ ನಂತರ ಅವರಿಗೆ ಬಿಸಿ ತಟ್ಟಿರುವಂತೆ ಕಾಣುತ್ತಿದೆ ಎಂದು ತಿರುಗೇಟು ನೀಡಿದರು.

ನಾವು ಹೋರಾಟ ಮಾಡಿದ್ದು ರಾಜ್ಯದ ಜನತೆಗಾಗಿ. ರಾಜಕಾರಣದಲ್ಲಿ ಅದು ನಮ್ಮ ಬದ್ಧತೆ. ಅದನ್ನು ಅವರಿಂದ ಸಹಿಸಲು ಆಗಲಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ಬೆಂಗಳೂರು ಜನರಿಗೆ ಕುಡಿಯುವ ನೀರು ಪೂರೈಸಲು ನಾನು ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನಾನು ಕೊಟ್ಟ ಮಾತಿನಂತೆ ನಡೆಯುತ್ತೇನೆ ಎಂದು ಜನರಿಗೆ ನಂಬಿಕೆ ಇದೆ. ಅವರ ನಂಬಿಕೆಗೆ ತಕ್ಕಂತೆ ನಡೆಯುತ್ತೇನೆ. ಇದು ಮತದಾರರಿಗೆ ಮನವರಿಕೆಯಾಗಿದೆ ಎಂದು ತಿಳಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ