;Resize=(412,232))
ಬೆಂಗಳೂರು : ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಭೇಟಿಯಾಗಿ ಪ್ರತ್ಯೇಕ ಮಾತುಕತೆ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಕುತೂಹಲ ಮೂಡಿಸುವ ಪೋಸ್ಟರ್ ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ, ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂಬ ಪೋಸ್ಟರ್ ಹಂಚಿಕೊಂಡಿದ್ದಾರೆ. ಅವರಂತೆಯೇ ಸಹೋದರ ಡಿ.ಕೆ.ಸುರೇಶ್ ಅವರು, ‘ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಸತತ ಪ್ರಯತ್ನದ ಫಲವೇ ಯಶಸ್ಸು’ ಎಂಬ ಪೋಸ್ಟರ್ ಹಾಕಿದ್ದಾರೆ.
ನಾಯಕತ್ವದ ಬದಲಾವಣೆ ಚರ್ಚೆ ಮತ್ತು ರಾಹುಲ್ ಗಾಂಧಿ ಅವರೊಂದಿಗಿನ ಭೇಟಿ ಬೆನ್ನಲ್ಲೇ ಸಹೋದರರು ಹಾಕಿರುವ ಪೋಸ್ಟರ್‌ಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ನಾನು ಹೊಸದಾಗಿ ಆ ಮಾತನ್ನು ಹೇಳುತ್ತಿಲ್ಲ. ಒಕ್ಕಲಿಗ ಉದ್ಯಮಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿನ ಉದ್ಯಮಿಗಳ ಜತೆ ನನ್ನ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದೇನೆ. ಅದನ್ನು ಪೋಸ್ಟ್ ಮಾಡಲಾಗಿದೆ ಎಂದಿದ್ದಾರೆ.