ಕೇಂದ್ರದ ನೀತಿಯಿಂದ ರೈತರು, ಕಾರ್ಮಿಕರಿಗೆ ಸಂಕಷ್ಟ - ಹಣಕಾಸು ಹಂಚಿಕೆಯಲ್ಲಿ ಅನ್ಯಾಯ : ಪಿ.ಶ್ರೀನಿವಾಸ್

KannadaprabhaNewsNetwork | Updated : Nov 10 2024, 04:33 AM IST

ಸಾರಾಂಶ

ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟಗಳನ್ನು ಸಂಘಟಿಸಬೇಕಾಗಿದೆ.ಬಿಜೆಪಿಯು ಜನವಿರೋಧಿ ನೀತಿಗಳಿಂದ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳಿಗೆ ಹಣಕಾಸು ಹಂಚಿಕೆಯಲ್ಲಿ ಅನ್ಯಾಯಮಾಡಿದೆ. ಇಡಿ, ಸಿಬಿಐ, ಐಟಿ ದಾಳಿ ಮೂಲಕ ಹೆದರಿಸುತ್ತಿದೆ.

 ಬಂಗಾರಪೇಟೆ : ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳಿಂದ ರೈತ, ಕಾರ್ಮಿಕರು ಅತ್ಯಂತ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆಂದು ಸಿಪಿಐ ತಾಲೂಕು ಕಾರ್ಯದರ್ಶಿ ಪಿ.ಶ್ರೀನಿವಾಸ್ ಆರೋಪಿಸಿದರು.

ಪಟ್ಟಣದ ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಿಪಿಐನ 24ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಗೊಂದಲ ನೀತಿಗಳು ಮತ್ತು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಿ ಶ್ರೀಮಂತರ ಉದ್ದಾರಕ್ಕಾಗಿ ಶ್ರಮಿಸುತ್ತಿದೆಯೇ ಹೊರತು ಬಡ ಕಾರ್ಮಿಕರ ಅಭಿವೃದ್ದಿಗೆ ಅಲ್ಲ ಎಂದರು.

ಕಾರ್ಮಿಸರು ಸಂಘಟಿತರಾಗಲಿ

ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟಗಳನ್ನು ಸಂಘಟಿಸಬೇಕಾಗಿದೆ. ಬಿಜೆಪಿಯು ತನ್ನ ಜನವಿರೋಧಿ ನೀತಿಗಳಿಂದ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳಿಗೆ ಹಣಕಾಸು ಹಂಚಿಕೆಯಲ್ಲಿ ಅನ್ಯಾಯಮಾಡಿದೆ. ಇಡಿ, ಸಿಬಿಐ, ಐಟಿ ದಾಳಿಗಳ ಮೂಲಕ ಹೆದರಿಸಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಕೆಲವು ಪ್ರಮುಖರನ್ನು ಜೈಲಿಗೆ ಕಳುಹಿಸುವುದು, ಹಣದ ಅಮಿಷ ತೋರಿಸಿ ನಾಯಕರನ್ನು ಸೆಳೆಯುವುದು ನಿರಂತರವಾಗಿ ನಡೆಯುತ್ತಿರುವುದನ್ನು ಖಂಡಿಸಿದರು.

ಸಮ್ಮೇಳವನ್ನು ಉದ್ಘಾಟಿಸಿ ಸಂಘಟನೆಯ ರಾಜ್ಯ ನಾಯಕಿ ಕೆ.ಎಸ್.ಲಕ್ಷ್ಮೀ ಮಾತನಾಡಿ ಮನುವಾದಿ ಬಿಜೆಪಿಯ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದರೂ ಜನರ ಆಶಯಗಳನ್ನು ಉಳಿಸುವಲ್ಲಿ ವಿಫಲವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ತನಿಖೆಗಾಗಿ ಸಮಿತಿಗಳನ್ನು ರಚಿಸುವುದು ದಿನ ಬೆಳೆಗಾದರೆ ಆರೋಪ - ಪ್ರತ್ಯಾರೋಪದಲ್ಲಿ ಕಾಲ ಕಳೆಯುತ್ತಿದ್ದಾರೆ. ಅತೀ ವೃಷ್ಟಿಯಾಗಿ ರಾಜ್ಯದ ಜನ ತತ್ತರಿಸಿದ್ದರೂ ಇವರ ಕಡೆ ಗಮನ ಕೊಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.ಸರ್ಕಾರದ ಬಳಿ ಹಣವಿಲ್ಲ

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ, ಅಂಗನವಾಡಿ, ಆಶಾ ಬಿಸಿಯೂಟ ಸೇರಿದಂತೆ ಇನ್ನಿತರೆ ವಲಯಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಪ್ರತಿ ತಿಂಗಳು ವೇತನ ನೀಡಲಿಕ್ಕೆ ಆಗದ ಸ್ಥಿತಿ ಬಂದಿದೆ. ಕೈಗಾರಿಕೆಗಳಲ್ಲಿ ದುಡಿಯುವ ಆ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚು ಮಾಡಿರುವುದು, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ವಿನಿಯೋಗದಲ್ಲಿನ ಭ್ರಷ್ಟಾಚಾರ ಇನ್ನು ಅನೇಕ ಜನವಿರೋಧಿ ಕ್ರಮಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಇದರ ವಿರೋಧಿ ಹೋರಾಟಗಳನ್ನು ರೂಪಿಸಬೇಕಾಗಿದೆ ಎಂದರು.

ಜೆಡಿಎಸ್‌ಗೆ ಅಧಿಕಾರದ ಆಸೆ

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಜನಪರ ರಾಜಕಾರಣ ಮಾಡಲು ಅವಕಾಶ ಇದ್ದ ಜೆಡಿಎಸ್ ಕ್ಷಣಿಕ ಅಧಿಕಾರದ ಆಸೆಗಾಗಿ ಕೋಮುವಾದಿ ಬಿಜೆಪಿಯೊಂದಿಗೆ ಜಾತ್ಯತೀತ ನಾಮಫಲಕದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಸೈದ್ದಾಂತಿಕ ರಾಜಕೀಯದ ವಿಪರ್ಯಾಸ ಎಂದು ಟೀಕಿಸಿದರು.

ಸಭೆಯಲ್ಲಿ ಸೂರ್ಯನಾರಾಯಣ, ಅರ್ಜನ್‌, ಅಚ್ಚುತ್, ಜಯಲಕ್ಷ್ಮೀ, ಪಿಚ್ಚಕಣ್ಣು, ರಘುಪತಿ, ಅಪ್ಪಣ್ಣ, ಹನುಮಂತರಾಯ ಇತರರು ಇದ್ದರು.

Share this article