ರಾಜ್ಯದ ಇತಿಹಾಸದಲ್ಲೇ ಮೊದಲು - ಚು. ಆಯೋಗದೆದುರು ಸಿಎಂ ಧರಣಿ!

Published : Oct 02, 2026, 08:10 AM IST
CM DK Shivakumar

ಸಾರಾಂಶ

ರಾಜ್ಯದಲ್ಲಿ ಫಾರ್ಮ್‌ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರದ ಬಗ್ಗೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸಂಪುಟ ಸಹೋದ್ಯೋಗಿಗಳ ಜತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಫಾರ್ಮ್‌ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರದ ಬಗ್ಗೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸಂಪುಟ ಸಹೋದ್ಯೋಗಿಗಳ ಜತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ಹೋರಾಟಕ್ಕೆ ಮಣಿದ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ಅವರು, ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಖುದ್ದು ಮುಖ್ಯಮಂತ್ರಿಗಳೇ, ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನೂ ರದ್ದುಪಡಿಸಿ ಗುರುವಾರ ಸಂಜೆ ಸಾಂವಿಧಾನಿಕ ಸಂಸ್ಥೆಯ ಕಚೇರಿ ಬಾಗಿಲ ಬಳಿ ಕುಳಿತು ಧರಣಿ ನಡೆಸಿದರು.

ಡಿ.ಕೆ.ಶಿವಕುಮಾರ್‌ ಅವರು ನೀಡಿದ ದಾಖಲೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯಚುನಾವಣಾಧಿಕಾರಿ ಅನ್ಬುಕುಮಾರ್‌, ಎರಡು ದಿನಗಳ ಕಾಲ ಕಾಲಾವಕಾಶ ಕೋರಿದರು. ಇದಕ್ಕೆ ಒಪ್ಪದ ಶಿವಕುಮಾರ್‌ ಅವರು, ಒಂದಲ್ಲ ಎರಡು ದಿನವಾದರೂ ಕ್ರಮ ಆಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಸಹ ಸಾಥ್‌ ನೀಡಿದರು.

ಒತ್ತಡಕ್ಕೆ ಮಣಿದ ಅನ್ಬುಕುಮಾರ್ ಅವರು ಜಿಲ್ಲಾ ಚುನಾವಣಾಧಿಕಾರಿಗಳ ಜತೆಗೆ ವರ್ಚುಯಲ್‌ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಬಳಿಕ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂತಿಮವಾಗಿ ಮುಖ್ಯಮಂತ್ರಿಗಳ ನಿಯೋಗಕ್ಕೆ ಭರವಸೆ ನೀಡುವ ಜತೆಗೆ ಸೂಕ್ತ ಕ್ರಮದ ಆದೇಶ ನೀಡಿದರು.

ಅಗತ್ಯ ಕ್ರಮಕ್ಕೆ ಅನ್ಬುಕುಮಾರ್‌ ಸೂಚನೆ:

ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿರುವ ಅನ್ಬುಕುಮಾರ್‌, ಇಆರ್‌ಒಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ನೈಜವಲ್ಲದ ಫಾರ್ಮ್‌-7 ಸಲ್ಲಿಸಿರುವುದಾಗಿ ದೂರುಗಳು ಬಂದಿದೆ. ಇವುಗಳನ್ನು ಪರಿಶೀಲಿಸಿ ಇಆರ್‌ಒಗಳು ಕಾನೂನು ಪ್ರಕಾರ ಈ ರೀತಿ ಅರ್ಜಿ ಸಲ್ಲಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಉದ್ದೇಶಪೂರ್ವಕವಾಗಿ ತಪ್ಪು ಹೇಳಿಕೆ ಅಥವಾ ಘೋಷಣೆ ಮೂಲಕ ಫಾರಂ- 6, 6ಎ, 7 ಹಾಗೂ 8 ಅರ್ಜಿ ಸಲ್ಲಿಸಿರುವವರ ಮೇಲೆ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 31ರ ಅಡಿ ಕ್ರಮ ಕೈಗೊಳ್ಳಬೇಕು. ಮತದಾರರ ನೋಂದಣಿ ನಿಯಮಗಳ ಅಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.

ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ-ಸಿಎಂ:

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತಿ ದೊಡ್ಡ ಕ್ರಿಮಿನಲ್‌ ಪ್ರಕರಣ. ಸಚಿವ ಸಂಪುಟ ಸಭೆಯನ್ನೂ ರದ್ದು ಮಾಡಿ ಹೋರಾಟ ನಡೆಸಿದ್ದೇವೆ. ಅನ್ಬುಕುಮಾರ್‌ ಅವರು ನಾವು ನೀಡಿದ ದಾಖಲೆ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಆದರೆ, ಕ್ರಮಕ್ಕೆ ಎರಡು ದಿನ ಸಮಯ ಕೋರಿದರು.

ಆದರೆ, ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಗ್ಗುವುದಿಲ್ಲ. ಎರಡು ದಿನ ಆದರೂ ಇಲ್ಲೇ ಇರುತ್ತೇನೆ ಎಂದು ಹೇಳಿದೆ. ಸಂಧಾನಕ್ಕೆ ಯತ್ನಿಸಿದರೂ ಜಗ್ಗಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕೇಂದ್ರ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಡಬಲ್‌ ಎಂಟ್ರಿ ಹಾಗೂ ಮತದಾರ ಸಾವಿನ ಹೊರತಾಗಿ ಫಾರ್ಮ್‌-7 ಪಡೆಯದಂತೆ ಸೂಚಿಸಿದ್ದಾರೆ. ಸಾವಿನ ಸಂದರ್ಭದಲ್ಲಿ ಮರಣ ಪತ್ರ ಸಲ್ಲಿಕೆ ಕಡ್ಡಾಯಗೊಳಿಸಿದ್ದಾರೆ ಎಂದು ಹೇಳಿದರು.

ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ, ಹೋರಾಟ ಮುಂದುವರೆಯುತ್ತದೆ. 35-40 ಲಕ್ಷ ಮತದಾರರ ಹಕ್ಕು ಉಳಿಸಲು ಅಗತ್ಯ ದಾಖಲೆ ನೀಡುತ್ತೇವೆ. 50,000ಕ್ಕೂ ಹೆಚ್ಚು ಬಿಎಲ್‌ಎ-2 ಗಳನ್ನು ನೇಮಿಸಿದ್ದೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಮತಗಳು ಡಿಲೀಟ್ ಆಗಿವೆ. ಬಳ್ಳಾರಿ, ವಿಜಯಪುರ, ಬೆಳಗಾವಿ, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮತದಾರರ ಮುದ್ರಿತ ಮಾದರಿಯ ಅರ್ಜಿ ನಮೂನೆ-7 ಹಂಚಿಕೆಯಾಗಿ ದುರ್ಬಳಕೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಷಡ್ಯಂತ್ರ ರೂಪಿಸಿರುವ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಬಳ್ಳಾರಿಯ 2 ಕಡೆ 13 ಸಾವಿರ ಅರ್ಜಿ:

ಬಳ್ಳಾರಿಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ 13 ಸಾವಿರ ಫಾರಂ 7 ಮೂಲಕ ಅರ್ಜಿಗಳನ್ನು ಸಲ್ಲಿಸಿ ಹಿಂಪಡೆದಿದ್ದಾರೆ. ಬಿಜಾಪುರದಲ್ಲಿ ಬಬಲೇಶ್ವರ ಹೊರತುಪಡಿಸಿ 13 ಸಾವಿರ ಅರ್ಜಿಗಳನ್ನು ಸಲ್ಲಿಸಿ, ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಅರ್ಜಿಗಳನ್ನು ಹಿಂಪಡೆದಿದ್ದಾರೆ. ಮೈಸೂರು, ಬೆಳಗಾವಿ, ಬಾಲ್ಕಿ ಕ್ಷೇತ್ರಗಳಲ್ಲಿನ ದಾಖಲೆ, ವಿಡಿಯೋಗಳನ್ನು ಕೊಟ್ಟಿದ್ದೇವೆ. ಅವರು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರ ನಡುವಣ ಚರ್ಚೆಯನ್ನು ನಾನು ಬಹಿರಂಗಪಡಿಸುವುದಿಲ್ಲ. ನಾಳೆವರೆಗೂ ಸಮಯ ಕೇಳಿದ್ದಾರೆ ಎಂದು ತಿಳಿಸಿದರು.

ಈ ಅಕ್ರಮದ ಹಿಂದಿರುವ ದೊಡ್ಡ ಮಾಫಿಯಾಗಳು ಒತ್ತಡ ಹಾಕುತ್ತಾರೆ. ನಮ್ಮ ಮನೆ ಸದಸ್ಯರ ಎಪಿಕ್ ಸಂಖ್ಯೆ ನಮಗೆ ಗೊತ್ತಿರುವುದಿಲ್ಲ. ಆದರೆ ಇವರಿಗೆ ಎಪಿಕ್ ಸಂಖ್ಯೆಯಿಂದ ಹಿಡಿದು ಎಲ್ಲಾ ಮಾಹಿತಿ ಇದೆ. 224 ಕ್ಷೇತ್ರಗಳಲ್ಲಿ 10-20 ಸಾವಿರ ಮತಗಳನ್ನು ಅಳಿಸುವ ಷಡ್ಯಂತ್ರ ನಡೆದಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಮತದಾರರ ಹಕ್ಕು ಉಳಿಸುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಬಸವಂತಪ್ಪ, ಬೈರತಿ ಸುರೇಶ್, ಶಿವರಾಜ ತಂಗಡಗಿ, ವಿಜಯಾನಂದ ಕಾಶಪ್ಪನವರ್, ಬಾಲಕೃಷ್ಣ, ರಿಜ್ವಾನ್ ಅರ್ಷದ್, ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅ.2ರಿಂದ ಇಂಡಿಯಾ ಕೂಟದಿಂದ ಪ್ರಜಾಸತ್ತೆ ಉಳಿಸಿ ಆಂದೋಲನ
ಬಿಕೆ ಚುನಾವಣೆಯಲ್ಲಿ ಗೆದ್ದಿದ್ದಾರಾ? : ಬಿವೈವಿ