ಅ.2ರಿಂದ ಇಂಡಿಯಾ ಕೂಟದಿಂದ ಪ್ರಜಾಸತ್ತೆ ಉಳಿಸಿ ಆಂದೋಲನ

Published : Oct 01, 2026, 11:33 AM IST
AICC Postpones High-Level Meeting of Chief Ministers and Education Ministers

ಸಾರಾಂಶ

ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳ ಇಂಡಿಯಾ ಕೂಟ, ಅ.2ರಿಂದ 8ರವರೆಗೆ ದೇಶದ ಎಲ್ಲ ಜಿಲ್ಲೆಗಳಲ್ಲಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ನಡೆಸಲು ನಿರ್ಧರಿಸಿದೆ.

 ನವದೆಹಲಿ : ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳ ಇಂಡಿಯಾ ಕೂಟ, ಅ.2ರಿಂದ 8ರವರೆಗೆ ದೇಶದ ಎಲ್ಲ ಜಿಲ್ಲೆಗಳಲ್ಲಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ನಡೆಸಲು ನಿರ್ಧರಿಸಿದೆ. ಇದರ ನಡುವೆ, ಅ.6ರಂದು ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ತಲೆದಂಡಕ್ಕೆ ಅದು ಪಟ್ಟು ಹಿಡಿದಿದೆ.

ಈ ನಿರ್ಧಾರವನ್ನು, ಬುಧವಾರ ನಡೆದ ಇಂಡಿಯಾ ಕೂಟದ ಸದಸ್ಯ ಪಕ್ಷಗಳ ಪ್ರಮುಖ ನಾಯಕರೊಂದಿಗಿನ ಸಭೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಕಟಿಸಿದ್ದಾರೆ.

ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡ ಆರೋಪ ಹೊತ್ತಿರುವ ಸಿಇಸಿ ಜ್ಞಾನೇಶ್‌ ಕುಮಾರ್‌ ವಜಾಗೆ ಆಗ್ರಹಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಸರಣಿ ಪ್ರತಿಭಟನೆ:

‘ಅ.2ರಿಂದ 8ರ ವರೆಗೆ ಜಿಲ್ಲಾಧಿಕಾರಿಗಳ ಕಚೇರಿಗಳೆದುರು ಪ್ರತಿಭಟನೆ ನಡೆಸಲಾಗುವುದು. ಅ.6ರಂದು ವಿಪಕ್ಷದ ಎಲ್ಲಾ ಸಂಸದರು ಚುನಾವಣಾ ಆಯೋಗದ ಕಚೇರಿ ವರೆಗೆ ಮೆರವಣಿಗೆ ಹೋಗಲಿದ್ದಾರೆ. ಜತೆಗೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಸಮಯ ಕೋರಿ ಅಕ್ಟೋಬರ್‌ನ 2ನೇ ವಾರದಲ್ಲಿ ‘ಮತಗಳವಿನ ಸರ್ಕಾರ’ದ ವಿರುದ್ಧ ಮನವಿ ಸಲ್ಲಿಸಲಿದ್ದಾರೆ. ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ರ್‍ಯಾಲಿಯಲ್ಲಿ ಯುವಕರು ಮತ್ತು ಎನ್‌ಜಿಒಗಳನ್ನು ಅಪಾರ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಗುವುದು’ ಎಂದು ಇಂಡಿಯಾ ಕೂಟದ ಜಂಟಿ ಸುದ್ದಿಗೋಷ್ಠಿಯಲ್ಲಿ ಖರ್ಗೆ ಹೇಳಿದರು.

ರಾಹುಲ್‌ ಮೊದಲೇ ಹೇಳಿದ್ದರು

ಹಲವು ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ‘ಇದನ್ನು ಬಳಸಿಕೊಂಡು ಸರ್ಕಾರ ಮತಗಳವು ಮಾಡಿತ್ತಿದೆ’ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು. ‘ಅದು ಈಗ ನಿಜ ಎಂಬುದು ಜನರಿಗೆ ಅರಿವಾಗುತ್ತಿದೆ. ಮೊದಲು ನೋಟ್‌ ಬಂದಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಈಗ ವೋಟ್‌ ಬಂದಿ ಮಾಡುವ ಮೂಲಕ ಜನರ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲಲೆಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಯೋಗವನ್ನು ಕೈಗೊಂಬೆಯಂತೆ ಕುಣಿಸುತ್ತಿದ್ದಾರೆ’ ಎಂದು ಖರ್ಗೆ ಹರಿಹಾಯ್ದರು.

ಜತೆಗೆ, ‘ಎಸ್‌ಐಆರ್ ಮತ್ತು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

5 ಬೃಹತ್‌ ರ್‍ಯಾಲಿ

‘ದೇಶವನ್ನು ಮುನ್ನಡೆಸಲು ಪ್ರತಿನಿಧಿಗಳನ್ನು ಆರಿಸಲು ಅತ್ಯಗತ್ಯವಾದ ಮತದಾನದ ಹಕ್ಕನ್ನು ಸರ್ಕಾರ ಹೇಗೆ ಕಸಿಯುತ್ತಿದೆ ಎಂಬುದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 5 ದೊಡ್ಡ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು. ಅವುಗಳ ಸ್ಥಳ ಮತ್ತು ಸಮಯವನ್ನು ಶೀಘ್ರ ಪ್ರಕಟಿಸಲಾಗುವುದು’ ಎಂದು ಖರ್ಗೆ ತಿಳಿಸಿದರು.

ಇವಿಎಂ ಬದಲು ಬ್ಯಾಲೆಟ್‌

ವಿದ್ಯುನ್ಮಾನ ಮತಯಂತ್ರಗಳ ಬದಲು ಹಳೆ ವಿಧಾನವಾದ ಮತಚೀಟಿಯ ಬಳಕೆಗೆ ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ‘ಚುನಾವಣೆಗಳು ಬ್ಯಾಲೆಟ್‌ ಪೇಪರ್‌ಗಳ ಮೂಲಕ ನಡೆಯಬೇಕು ಎಂಬುದಕ್ಕೆ ಎಲ್ಲರ ಶೇ.100ರಷ್ಟು ಸಮ್ಮತಿಯಿದೆ. ಜತೆಗೆ ಅಧಿಕಾರದಲ್ಲಿರುವ ಕಳ್ಳ ಸರ್ಕಾರ ರೂಪಿಸಿದ ಕಾನೂನುಗಳನ್ನು ರದ್ದುಗೊಳಿಸಬೇಕು’ಎಂದು ಆಗ್ರಹಿಸಿದರು.

ಜ್ಞಾನೇಶ್‌ ಕಳ್ಳ-ಮಮತಾ

ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮಾತನಾಡಿ, ‘ಸಿಇಸಿ ಜ್ಞಾನೇಶ್ ಕುಮಾರ್‌ ಕಳ್ಳ, ಡಾಕೂ (ಡಕಾಯಿತ). ಅವರು ತಕ್ಷಣ ರಾಜೀನಾಮೆ ನೀಡಬೇಕು. ಅವರ ವಜಾ ಆಗದಿದ್ದಲ್ಲಿ ಭೂಮಿ-ಆಕಾಶ್‌ ಒಂದು ಮಾಡಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಇವರು ಭಾಗಿ:

3.5 ತಾಸು ನಡೆದ ಸಭೆಯಲ್ಲಿ ಇಂಡಿಯಾ ಕೂಟದ ಸದಸ್ಯ ಪಕ್ಷಗಳ ಪ್ರಮುಖ ನಾಯಕರಾದ ಖರ್ಗೆ, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಜಮ್ಮು ಕಾಶ್ಮೀರ ಸಿಎಂ ಒಮರ್‌ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಎನ್‌ಸಿಪಿ (ಶರದ್‌ ಬಣ) ಸಂಸದೆ ಸುಪ್ರಿಯಾ ಸುಳೆ ಸೇರಿ ಹಲವರು ಭಾಗಿ ಆಗಿದ್ದರು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಜಾರ್ಖಂಡ್ ಸಿಎಂ ಮತ್ತು ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೆನ್ ಸೇರಿ ಕೆಲ ನಾಯಕರು ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಗೈರಾಗಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಕೆ ಚುನಾವಣೆಯಲ್ಲಿ ಗೆದ್ದಿದ್ದಾರಾ? : ಬಿವೈವಿ
ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ