;Resize=(412,232))
ರಾಜಕಾರಣಿಗಳು ಮಾಧ್ಯಮಗಳ ಮುಂದೆ ಪ್ರತಿ ಮಾತು ಅಳೆದು ತೂಗಿ ಮಾತನಾಡುತ್ತಾರೆ. ಆದರೆ, ಒಂದೊಂದು ಸಾರಿ ಪತ್ರಕರ್ತರ ಪ್ರಶ್ನೆ ಪೂರ್ಣವಾಗಿ ಕೇಳುವ ಮುನ್ನ ಮಾತನಾಡಿದರೆ ಅದು ಅಪಾರ್ಥವಾಗುವುದಲ್ಲದೆ, ಪಕ್ಷದೊಳಗೆ ವಿಲನ್ ಆಗಬೇಕಾಗುತ್ತದೆ. ಹೀಗೆ ವಿಲನ್ ಆಗುವುದರಿಂದ ಸ್ವಲ್ಪದರಲ್ಲೇ ಬಚಾವಾದವರು ನಮ್ಮ ಡಿಸಿಎಂ ಡಾ.ಜಿ.ಪರಮೇಶ್ವರ್ ಸಾಹೇಬ್ರು...
ವಿಷಯ ಏನೆಂದರೆ, ಬಿಡದಿ ಟೌನ್‌ಶಿಪ್ ವಿಚಾರವಾಗಿ ಮುಖ್ಯಮಂಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಗ್ಯುದ್ದದ ನಡುವೆ ಜೈಲಿನ ವಿಚಾರವೂ ಬಂದು ಹೋಗಿದೆ. ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಕುಮಾರಸ್ವಾಮಿ ಅದ್ಯಾವಗಲೋ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಅವರು, ನನ್ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಉತ್ತರಿಸಿದ್ದರು.
ಈ ಜೈಲಿಗೆ ಹೋಗುವ ಹೇಳಿಕೆ ಮುಂದಿಟ್ಟುಕೊಂಡು ಮಾಧ್ಯಮದವರು ಡಾ.ಪರಮೇಶ್ವರ್ ಅವರಿಗೆ ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೇನು ಹೇಳುತ್ತೀರಿ ಎಂದು ಮೈಕ್ ಮುಂದಿಟ್ಟರು.
ಜೈಲಿಗೆ ಕಳುಹಿಸುವ ಸಂಚು ಎಂಬುದನ್ನಷ್ಟೇ ಕೇಳಿಸಿಕೊಂಡ ಡಾ.ಪರಮೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧವಾಗಿ ಪ್ರಶ್ನೆ ಕೇಳಿದ್ದಾರೆ ಎಂದು ತಿಳಿದು, ‘ಯಾರನ್ನೂ ಕಾನೂನಿಗೆ ವಿರುದ್ಧವಾಗಿ ಜೈಲಿಗೆ ಕಳುಹಿಸಲಾಗುವುದಿಲ್ಲ. ತಪ್ಪು ಮಾಡಿದ್ದರಷ್ಟೇ ಜೈಲಿಗೆ ಹೋಗುತ್ತಾರೆ’ ಎಂದು ರೋಷಾವೇಷದಿಂದ ಹೇಳಿದರು.
ಅದಾದ ನಂತರ ಇದೇನು ಡಿಸಿಎಂ ತಮ್ಮ ಸಿಎಂ ವಿರುದ್ಧವೇ ಮಾತನಾಡಿ ಬಿಟ್ರಲ್ಲ ಎಂದು ಪತ್ರಿಕಾ ಮಾಧ್ಯಮದವರಿಗೆ ಅನುಮಾನ ಬಂದಿದೆ. ಕೂಡಲೇ ಡಿಸಿಎಂ ಅವರ ಮಾಧ್ಯಮ ಸಂಯೋಜಕರನ್ನು ಸಂಪರ್ಕಿಸಿ, ಡಾ.ಪರಮೇಶ್ವರ್ ಹೀಗೆಲ್ಲ ಮಾತಡಿದ್ದಾರಲ್ಲ. ಸಿಎಂ ಜತೆಗೆ ಏನಾದರೂ ಮುನಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಅದನ್ನು ಕೇಳುತ್ತಿದ್ದಂತೆ ಹೌಹಾರಿದ ಡಿಸಿಎಂ ಮಾಧ್ಯಮ ಸಂಯೋಜಕರು, ಡಿಸಿಎಂ ಅವರಿಂದಾದ ಪ್ರಮಾದ ಅರಿತು, ಹಾಗೇನಿಲ್ಲ. ಸಿಎಂ ಮತ್ತು ಡಿಸಿಎಂ ಬಾಂಧವ್ಯ ಉತ್ತಮವಾಗಿದೆ. ಆದರೆ, ಡಿಸಿಎಂ ಅವರು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಾತನಾಡಿದ್ದಾರೆ. ದಯವಿಟ್ಟು ಸುದ್ದಿ ಪ್ರಕಟಿಸಬೇಡಿ ವಿನಂತಿಸಿಕೊಂಡಿದ್ದಾರೆ. ವಿಷಯ ಅರಿತ ಮಾಧ್ಯಮದವರೂ ಡಿಸಿಎಂ ಹೇಳಿಕೆ ಪ್ರಕಟಿಸಲಿಲ್ಲ. ಕೊನೆಗೆ ಡಿಸಿಎಂ ಆದಿಯಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮಾಡಿದ್ದು, ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದು ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಹೇಬ್ರು ಒತ್ತುವರಿ ತೆರವು ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಬೆಳಗಾವಿಯಲ್ಲಿ ಕಾರ್ಯಕ್ರಮ ಮುಗಿಸಿ ನೇರವಾಗಿ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿಳಿದರು. ಪತ್ರಕರ್ತರು ಸಿಎಂ ಅವರನ್ನು ಮಾತನಾಡಿಸಲು ಕಾಯ್ತಾ ನಿಂತಿದ್ದರು. ಆದರೆ ಈಗ ಮೀಡಿಯಾ ಜೊತೆ ಮಾತಾಡಲ್ಲ. ಸ್ಪಾಟ್ ವಿಸಿಟ್ ಮಾತ್ರ ಎಂದು ಭರ್ರನೆ ಕಾರಿನಲ್ಲಿ ಹೊರಟೇ ಬಿಟ್ಟರು.
ಅವರನ್ನು ಪತ್ರಕರ್ತರು, ಅಧಿಕಾರಿಗಳು ಹಿಂಬಾಲಿಸಿದರು. ಎಲ್ಲರೂ ದೊಡ್ಡನಕುಂದಿ ಬಳಿ ದಬದಬನೇ ಇಳಿದರು. ಎರಡು ನಿಮಿಷ ಜಿಬಿಎ ಅಧಿಕಾರಿಗಳು ಅದೇನು ಹೇಳಿದರೋ, ಬಳಿಕ ಮತ್ತೆ ದಬದಬನೆ ಅಧಿಕಾರಿಗಳು ಓಡೋಡಿ ತಮ್ಮ ವಾಹನಗಳತ್ತ ನುಗ್ಗಿದರು. ಅಲ್ಲಿದ್ದ ತಾಲೂಕೊಂದರ ಕಾಂಗ್ರೆಸ್ ಮಹಿಳಾ ನಾಯಕಿ ಕರೆತಂದಿದ್ದ ಕಾರು ಜಸ್ಟ್ ಮಿಸ್ ಆಯ್ತು. ಅದು ಸಿಎಂ ಕಾರಿನ ಹಿಂದೆ ಅತಿವೇಗವಾಗಿ ಹೊರಟೇ ಬಿಟ್ಟಿತು. ಅಲ್ಲಿದ್ದ ಇತರೆ ವಾಹನಗಳೂ ಭರ್ ಭರ್ ಎಂದು ಹೊರಟೇ ಬಿಟ್ಟವು.
ಆಗ ಮಹಿಳಾ ನಾಯಕಿ ಆಯ್ಯೋ ನನ್ ಕಾರು ಎಲ್ಲಿ ಅಂತ ಹುಡುಕುತ್ತಾ ಪರದಾಡುತ್ತಿದ್ದರು. ಜರತಾರಿ ಸೀರೆ ಉಟ್ಟು ಬೆವರುತ್ತಾ, ಎದುರು ಬಿಸಿಲಿನಲ್ಲಿ ಏದುಸಿರು ಬಿಡುತ್ತಾ ಬರುತ್ತಿದ್ದರು. ಇದನ್ನು ನೋಡಿ ಪಾಲಿಕೆ ಆಯುಕ್ತರೊಬ್ಬರಿಗೆ ಏನನ್ನಿಸಿತೋ ಕೂಡಲೆ ಮೇಡಂ, ನಮ್ಮ ಅಧಿಕಾರಿ ಕಾರು ಬರುತ್ತೆ, ಅದನ್ನು ಹತ್ತಿಕೊಳ್ಳಿ ಎಂದು ಹೊರಟೇ ಬಿಟ್ಟರು. 5 ನಿಮಿಷದಲ್ಲಿ ಆ ಕಾರು ಬಂದು ನಿಂತಿತು. ಸದ್ಯ ಆ ಕಾರು ಬಂತಲ್ಲಾ ಅಂತ ಮಹಿಳಾಮಣಿ ಕಾರು ಹತ್ತಿದ್ದೇ ತಡ ನಡೀರಿ ಸಾರ್, ನಿಮ್ಮ ಕಾರು ಇಲ್ಲದಿದ್ರೆ ನಾನು ಇಲ್ಲೇ ಒಣಗಬೇಕಾಗಿತ್ತು ಎಂದು ಹೊರಟೇ ಬಿಟ್ಟರು. ಕಾರು ಜಸ್ಟ್ ಮಿಸ್ ಅಂದ್ರೆ ಇದೆ ಅಲ್ವಾ?..
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದೋ, ನಾಳೆಯೋ ಆಗಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ನಾಲ್ಕು ಸಚಿವಾಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕಾಂಗ್ರೆಸ್‌ನ ನಾಲ್ಕೂ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿಯನ್ನೂ ಮಾಡಿದ್ದಾರೆ. ತಮಗೆ ಸಚಿವ ಸ್ಥಾನ ದೊರೆಯಲಿದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲೂ ಅವರವರ ಬೆಂಬಲಿಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ವಾದಿಸುತ್ತಿದ್ದಾರೆ. ಜತೆಗೆ ಅವರವರ ಬೆಂಬಲಿಗರು ತಮ್ಮ ನಾಯಕರಿಗೆ ಭಾವಿ ಸಚಿವರು ಎಂದು ಕರೆದು ಅವರನ್ನು ಖುಷಿಪಡಿಸುತ್ತಿದ್ದಾರೆ. ಕೆಲವೆಡೆ ಇದು ಬಹಿರಂಗವಾಗಿಯೂ ವ್ಯಕ್ತವಾಗಿದೆ. ನಾಲ್ವರೂ ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಹೀಗಾಗಿ ಕಾಂಗ್ರೆಸ್‌ನ ಎಲ್ಲ ನಾಲ್ಕು ಶಾಸಕರೂ ‘ಭಾವಿ’ ಸಚಿವರಾಗಿದ್ದಾರೆ. ಆದರೆ ಸಚಿವ ಸ್ಥಾನ ದಕ್ಕುವುದು ಈ ನಾಲ್ವರಲ್ಲಿ ಒಬ್ಬರಿಗೆ ಮಾತ್ರ. ಹಾಗಾದರೆ ಸಚಿವ ಸ್ಥಾನ ವಂಚಿತರಾದ ಉಳಿದ ಮೂವರಿಗೆ ಏನೇನ್ನಬೇಕು ಎಂದು ಕೇಳಿದರೆ ಅವರೆಲ್ಲ ‘ಬಾವಿ’ ಸಚಿವರು ಎಂದು ಪ್ರಮುಖ ಮುಖಂಡರೊಬ್ಬರು ಕಿವಿಯಲ್ಲಿ ಹೇಳಿದ ಸುದ್ದಿ ಈಗ ಸಾಕಷ್ಟು ಜನರ ಬಾಯಲ್ಲಿ ನಲಿದಾಡುತ್ತಿದೆ.