ಬಿಜೆಪಿ ಅವಧಿಯ ಹಗರಣಗಳ ತನಿಖೆಗೆ ಹೊಸ ತಿರುವು: ಸಿದ್ದರಾಮಯ್ಯ ಸರ್ಕಾರದ ಮಹತ್ವದ ನಿರ್ಧಾರ

KannadaprabhaNewsNetwork |  
Published : Sep 14, 2024, 01:45 AM ISTUpdated : Sep 14, 2024, 04:39 AM IST
Dr G Parameshwara

ಸಾರಾಂಶ

ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿರುವ ಎಲ್ಲ ಹಗರಣಗಳ ತನಿಖೆಯನ್ನು ತ್ವರಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.  

 ಬೆಂಗಳೂರು : ಈಗಾಗಲೇ ತನಿಖಾ ಹಂತದಲ್ಲಿರುವ ಬಿಜೆಪಿ ಅಧಿಕಾರಾವಧಿಯ ಎಲ್ಲ ಹಗರಣಗಳ ತನಿಖಾ ವರದಿ ಆದಷ್ಟು ಬೇಗ ಸರ್ಕಾರದ ಕೈಸೇರುವಂತೆ ಕ್ರಮ ವಹಿಸುವುದು. ಜೊತೆಗೆ ಇದುವರೆಗೆ ತನಿಖೆಗೆ ವಹಿಸದ ಇನ್ನೂ ಒಂದಷ್ಟು ಪ್ರಕರಣಗಳನ್ನು ತನಿಖೆಗೆ ವಹಿಸುವುದು. ಒಟ್ಟಿನಲ್ಲಿ ಬಿಜೆಪಿ ಅವಧಿಯ ಒಂದೊಂದು ಹಗರಣದ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು. ಇದು, ಬಿಜೆಪಿ ಅವಧಿಯ ಹಗರಣಗಳ ತನಿಖಾ ಪ್ರಗತಿ ಪರಿಶೀಲಿಸಿ ತ್ವರಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಚಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಶುಕ್ರವಾರ ನಡೆಸಿದ ಮೊದಲ ಸಭೆಯಲ್ಲಿ ಕೈಗೊಂಡಿರುವ ಸ್ಪಷ್ಟ ನಿರ್ಧಾರ.

ವಿಧಾನಸೌಧದಲ್ಲಿ ನಡೆದ ಮೊದಲ ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಎಚ್‌.ಸಿ.ಮಹದೇವಪ್ಪ ಸೇರಿದಂತೆ ಸಮಿತಿಯ ಇತರೆ ಎಲ್ಲ ಸದಸ್ಯರೂ ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿ ಅವಧಿಯ ಪ್ರತಿಯೊಂದು ಹಗರಣಗಳ ತನಿಖೆಯನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಈಗಾಗಲೇ ತನಿಖಾ ಹಂತದಲ್ಲಿರುವ ಪ್ರಕರಣಗಳಲ್ಲಿ ಆದಷ್ಟು ಬೇಗ ತನಿಖಾ ವರದಿ ಸರ್ಕಾರದ ಕೈಸೇರುವಂತೆ ಕ್ರಮ ವಹಿಸುವುದು. ಇದುವರೆಗೆ ತನಿಖೆಗೆ ವಹಿಸದ ಪ್ರಕರಣಗಳನ್ನೂ ಪರಿಶೀಲಿಸಿ ಅಗತ್ಯವಿರುವ ಪ್ರಕರಣಗಳನ್ನು ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ.

ಈಗಾಗಲೇ ತನಿಖಾ ಹಂತದಲ್ಲಿರುವ ಕೋವಿಡ್‌ ಹಗರಣ, 40 ಪರ್ಸೆಂಟ್‌ ಕಮಿಷನ್‌ ಆರೋಪ, ಪಿಎಸ್‌ಐ ನೇಮಕಾತಿ, ಅಕ್ರಮ ಆಸ್ತಿ ಗಳಿಕೆ ಹಗರಣ ಸೇರಿದಂತೆ 21 ಪ್ರಕರಣಗಳು ಯಾವ ಹಂತದಲ್ಲಿವೆ, ತನಿಖೆ ಪೂರ್ಣಗೊಳಿಸಲು ಇನ್ನೆಷ್ಟು ಕಾಲಾವಕಾಶ ಬೇಕು ಎಂದು ಪೊಲೀಸ್‌ ಇಲಾಖೆ, ಲೋಕಾಯುಕ್ತ ಹಾಗೂ ಸಿಐಡಿಯ ಸಂಬಂಧಿಸಿದ ತನಿಖಾ ಅಧಿಕಾರಿಗಳಿಂದ ಸಮಿತಿ ಮಾಹಿತಿ ಪಡೆಯಿತು. ಜೊತೆಗೆ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಇರುವ, ಮುಕ್ತಾಯಗೊಂಡಿರುವ ಹಾಗೂ ಬಿಜೆಪಿ ನಾಯಕರು ಜಾಮೀನು ಪಡೆದಿರುವ ಪ್ರಕರಣಗಳು ಹಾಗೂ ಕಾನೂನು ತೊಡಕಿರುವ ಪ್ರಕರಣಗಳಲ್ಲಿ ಮುಂದೇನು ಮಾಡಬೇಕು, ಮರು ತನಿಖೆಗೆ ಯಾವ ಪ್ರಕರಣಗಳನ್ನು ವಹಿಸಬಹುದು ಎಂಬ ಬಗ್ಗೆ ಕಾನೂನು ಪರಿಣತರಿಂದ ಸಲಹೆ ಪಡೆದುಕೊಂಡಿತು. ಇವುಗಳ ಜೊತೆಗೆ ತನಿಖೆಗೆ ವಹಿಸದೆ ಇರುವ ಯಾವ್ಯಾವ ಪ್ರಕರಣಗಳಿವೆ, ಅವುಗಳಲ್ಲಿ ಯಾವ ಪ್ರಕರಣಗಳನ್ನು ತನಿಖೆಗೆ ವಹಿಸಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮಾಹಿತಿ ಲಭ್ಯವಾಗಿದೆ.

ಯಾವ ಪ್ರಕರಣವನ್ನೂ ಬಿಡಲ್ಲ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್‌, ನಾವು ಬಿಜೆಪಿ ಅವಧಿಯ ಹಗರಣಗಳ ಪ್ರಕರಣಗಳನ್ನೂ ಸುಮ್ಮನೆ ಬಿಡುವುದಿಲ್ಲ. ಪ್ರತಿಯೊಂದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಇಂದಿನ ಸಭೆಯಲ್ಲಿ ತನಿಖಾ ಹಂತದಲ್ಲಿರುವ ವಿವಿಧ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ತನಿಖೆ ಈಗ ಯಾವ ಹಂತದಲ್ಲಿದೆ, ಯಾವ್ಯಾವ ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಲು ಇನ್ನೂ ಎಷ್ಟು ಕಾಲಾವಕಾಶ ಬೇಕು ಎಂಬ ಮಾಹಿತಿ ಪಡೆದಿದ್ದೇವೆ. ಜೊತೆಗೆ ಹೊಸದಾಗಿ ಮೂರು-ನಾಲ್ಕು ಪ್ರಕರಣಗಳನ್ನು ತನಿಖೆಗೆ ವಹಿಸುವ ಬಗ್ಗೆಯೂ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯದ್ದು ಮಾತ್ರವಲ್ಲ ಹಿಂದಿನ ನಮ್ಮ ಸರ್ಕಾರದ ಪ್ರಕರಣಗಳೂ ಇವೆ. ಎಲ್ಲವನ್ನೂ ತನಿಖೆ ಮಾಡಬೇಕಿದೆ, ಅವುಗಳನ್ನೂ ಗುರುತಿಸಿದ್ದೇವೆ. ಎರಡು ತಿಂಗಳೊಳಗೆ ಮುಖ್ಯಮಂತ್ರಿ ಅವರು ವರದಿ ಕೊಡಿ ಎಂದು ಹೇಳಿದ್ದಾರೆ. ಪ್ರತಿಯೊಂದು ಪ್ರಕರಣದಲ್ಲೂ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಿ, ಸಚಿವ ಸಂಪುಟಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ