;Resize=(412,232))
ಬೆಂಗಳೂರು : ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಬೆಂಗಳೂರಿಗಾಗಿ ಹಸಿರು ಕಾರ್ಯಸೂಚಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಮಂಗಳವಾರ ನಗರದಲ್ಲಿ ಈ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪಕ್ಷದ ರಾಜ್ಯ ಉಸ್ತುವಾರಿ ಋತುರಾಜ್ ಗೋವಿಂದ್ ಝಾ, ಬೆಂಗಳೂರು ಕೇವಲ ಒಂದು ನಗರವಲ್ಲ. ಇದು ನಮ್ಮ ಮನೆ, ಶಾಲೆ, ಉದ್ಯೋಗ, ವ್ಯಾಪಾರ ಮತ್ತು ನಮ್ಮ ಭವಿಷ್ಯದ ಆಧಾರವಾಗಿದೆ. ಒಮ್ಮೆ ಗಾರ್ಡನ್ ಸಿಟಿ ಎಂದು ಹಸಿರುವಾಸಿಯಾಗಿದ್ದ ಬೆಂಗಳೂರು ಇಂದು ಸಂಚಾರ ದಟ್ಟಣೆ, ಮಾಲಿನ್ಯ, ನೀರಿನ ಕೊರತೆ, ಪ್ರವಾಹ, ಕಸದ ಸಮಸ್ಯೆ ಮತ್ತು ಕುಸಿಯುತ್ತಿರುವ ನಾಗರಿಕ ಸೌಲಭ್ಯಗಳಿಂದ ಬಳಲುತ್ತಿದೆ ಎಂದರು.
ಬೆಂಗಳೂರಿನ ಸಮಸ್ಯೆಗಳ ಹಿಂದೆ ಕೇವಲ ಆಡಳಿತ ವೈಫಲ್ಯವಲ್ಲ, ಬಲವಾದ ಸ್ವಹಿತಾಸಕ್ತಿ ಜಾಲಗಳೂ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವುಗಳ ಶಾಶ್ವತ ಪರಿಹಾರಕ್ಕಾಗಿ ಬೆಂಗಳೂರಿಗೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ನಡೆಯಬೇಕು. ಕೆಲವು ಪ್ರಭಾವಿ ಗುಂಪುಗಳ ಲಾಭಕ್ಕಾಗಿ ಅಲ್ಲ. ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾದಾಗ ನಮ್ಮ ಕುಟುಂಬದೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯವನ್ನು ನಾವು ಕಳೆದುಕೊಳ್ಳುತ್ತೇವೆ ಎಂದು ಹೇಳಿದರು. ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಹಾಜರಿದ್ದರು.
ಕೆರೆಗಳು, ರಾಜಕಾಲುವೆ ಉಳಿಸಲು ಒತ್ತು
ಬೆಂಗಳೂರಿನ ಹಸಿರನ್ನು ಮರಳಿ ತರುತ್ತೇವೆ. 1 ಕೋಟಿ ಗಿಡಗಳನ್ನು ನೆಡುತ್ತೇವೆ
ಕಸ ಮುಕ್ತ ಬೆಂಗಳೂರು, ಸ್ವಚ್ಛ ರಸ್ತೆ ಮತ್ತು ವೈಜ್ಞಾನಿಕ ಕಸ ನಿರ್ವಹಣೆ
ನಡೆಯಲು ಸುರಕ್ಷಿತ ಬೆಂಗಳೂರು, ಉತ್ತಮ ಫುಟ್‌ಪಾತ್‌ಗಳು, ಸೈಕಲ್ ಮಾರ್ಗಗಳು
ಪ್ರವಾಹ ಮುಕ್ತ ಬೆಂಗಳೂರು, ಸೋಕ್ ಪಿಟ್‌ಗಳು, ರೀಚಾರ್ಜ್ ಬಾವಿಗಳು, ಕೆರೆಗಳ ಹೂಳು ತೆಗೆದು ಪ್ರವಾಹ ತಡೆ
ಉತ್ತಮ ರಸ್ತೆಗಳು
ಶುದ್ಧಗಾಳಿ, ಗಾಳಿಯ ಗುಣಮಟ್ಟ ಸುಧಾರಣೆ
ನೀರಿನ ಭದ್ರತೆ, ಮಳೆ ನೀರು ಸಂಗ್ರಹ, ಅಂಜರ್ತಲ ಮರುಪೂರಣ
ಸುಸ್ಥಿರ ಅಭಿವೃದ್ಧಿ, ಹಸಿರು ಕಟ್ಟಡಗಳು ಮತ್ತು ಸೌರಶಕ್ತಿ ಉತ್ತೇಜನ
ಸಾರ್ವಜನಿಕ ಸಾರಿಗೆಗೆ ಆದ್ಯತೆ