ಲಿಂಗಾಯತ ಸಚಿವರು ಒಟ್ಟಾಗಿ ಸಲ್ಲಿಸಿದ ಅಭಿಪ್ರಾಯ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : May 22, 2025, 01:02 AM ISTUpdated : May 22, 2025, 10:18 AM IST
Karnataka Chief Minister Siddaramaiah (File Photo/ANI)

ಸಾರಾಂಶ

ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತು ಲಿಂಗಾಯತ ಸಚಿವರು ಪತ್ರದ ಮೂಲಕ ಸಲ್ಲಿಸಿದ್ದ ಒಗ್ಗಟ್ಟಿನ ಅಭಿಪ್ರಾಯ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಅಭಿಪ್ರಾಯ ಮಂಡಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

 ಬೆಂಗಳೂರು : ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತು ಲಿಂಗಾಯತ ಸಚಿವರು ಪತ್ರದ ಮೂಲಕ ಸಲ್ಲಿಸಿದ್ದ ಒಗ್ಗಟ್ಟಿನ ಅಭಿಪ್ರಾಯ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಅಭಿಪ್ರಾಯ ಮಂಡಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೂ ಜಾತಿಗಣತಿ ವರದಿ ಅನುಷ್ಠಾನದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಜಾತಿಗಣತಿ ವರದಿ ಜಾರಿ ಸಂಬಂಧ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ಈ ಬಗ್ಗೆ ಸಚಿವರಿಂದ ವರದಿ ಕೇಳಲಾಗಿತ್ತು. ಹಿಂದಿನ ಸಂಪುಟ ಸಭೆಯಲ್ಲಿ ಮೌಖಿಕವಾಗಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಲು ಯತ್ನಿಸಿದರೂ ಸಿದ್ದರಾಮಯ್ಯ ಅವರು ಲಿಖಿತವಾಗಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ 11 ಮಂದಿ ಸಚಿವರು ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಚಿವರು ಜಾತಿಗಣತಿ ಒಪ್ಪಬಾರದು ಎಂದು ಹೇಳಿ ಒಂದೇ ಪತ್ರದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನು ಸಿದ್ದರಾಮಯ್ಯ ಅವರು ತಿರಸ್ಕಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಿಂಗಾಯತ ಸಚಿವರ ಪತ್ರದಲ್ಲೇನಿತ್ತು?:

ಲಿಂಗಾಯತ ಸಚಿವರು ಸಲ್ಲಿಸಿರುವ ಅಭಿಪ್ರಾಯ ಪತ್ರದಲ್ಲಿ ಸಾರ್ವಜನಿಕರಲ್ಲಿ ಜಾತಿಗಣತಿ ಕುರಿತು ಉಂಟಾಗಿರುವ ಆತಂಕ ಹೋಗಲಾಡಿಸಬೇಕು. ಪ್ರತಿ ವಿಧಾನಸಭಾಕ್ಷೇತ್ರ, ತಾಲೂಕು ವ್ಯಾಪ್ತಿಯಲ್ಲಿ ಕನಿಷ್ಠ ಶೇ.10ರಷ್ಟು ಸಮೀಕ್ಷಾ ಮಾದರಿ ಸಂಗ್ರಹಿಸಬೇಕು. ರ್‍ಯಾಂಡಮ್‌ ಸಮೀಕ್ಷೆ ನಡೆಸಿ ಮೂಲ ದತ್ತಾಂಶದೊಂದಿಗೆ ಹೋಲಿಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಜಯಪ್ರಕಾಶ್‌ ಹೆಗ್ಡೆಯವರೇ, ಕಾಂತರಾಜ್‌ ಆಯೋಗದ ವರದಿಯ ಮೂಲಪ್ರತಿ ಲಭ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಾಂತರಾಜ್‌ ಆಯೋಗದ ದತ್ತಾಂಶ ಆಧರಿಸಿ ಸಲ್ಲಿಸಿರುವ ಅಧ್ಯಯನ ವರದಿ ಪ್ರಶ್ನಾರ್ಹವಾಗಿದೆ. ಇದನ್ನು ಒಪ್ಪಿಕೊಳ್ಳುವುದು ತಪ್ಪಾಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈಗಾಗಲೇ, ಕೇಂದ್ರ ಸರ್ಕಾರವು ಮುಂಬರುವ ಜನಗಣತಿಯೊಂದಿಗೆ ಜಾತಿ ಸಮೀಕ್ಷೆ ಮಾಡುವುದಾಗಿ ಘೋಷಿಸಿದೆ. ಕೇಂದ್ರವು ಸಂಗ್ರಹಿಸುವ ಜನಗಣತಿಯ ಅಂಕಿ-ಅಂಶಗಳನ್ನು ಆಧರಿಸಿ, ಜಾತಿ ಮೀಸಲಾತಿಯನ್ನು ನಂತರದಲ್ಲಿ ಪರಿಷ್ಕರಿಸುವುದು ಸೂಕ್ತ. ಅಲ್ಲಿಯವರೆಗೆ ಸದರಿ ವರದಿಯನ್ನು ಮತ್ತು ಅದರ ಮೇಲೆ ಕೈಗೊಳ್ಳಲು ಉದ್ದೇಶಿಸಿರುವ ತೀರ್ಮಾನಗಳನ್ನು ತಡೆ ಹಿಡಿಯಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಸಚಿವರ ಒಗ್ಗಟ್ಟಿನ ಅಭಿಪ್ರಾಯ ತಿರಸ್ಕೃತ:

ಈ ಅಭಿಪ್ರಾಯವನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತ್ಯೇಕವಾಗಿ ಅಭಿಪ್ರಾಯ ಸಲ್ಲಿಸುವಂತೆ ಎಲ್ಲಾ ಸಚಿವರಿಗೂ ಸ್ಪಷ್ಟವಾಗಿ ಸೂಚಿಸಲಾಗಿತ್ತು. ಸಚಿವ ಸಂಪುಟ ಸದಸ್ಯರು ವೈಯಕ್ತಿಕವಾಗಿ ಅಭಿಪ್ರಾಯ ಸಲ್ಲಿಕೆ ಮಾಡಬೇಕು. ಇಂತಹ ಗಂಭೀರ ವಿಚಾರಗಳಲ್ಲಿ ಪ್ರತಿ ಸದಸ್ಯರ ಅಭಿಪ್ರಾಯವೂ ಮುಖ್ಯ. ಹೀಗಾಗಿ ಬಿಕ್ಕಟ್ಟಿನ ಬಗ್ಗೆ ಒಗ್ಗಟ್ಟಿನ ಉತ್ತರ ಪರಿಗಣಿಸಲಾಗದು ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

PREV
Read more Articles on

Recommended Stories

ಭಾರತದ ಸದೃಢ ಆರ್ಥಿಕತೆಗೆ ನೇತಾಜಿ ಬುನಾದಿ : ಡಾ.ಜಿ.ಪರಮೇಶ್ವರ್‌
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾಗಮೋಹನ್‌ ದಾಸ್ ಆಯೋಗ ಶಿಫಾರಸು