ಮಳೆ ಸಮಸ್ಯೆಗಳ ಪುನರಾವರ್ತನೆ: ಅಧಿಕಾರಿಗಳಿಗೆ ಬೆವರಿಳಿಸಿದ ಬಿಜೆಪಿ

KannadaprabhaNewsNetwork | Published : May 21, 2025 2:05 AM
ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಅನಾಹುತ ಸಂಭವಿಸಿರುವ ಪ್ರದೇಶಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
Follow Us

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಅನಾಹುತ ಸಂಭವಿಸಿರುವ ಪ್ರದೇಶಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಶಾಸಕರಾದ ಸತೀಶ್‌ ರೆಡ್ಡಿ, ಸಿ.ಕೆ.ರಾಮಮೂರ್ತಿ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಮುಖಂಡರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅವಾಂತರಗಳನ್ನು ಖುದ್ದು ವೀಕ್ಷಿಸಿದರು.

ಮೊದಲಿಗೆ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಿಯೋಗವು ಪರಿಶೀಲನೆ ನಡೆಸಿತು. ಬಳಿಕ ಜೆ.ಪಿ.ನಗರದ ಡಾಲರ್ಸ್‌ ಕಾಲೋನಿ, ಜಯನಗರ, ಗುರಪ್ಪನಪಾಳ್ಯ, ಬಿಸ್ಮಿಲ್ಲಾನಗರ, ಪದ್ಮನಾಭನಗರ ಸೇರಿದಂತೆ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅನಾಹುತಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಾರ್ವಜನಿಕರು ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬೆಸ್ಕಾಂ ಕಾಮಗಾರಿಗಳ ವಿಳಂಬದ ಬಗ್ಗೆ ದೂರು ಹೇಳಿಕೊಂಡರು. ಮಳೆ ಬಂದಾಗ ಏನೆಲ್ಲಾ ಸಮಸ್ಯೆಗಳಾಗುತ್ತಿವೆ ಎಂಬುದನ್ನು ಗಮನಕ್ಕೆ ತಂದರು.

ರಸ್ತೆಯಲ್ಲಿ ಹರಿಯುತ್ತಿದ್ದ ನೀರು, ಕೆಸರು ಲೆಕ್ಕಿಸದೆ ಬಿಜೆಪಿ ನಾಯಕರು ಮಳೆ ಅನಾಹುತಗಳನ್ನು ವೀಕ್ಷಿಸಿದರು. ಅನಾಹುತಗಳಿಗೆ ಕಾರಣವೇನು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಮಸ್ಯೆಗಳು ಪುನರಾವರ್ತನೆಯಾದರೂ ಶಾಶ್ವತ ಪರಿಹಾರ ಏಕೆ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದೆ. ಹೀಗಾಗಿ ಯಾವುದೇ ಅನಾಹುತಗಳು ಆಗದಂತೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡುವಂತೆ ಸೂಚಿಸಿದರು.

1,600 ಕೋಟಿ ರು. ರದ್ದು ಮಾಡಿದ್ದೇ ಈ ಸ್ಥಿತಿಗೆ ಕಾರಣ-ಅಶೋಕ್‌

ಮಳೆ ಅನಾಹುತ ಪ್ರದೇಶಗಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ಅವಧಿಯಲ್ಲಿ ರಾಜಕಾಲುವೆ, ರಸ್ತೆ ಅಭಿವೃದ್ಧಿ ಸೇರಿದಂತೆ ಬೆಂಗಳೂರು ಅಭಿವೃದ್ಧಿಗೆ 1,600 ಕೋಟಿ ರು. ನೀಡಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಆ ಕಾಮಗಾರಿಗಳನ್ನು ರದ್ದು ಮಾಡಿದೆ. ಆ ಕಾಮಗಾರಿಗಳು ನಡೆದಿದ್ದರೆ ಇಂತಹ ಪ್ರವಾಹದ ಸ್ಥಿತಿ ಬರುತ್ತಿರಲಿಲ್ಲ. ಬೆಂಗಳೂರಿಗೆ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.

ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಐದು ಜನರು ಸತ್ತಿದ್ದಾರೆ. ಇಂಥವರ ಸಾವಿನ ಮೇಲೆ ಕಾಂಗ್ರೆಸ್‌ ಸಾಧನೆಯ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು. ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸತ್ತಿದ್ದಾರೆ. ಇಂತಹ ಸಮಾವೇಶ ಮಾಡುವ ನೈತಿಕ ಅರ್ಹತೆ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.

ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್‌ ಅಳವಡಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಯಾವ ಕೆಲಸವೂ ಆಗಿಲ್ಲ. ಏ.15 ರಂದೇ ಹವಾಮಾನ ಇಲಾಖೆ ಮಳೆ ಜೋರಾಗಲಿದೆ ಎಂದು ಸೂಚನೆ ನೀಡಿತ್ತು. ಒಂದು ತಿಂಗಳ ಸಮಯದಲ್ಲಿ ಬಿಬಿಎಂಪಿಯಿಂದ ಮುಂಜಾಗ್ರತಾ ಸಭೆ ನಡೆಸಿಲ್ಲ. ಸಮಾವೇಶಕ್ಕೆ ಮಾತ್ರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡರು. 14 ಸಾವಿರ ಗುಂಡಿ ಮುಚ್ಚಿದ್ದೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರದ ಮೋಜು ಅಕ್ಷಮ್ಯ ಅಪರಾಧ: ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನಲ್ಲಿ ಮಳೆಗಾಲ ಸಂಬಂಧ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ಹೊಸಪೇಟೆಯಲ್ಲಿ ಮೋಜು ಮಾಡುತ್ತಿದೆ. ಕಳೆದ ಎರಡು ವರ್ಷ ಮಾಡಿರುವ ಕೆಲಸದಗಳ ಬಗ್ಗೆ ಹೇಳಿಕೊಂಡು ಮೋಜು ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಟೀಕಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಒಂದು ಅಯೋಗ್ಯ ಸರ್ಕಾರ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಯಾವುದೂ ಇಲ್ಲ. ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಕಡೆ ಮುಖ್ಯಮಂತ್ರಿಗಳು ಗಮನ ಕೊಡಬೇಕು. ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಆಗ್ರಹಿಸಿದರು.

ಕೆಲವೇ ಕೆಲವು ಗಂಟೆ ಮಳೆ ಬಂದಿದ್ದಕ್ಕೆ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರು ಟಾಲೆಸ್ಟ್ ಟವರ್, ಸುರಂಗ ರಸ್ತೆ ಕುರಿತು ಮಾತನಾಡುತ್ತಾರೆ. ನಗರದ ಜನತೆಗೆ ಇವುಗಳ ಅಗತ್ಯವಿಲ್ಲ. ಬದಲಾಗಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಬೇಕು. ರಾಜಕಾಲುವೆಗಳ ಸರಿಪಡಿಸಬೇಕು. ಕೆರೆಗಳ ಒತ್ತುವರಿ ಸರಿಪಡಿಸಬೇಕು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಮಳೆ ಯಾವ ತಿಂಗಳಲ್ಲಿ ಬರಲಿದೆ ಎಂಬುದು ಗೊತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.